ಸಾರಾಂಶ
ಕನ್ನಡಪ್ರಭವಾರ್ತೆ ಭದ್ರಾವತಿ
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಕಾರ ಅಗತ್ಯವಾಗಿದೆ. ಶಿಕ್ಷಕರು ಜಾಗೃತರಾಗುವುದರಿಂದ ಮಕ್ಕಳಲ್ಲಿ ಅರಿವು ಮೂಡಿಸಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು. ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಆಗಸ್ಟ್, ಜೂನ್ ತಿಂಗಳಲ್ಲಿ ಆರಂಭಗೊಳ್ಳುವ ಮಳೆಯಿಂದ ಚರಂಡಿ ಮತ್ತು ಇತರೆಡೆ ಸಂಗ್ರಹಗೊಳ್ಳುವ ನೀರಿನಿಂದ ಸೊಳ್ಳೆಗಳ ಹಾವಳಿ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡಲು ಆರಂಭವಾಗುತ್ತದೆ. ಒಂದು ಸೊಳ್ಳೆ ೨೦೦ ರಿಂದ ೪೦೦ ಮೊಟ್ಟೆ ಇಟ್ಟು ತನ್ನ ಸಂತಾನಭಿವೃದ್ಧಿಯನ್ನು ಮಾಡುತ್ತದೆ. ಇದರಿಂದ ನೀವು ರೋಗ ಹರಡುವ ತೀವ್ರತೆಯನ್ನು ತಿಳಿಯಬಹುದು ಎಂದರು.
ಡೆಂಘೀ ಜ್ವರ ಒಂದು ಮಾರಕ ಕಾಯಿಲೆಯಾಗಿದ್ದು, ಇದು ಏಡೀಸ್ ಈಜಿಪ್ಟ್ ಎಂಬ ಸೊಳ್ಳೆಯ ಕಟ್ಟುವಿಕೆಯಿಂದ ಹರಡುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಡೆಂಗ್ಯೂ ಕಾಯಿಲೆ ಲಕ್ಷಣಗಳಾಗಿವೆ. ಈ ಕಾಯಿಲೆಗೆ ಯಾವುದೇ ನಿರ್ಧಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಸಾರವಾಗಿ ವೈದ್ಯರಿಂದ ಪರೀಕ್ಷಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದರು.ಮನೆಯ ಸುತ್ತ ನಿಂತ ನೀರು, ಸರಿಯಾಗಿ ಮುಚ್ಚದಿರುವ ನೀರು ಶೇಖರಣೆಯ ಬಕೆಟ್, ಬಾನಿ, ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್ ಇತ್ಯಾದಿ ಹಾಗು ಹೂವಿನ ಕುಂಡ, ಏರ್ ಕೂಲರ್, ಫ್ರಡ್ಜ್ ಹಾಗು ಘನ ತ್ಯಾಜ್ಯಗಳಾದ ಬೇಡವಾದ ಡಬ್ಬ, ಒಡೆದ ಬಾಟಲಿ, ಟಯರ್, ಒಳಕಲ್ಲು, ತೆಂಗಿನಚಿಪ್ಪು, ಅಡಕೆ ಹಾಳೆ ಇತ್ಯಾದಿಗಳಲ್ಲಿ ಸಂಗ್ರಹಣೆಯಾದ ನೀರಿನಲ್ಲಿ ಏಡೀಸ್ ಈಜಿಪ್ಟ್ ಸೊಳ್ಳೆಗಳು ಮೊಟ್ಟೆಗಳನ್ನು ಇಟ್ಟು ತನ್ನ ಸಂತಾನಾಭಿವೃದ್ಧಿ ಮಾಡುತ್ತವೆ. ಈ ಹಿನ್ನಲೆಯಲ್ಲಿ ನೀರು ಸಂಗ್ರಹಣೆಯಾಗದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ನಿಯಂತ್ರಣ ಒಂದೇ ಈ ಕಾಯಿಲೆ ಹತೋಟಿಗೆ ಮುಖ್ಯ ವಿಧಾನವಾಗಿದೆ. ಈ ಹಿನ್ನಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ಡೆಂಘೀ ಸೇರಿದಂತೆ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಇಂದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಎಲ್ಲಾ ಸಮಸ್ಯೆಗಳನ್ನು ಆರೋಗ್ಯ ಇಲಾಖೆಯಿಂದಲೇ ಬಗೆಹರಿಸಲು ಸಾಧ್ಯವಿಲ್ಲ. ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಬಹುಮುಖ್ಯ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಆನಂದಮೂರ್ತಿ, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಬಾಯಿ, ಸಿಬ್ಬಂದಿ ಅಂಕಿತ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಣ ಇಲಾಖೆಯ ವಿಜ್ಞಾನ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.