ಡೆಂಘೀ ನಿಯಂತ್ರಣಕ್ಕೆ ಆರೋಗ್ಯ, ಆಯುಷ್ ಇಲಾಖೆ ಹರಸಾಹಸ

| Published : Jul 03 2024, 01:22 AM IST

ಸಾರಾಂಶ

ತರೀಕೆರೆಯಲ್ಲಿ ಆರೋಗ್ಯ ಇಲಾಖೆ ಮತ್ತು ಆಯುಷ್ ಇಲಾಖೆ ವತಿಯಿಂದ ಪಟ್ಟಣದಲ್ಲಿ ಡೆಂಘೀ ರೋಗ ನಿಯಂತ್ರಣ ಕುರಿತು ಜಾಗೃತಿ ಜಾಥ ನಡೆಯಿತು.

ಕನ್ನಡಪ್ರಭ ವಾರ್ತೆ ತರೀಕೆರೆದಿನದಿಂದ ದಿನಕ್ಕೆ ಪಟ್ಟಣದಲ್ಲಿ ಹರಡುತ್ತಿರುವ ಡೆಂಘೀ ರೋಗ ನಿಯಂತ್ರಿಸಲು ಆರೋಗ್ಯ ಇಲಾಖೆ ಮತ್ತು ಆಯುಷ್ ಇಲಾಖೆ ಜಂಟಿ ಹೋರಾಟ ನೆಡೆಸುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಹಾಗೂ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಪ್ರತಿ ಮನೆ ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಲಾರ್ವಾ ಪರೀಕ್ಷೆ ನೆಡೆಸುತ್ತಿದ್ದು, ಡೆಂಘೀ ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ. ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಪಟ್ಟಣದ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಡೆಂಘೀ ಹರಡದಂತೆ ತಡೆಗಟ್ಟಲು ಆರೋಗ್ಯ ಮತ್ತು ಆಯುಷ್ ಇಲಾಖೆಯ ವೈದ್ಯರು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ಡೆಂಘೀ ಮತ್ತು ಚಿಕುನ್ ಗುನ್ಯಾ ನಿಯಂತ್ರಸಲು ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿ.ಹೆಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್, ಸಾರ್ವಜನಿಕ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪುರಸಭೆ ವತಿಯಿಂದ ಡೆಂಘೀ ರೋಗ ನಿಯಂತ್ರಿಸಲು ಸಮರೋಪಾದಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಡೆಂಘೀ ರೋಗವು ಇಡಿಸ್-ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುವ ರೋಗವಾಗಿದೆ. ಈ ಸೊಳ್ಳೆಯು ನಿಂತ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ನೂರಾರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜೆ.ಚಂದ್ರಶೇಖರ್ ತಿಳಿಸಿದ್ದಾರೆ.

ಡೆಂಘೀ ನಿಯಂತ್ರಣಕ್ಕೆ ಆಯುಷ್ ಸಂರಕ್ಷಣಾ ವಿಧಾನಗಳು: ಗೋಮಯ್ಯದೊಂದಿಗೆ ಬೇವಿನ, ಹೊಂಗೆ ಅಥವಾ ಲಕ್ಕಿ ಸೊಪ್ಪಿನ ಪೇಸ್ಟ್ ತಯಾರಿಸಿ ಅದರ ಜೊತೆಗೆ ಒಣಗಿಸಿದ ಚೆಂಡು ಹೂವಿನ ದಳಗಳನ್ನು ಸೇರಿಸಿ ಬೆರಣಿ ಮಾಡಿ ಬೇವಿನ ಎಣ್ಣೆಯನ್ನು ಸೇರಿಸಿ ದೂಪ ಹಾಕಬಹುದು ಮತ್ತು ಮಣ್ಣಿನ ಅಥವಾ ಲೋಹದ ಪಾತ್ರೆಯಲ್ಲಿ ಇದ್ದಿಲು ಹಾಗೂ ಸ್ವಲ್ಪ ಪ್ರಮಾಣದಲ್ಲಿ ಕರ್ಪೂರ ಸೇರಿಸಿ ಬೇವಿನ ಎಲೆ, ಸಾಸಿವೆ, ತುಳಸಿ ಬೀಜ, ಬೆಳ್ಳುಳ್ಳಿ ಸಿಪ್ಪೆ, ಲಕ್ಕಿ ಸೊಪ್ಪು ಸೇರಿಸಿ ಧೂಪವನ್ನು ಬೆಳಗ್ಗೆ ಮತ್ತು ಸಾಯಂಕಾಲ ಎರಡು ಬಾರಿ ಹಾಕುವುದು ಎಂದು ಆಯುರ್ವೇದ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಕಿಶೋರ್ ಕುಮಾರ್ ತಿಳಿಸಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.