ಗ್ರಾಮೀಣ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿ: ಸಾಧನಶ್ರೀ

| Published : May 21 2024, 12:34 AM IST

ಗ್ರಾಮೀಣ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿ: ಸಾಧನಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶದಿಂದ ನಾನು ಮತ್ತು ನನ್ನ ಸಹೋದ್ಯೋಗಿ ವೈದ್ಯರ ತಂಡ ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಸಾರ್ವಜನಿಕರ ಸ್ಪಂದನೆ ಸಹ ಉತ್ತಮವಾಗಿದೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗಿದ್ದು, ಗ್ರಾಮೀಣ ಪ್ರದೇಶದ ಜನ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೈದ್ಯೆ ಸಾಧನಶ್ರೀ ತಿಳಿಸಿದರು.

ತಾಲೂಕಿನ ಕನ್ನಮಂಗಲ ಬಳಿಯ ಸಾಧನ ವಿದ್ಯಾಲಯದ ಆವರಣದಲ್ಲಿ ಸಾಧನ ಸಂಗಮ ಟ್ರಸ್ಟ್‌ನ ಆರೋಗ್ಯವರ್ದಿನಿ ಆಯುರ್ವೇದ ವಿಭಾಗ ಆಯೋಜಿಸಿದ್ದ ೧೫ನೇ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶದಿಂದ ನಾನು ಮತ್ತು ನನ್ನ ಸಹೋದ್ಯೋಗಿ ವೈದ್ಯರ ತಂಡ ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಸಾರ್ವಜನಿಕರ ಸ್ಪಂದನೆ ಸಹ ಉತ್ತಮವಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಜನರು ತಮ್ಮ ದಿನನಿತ್ಯದ ಕೆಲಸ- ಕಾರ್ಯಗಳ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಪ್ರವೃತಿ ದೂರವಾಗಬೇಕು. ಯಾವುದೇ ಕಾಯಿಲೆ ಇರಲಿ, ಅದು ಉಲ್ಭಣಿಸುವ ಮುನ್ನವೇ ಅದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಬಡ ಜನರಿಗೆ ಉಚಿತವಾಗಿ ನಮ್ಮ ಕೈಲಾದ ಸೇವೆ ಮಾಡುವ ಉದ್ದೇಶದೊಂದಿಗೆ ಈ ಕಾರ್ಯವನ್ನು ಮಾಡುತ್ತಿದ್ದು, ನಾವಿರುವಷ್ಟು ದಿನವೂ ಇದನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.

ಥೈರಾಯ್ಡ್ ಸಮಸ್ಯೆ ಸಂಬಂಧ ಡಾ. ಆನಘಾ ಮಾಹಿತಿ ನೀಡಿ, ಅದಕ್ಕಿರುವ ಪರಿಹಾರೋಪಾಯಗಳ ಬಗ್ಗೆ ತಿಳಿಸಿಕೊಟ್ಟರು.

ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ತಜ್ಙ ವೈದ್ಯರ ತಂಡ ಮೂಳೆ ಸಂಬಂಧ ಕಾಯಿಲೆ, ಉದರ ರೋಗಗಳು, ನರಗಳ ತೊಂದರೆ, ಸ್ತ್ರೀ ಸಂಬಂಧ ತೊಂದರೆ, ಕಣ್ಣು, ಕಿವಿ, ಮೂಗು, ಚರ್ಮ ಕಾಯಿಲೆ ಸೇರಿ ಹಲವು ರೋಗಗಳಿಗೆ ಶಿಬಿರದಲ್ಲಿ ಪರೀಕ್ಷೆ ನಡೆಸಿ ತಪಾಸಣೆ ನಡೆಸಿದ್ದಲ್ಲದೆ, ಆರೋಗ್ಯ ಸಲಹೆ, ಔಷದಿ ವಿತರಣೆ, ಆರೋಗ್ಯ ಸಂಬಂಧ ಉಪನ್ಯಾಸ ಸಹ ನೀಡಲಾಯಿತು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯರಾದ ಮೋಹನ್, ಸಾಧನ ವಿದ್ಯಾಲಯದ ಮುಖ್ಯೋಪಾಧ್ಯಾಯ ಚನ್ನವೀರಪ್ಪ ಸೇರಿ ಹಲವರು ಉಪಸ್ಥಿತರಿದ್ದರು.