ಸಿದ್ಧಗಂಗಾ ಮಠದ 9 ಸಾವಿರ ಮಕ್ಕಳಿಗೆ ಆರೋಗ್ಯ ತಪಾಸಣೆ

| Published : Aug 11 2024, 01:31 AM IST

ಸಾರಾಂಶ

ಸಿದ್ಧಗಂಗಾ ಮಠದ 10 ಸಾವಿರ ಮಕ್ಕಳ ಆರೋಗ್ಯ ಕಾಳಜಿಗಾಗಿ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಪನ್ನವಾಗಿದ್ದು, 9 ಸಾವಿರ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಕಾಲೇಜು ತಿಳಿಸಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಿದ್ಧಗಂಗಾ ಮಠದ 10 ಸಾವಿರ ಮಕ್ಕಳ ಆರೋಗ್ಯ ಕಾಳಜಿಗಾಗಿ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಪನ್ನವಾಗಿದ್ದು, 9 ಸಾವಿರ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಕಾಲೇಜು ತಿಳಿಸಿದೆ. ಆ.5 ರಿಂದ ಆರಂಭವಾದ ಶಿಬಿರಕ್ಕೆ ಹಿರಿಯ ಕಲಾವಿದ ದೊಡ್ಡಣ್ಣ, ನಿವೃತ್ತ ಸಹಾಯಕ ಔಷಧಿ ನಿಯಂತ್ರಕ ಗೋಣಿ ಪಕೀರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಮೈಕ್ರೋಲ್ಯಾಬ್ಸ್, ಬಿಡದಿ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಫೌಂಡೇಷನ್ ಟ್ರಸ್ಟ್, ಗೂರ್ಸ್ಔ, ಜೈನ್ ಡಿಸ್ಟಿಬ್ಯೂರ್ಸ್‌ ಸೇರಿದಂತೆ 10 ಕ್ಕೂ ಹೆಚ್ಚು ಔಷಧಿ ಸಂಸ್ಥೆಗಳ ಸಹಯೋಗ ನೀಡಿದ್ದು ನಗರದ ಶ್ರೀದೇವಿ ಹಾಗೂ ಸಿದ್ಧರ್ಥಿ ವೈದ್ಯಕೀಯ ಕಾಲೇಜು, ಶಂಕರ್ ಕಣ್ಣಿನ ಆಸ್ಪತ್ರೆ, ದಯಾನಂದ ಸಾಗರ್ ದಂತ ವೈದ್ಯಕೀಯ ಕಾಲೇಜುಗಳು ಸಹ ಕೈ ಜೋಡಿಸಿದ್ದರು. ಸಹಜವಾಗಿ ಮಳೆಗಾಲದ ಸಂದರ್ಭದಲ್ಲಿ ಮಕ್ಕಳಿಗೆ ಕಾಡುವ ಜ್ವರ, ಚರ್ಮದ ಸಮಸ್ಯೆ, ದಂತದ ಸಮಸ್ಯೆ, ಕೆಮ್ಮು, ಕಣ್ಣು ಆರೋಗ್ಯ ಸಮಸ್ಯೆಗಳಿಗೆ 80ಕ್ಕೂ ಹೆಚ್ಚು ವೈದ್ಯರು, 150ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳು ವಿವಿಧ ವಿಭಾಗದ ಅಡಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ ವಿವಿಧ ಆರೋಗ್ಯ ಸಮಸ್ಯೆಯುಳ್ಳ 300ಕ್ಕೂ ಹೆಚ್ಚು ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಸಿದ್ಧಗಂಗಾ ವೈದ್ಯಕೀಯ ಕಾಲೇಜಿಗೆ ಸೂಚಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನು ಸ್ಥಳದಲ್ಲಿಯೇ ನೀಡಲಾಗಿದ್ದು, ಉಳಿದಂತೆ ಎಲ್ಲಾ ಮಕ್ಕಳಿಗೂ ಜಂತುಹುಳು ಬಾಧೆ ನರ್ವನಹಣೆಗೆ ಸಿರಪ್ ಹಾಗೂ 20 ಲಕ್ಷ ರು. ಮೌಲ್ಯದ ಪ್ರಾಥಮಿಕ ಔಷಧಿಗಳನ್ನು ನೀಡಲಾಗಿದೆ ಎಂದು ತಿಳಿಸಿದೆ. ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯಕನಿರ್ವಾಹಕ ನಿರ್ದೇಶಕ ಡಾ.ಸಚ್ಚಿದಾನಂದ್ ಮಾತನಾಡಿ, ಕಾಯಿಲೆಗೂ ಮೊದಲೇ ಚಿಕಿತ್ಸೆ ನೀಡಿದರೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸಿ ಶೈಕ್ಷಣಿಕ ಜೀವನಕ್ಕೆ ಅಣಿಮಾಡಬಹುದು. ಚಿಕಿತ್ಸೆಯ ಜೊತೆಗೆ ಜಾಗೃತಿ ಮೂಡಿಸುವ ಸಲುವಾಗಿ ಕಳೆದ 19 ವರ್ಷಗಳಿಂದ ನಡೆಯುತ್ತಿರುವ ಆರೋಗ್ಯ ತಪಾಸಣೆ ಶಿಬಿರ ಆರೋಗ್ಯ ಕ್ಷೇತ್ರದ ಮೈಲಿಗಲ್ಲು ಎಂದರು. ಸಿದ್ಧಗಂಗಾ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಎಸ್.ಪರಮೇಶ್‌ ಮಾತನಾಡಿ, ಕಳೆದ 19 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಆರೋಗ್ಯ ಸೇವೆಗೆ ಕಳೆದ 7 ವರ್ಷಗಳಿಂದ ಸಿದ್ಧಗಂಗಾ ಆಸ್ಪತ್ರೆ ಶಿಬಿರದ ನೇತೃತ್ವ ವಹಿಸಿದ್ದು, ಇದಲ್ಲದೆ 365 ದಿನವೂ ಮಠದ ಮಕ್ಕಳ ಆರೋಗ್ಯದಲ್ಲಿ ಯಾವುದೇ ಏರುಪೇರಾದರೂ ಕೂಡ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಪ್ರಾಚರ್ಯೆ ಡಾ.ಶಾಲಿನಿ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಸಿದ್ಧಗಂಗಾ ಆಸ್ಪತ್ರೆಯ ಸಿಇಒ ಡಾ.ಸಂಜೀವ್ ಕುಮಾರ್, ಸಿದ್ಧಗಂಗಾ ಆಸ್ಪತ್ರೆ ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಮಂಜುನಾಥ್, ಈಶ್ವರ್, ಕಾಂತರಾಜು ಭಾಗವಹಿಸಿದ್ದರು.