ಕೋವಿಡ್‌ ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧ

| Published : Dec 20 2023, 01:15 AM IST

ಸಾರಾಂಶ

ಆಗಾಗ ರೂಪಾಂತರಗೊಂಡು ಸಾರ್ವಜನಿಕರಿಗೆ ಆತಂಕ ಸೃಷ್ಟಿಸುವ ಕೋವಿಡ್‌ ಹರಡದಂತೆ ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಕೋವಿಡ್‌ ವೈರಸ್‌ನ ರೂಪಾಂತರಿ ಜೆಎನ್‌. 1 ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಪತ್ತೆಯಾದ ಹಿನ್ನೆಲೆ ತಾಲೂಕಿನಲ್ಲೂ ಕೋವಿಡ್‌ ಎದುರಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಕಳೆದ ಒಂದು ವಾರದಿಂದ ಚಳಿ ಹೆಚ್ಚಾಗಿದ್ದು, ಅನೇಕ ಜನರು ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ಇದೀಗ ಕೋವಿಡ್‌ ಆತಂಕ ಆರಂಭವಾಗಿದೆ.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಸಾರ್ವಜನಿಕ ಆಸ್ಪತ್ರೆಯಲ್ಲಿ 90 ಜಂಬೋ ಆಕ್ಸಿಜನ್‌ ಸಿಲಿಂಡರ್‌ಗಳು, 50 ಕಾನ್ಸಂಟ್ರೇಟರ್ಸ್‌, 10 ವೆಂಟಿಲೇಟರ್‌ಗಳು, 23 ಐಸಿಯು ಬೆಡ್‌ಗಳು ಸಿದ್ಧಗೊಂಡಿವೆ.

ಆಕ್ಸಿಜನ್‌ ಉತ್ಪಾದನಾ ಘಟಕ:

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ತಂದೆ- ತಾಯಿಯವರ ಹೆಸರಿನಲ್ಲಿ ಇಲ್ಲಿಯ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ ಆಕ್ಸಿಜನ್‌ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿದೆ. ಹೀಗೆ ಅಗತ್ಯ ಪ್ರಮಾಣದ ಆಕ್ಸಿಜನ್‌, ಬೆಡ್‌ಗಳು, ಸಿಲಿಂಡರ್‌ಗಳಿವೆ. ಆದರೆ ಇನ್ನೂ ಕೋವಿಡ್‌ ಪರೀಕ್ಷಾ ಕಿಟ್‌ಗಳು ಬರಬೇಕಾಗಿದೆ.

ನೆಗಡಿ, ಕೆಮ್ಮು ಜ್ವರದ ಲಕ್ಷಣ ಇರುವ ಜನರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯ ಆರಂಭವಾಗಬೇಕಿದೆ. ಅತ್ಯಂತ ಹಿಂದುಳಿದ ತಾಲೂಕಾದ ಹರಪನಹಳ್ಳಿಯಲ್ಲಿ ಕೂಲಿ ಕಾರ್ಮಿಕರೆ ಹೆಚ್ಚಾಗಿದ್ದು, ನಿತ್ಯ ನರೇಗಾ ಸೇರಿದಂತೆ ವಿವಿಧ ಕೂಲಿ ಕೆಲಸಗಳಲ್ಲಿ ತೊಡಗಿದ್ದಾರೆ. ಅಂಥವರ ಮೇಲೆ ನಿಗಾ ಇಟ್ಟು ಕೋವಿಡ್‌ ಮುಂಜಾಗ್ರತಾ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳುವ ಅಗತ್ಯವಿದೆ.

ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಪಿಡಿಒಗಳು ಸಹ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಪ್ರತಿಕ್ರಿಯಿಸಿ, ನಮಗಿನ್ನೂ ಸರ್ಕಾರದ ಮಾರ್ಗಸೂಚಿ ಬಂದಿಲ್ಲ. ಆದರೂ ಪಟ್ಟಣದಲ್ಲಿ ಹೆಚ್ಚಿನ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಒಟ್ಟಿನಲ್ಲಿ ಆಗಾಗ ರೂಪಾಂತರಗೊಂಡು ಸಾರ್ವಜನಿಕರಿಗೆ ಆತಂಕ ಸೃಷ್ಟಿಸುವ ಕೋವಿಡ್‌ ಹರಡದಂತೆ ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜನರು ಸಹ ಭಯ ಬೀಳದೆ ಎಚ್ಚರದಿಂದ ಇರಬೇಕಾಗಿದೆ.

ಸೂಕ್ತ ಚಿಕಿತ್ಸೆ:

ಕೋವಿಡ್‌ ಪರೀಕ್ಷಾ ಕಿಟ್‌ಗಳು ಒಂದೆರಡು ದಿನದಲ್ಲಿ ಬರುವ ನಿರೀಕ್ಷೆ ಇದೆ. ಬಂದ ಕೂಡಲೇ ನಮ್ಮ ಸಿಬ್ಬಂದಿ ಕೋವಿಡ್‌ ಲಕ್ಷಣ ಇರುವ ಜನರನ್ನು ಪತ್ತೆ ಹಚ್ಚುವರು. ಪ್ರಕರಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಹಾಲಸ್ವಾಮಿ ತಿಳಿಸಿದರು.ಔಷಧಕ್ಕೆ ಬೇಡಿಕೆ:

ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಕ್ಸಿಜನ್‌ ಸಮಸ್ಯೆ ಇಲ್ಲ. ಇನ್ನೂ ಹೆಚ್ಚಿನ ಮೆಡಿಸಿನ್‌ಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಂಕರನಾಯ್ಕ ತಿಳಿಸಿದರು.