ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಶನಿವಾರಸಂತೆ ಮತ್ತು ಸೋಮವಾರಪೇಟೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಭಾನುವಾರ ಹನುಮ ಜಯಂತಿ ಪ್ರಯುಕ್ತ 2ನೇ ವರ್ಷದ ಅದ್ದೂರಿ ಶೋಭಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.ಹನುಮ ಜಯಂತಿ ಪ್ರಯುಕ್ತ ಭಾನುವಾರ ಬೆಳಗ್ಗೆ ಪಟ್ಟಣದ ಶ್ರೀ ರಾಮಮಂದಿರದಲ್ಲಿ ಅರ್ಚಕರಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು ದೇವಾಲಯದಲ್ಲಿ ಶ್ರೀ ಆಂಜನೇಯ ದೇವರಿಗೆ ವಿಶೇಷ ಪೂಜಾ ವಿದಿವಿಧಾನವನ್ನು ನೆರವೇರಿಸಲಾಯಿತು ಈ ಸಂದರ್ಭದಲ್ಲಿ ನೂರಾರು ಭಕ್ತರು ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಹನುಮ ಜಯಂತಿ ಪ್ರಯುಕ್ತ ಸಂಜೆ 4.30ಕ್ಕೆ ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶೋಭಯಾತ್ರೆಗೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಹೊರಟ ಶೋಭಯಾತ್ರೆಯು ಪಟ್ಟಣದ ಮುಖ್ಯರಸ್ತೆ ಮಾರ್ಗವಾಗಿ ಸಂಚರಿಸಿ ಪಟ್ಟಣದ ಸಮಿಪದಲ್ಲಿರುವ ಗುಡುಗಳಲೆ ಶ್ರೀ ಬಸವೇಶ್ವರ ದೇವಾಲಯ ತಲುಪಿತು. ತದನಂತರ ಶೋಭಯಾತ್ರೆಯು ವಾಪಸ್ ಪಟ್ಟಣದ ಬೈಪಾಸ್ ರಸ್ತೆ ಮಾರ್ಗವಾಗಿ ಸಾಗಿತು ನಂತರ ಕೆಆರ್‍ಸಿ ವೃತ್ತದಲ್ಲಿರುವ ಬನ್ನಿ ಮಂಟಪವನ್ನು ತಲುಪಿತು. ಈ ಮೂಲಕ ಶೋಭಯಾತ್ರೆಯು ರಾತ್ರಿ 8 ಗಂಟೆ ಸುಮಾರಿಗೆ ಸಂಪೂರ್ಣಗೊಂಡಿತು. ಶೋಭಯಾತ್ರಯಲ್ಲಿ ವಿದ್ಯುತ್ ದೀಪಾಲಂಕಾರಗೊಳಿಸಿದ ಮಂಟಪದಲ್ಲಿ ಬೆಳ್ಳಿರಥ ಇರಿಸಲಾಯಿತು. ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್, ಚಂಡೆವಾದ್ಯ, ಡಿಜೆ ಸೌಂಡ್ ವ್ಯವಸ್ಥೆ ಮಾಡಲಾಗಿತ್ತು.
ಹನುಮ ಜಯಂತಿ ಪ್ರಯುಕ್ತ ಪಟ್ಟಣದ ಕೆಆರ್‍ಸಿ ವೃತ್ತದಲ್ಲಿ ಕೇಸರಿ ತಳೀರು ತೋರಣ ಕಟ್ಟಿ ಅಲಂಕರಿಸಿದ್ದ ಜೊತೆಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ಶೋಭಯಾತ್ರೆ ಪ್ರಯುಕ್ತ ಸಿಡಿಮದ್ದಿನ ಪ್ರದರ್ಶನ ನಡೆಯಿತು. ಶೋಭಯಾತ್ರೆಯಲ್ಲಿ ಪಟ್ಟಣ ಅಕ್ಕಪಕ್ಕದ ಗ್ರಾಮಗಳಿಂದ ಸೇರಿದಂತೆ ಸೋಮವಾರಪೇಟೆ ತಾಲೂಕಿನಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಸೇರಿದಂತೆ ಹಿಂದೂಪರ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಹನುಮ ಜಯಂತಿ ಪ್ರಯುಕ್ತ ಪಟ್ಟಣದ ಕೆಆರ್‍ಸಿ ವೃತ್ತದಲ್ಲಿ ಭಕ್ತಾಧಿಗಳಿಗೆ, ಸಾರ್ವಜನಿಕರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆ ಪಟ್ಟಣದಲ್ಲಿ ಮುಂಜಾಗ್ರತೆಯಾಗಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತು.