ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ಆರೋಗ್ಯ ಸೇವೆಗಾಗಿ ಕಿಕ್ಕಿರಿದು ತುಂಬಿರುವ ಹಾನಗಲ್ಲ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿ ಆರೋಗ್ಯ ಸೌಲಭ್ಯಗಳ ತೀವ್ರ ಕೊರತೆಯಾಗಿದ್ದು, ಆರೋಗ್ಯ ಇಲಾಖೆಯೇ ಕಾಯಿಲೆ ಪೀಡಿತವಾಗಿದೆ.

ತಾಲೂಕಲ್ಲಿ ವೈದ್ಯರಾದಿಯಾಗಿ ಸೇವೆ ಸಲ್ಲಿಸುವ ಸಿಬ್ಬಂದಿ 121 ಮಾತ್ರ, ಖಾಲಿ ಹುದ್ದೆಗಳೇ 173, ತಾಲೂಕು ಆರೋಗ್ಯ ಕೇಂದ್ರದಲ್ಲಿಯೇ ಮುಖ್ಯವಾಗಿ ಅರವಳಿಕೆ ತಜ್ಞರಿಲ್ಲ, ಚರ್ಮರೋಗ ತಜ್ಞರೂ ಇಲ್ಲ. ಬಂದವರು ಇಲ್ಲಿ ನಿಲ್ಲುತ್ತಲೂ ಇಲ್ಲ. ಮುಖ್ಯವಾಗಿ ಸರ್ಜನ್ ತಜ್ಞ ವೈದ್ಯರಿಲ್ಲ. ಆಂಬ್ಯುಲೆನ್ಸ ಕೊರತೆ ಕಾಡುತ್ತಿದೆ, ಔಷಧಿ ಸರಬರಾಜು ಕೂಡ ಸಮರ್ಪಕವಾಗಿಲ್ಲ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸ್ಥಳೀಯ ಕಾಂಗ್ರೆಸ್‌ ಶಾಸಕ ಶ್ರೀನಿವಾಸ ಮಾನೆ ಕಣ್ತೆರೆದು ನೋಡುತ್ತಿಲ್ಲ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.ಹಾನಗಲ್ಲ ತಾಲೂಕಿನಲ್ಲಿ 14 ಸರ್ಕಾರಿ ಆಸ್ಪತ್ರೆಗಳು. ತಾಲೂಕು ಕೇಂದ್ರದಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ. ಅಕ್ಕಿಆಲೂರಿನಲ್ಲಿ ಸಮುದಾಯ ಆರೋಗ್ಯ ಕೆಂದ್ರವಿದೆ. 3 ಯುನಾನಿ ಹೋಮಿಯೋಪತಿ ಆಸ್ಪತ್ರೆಗಳು ಇವೆ. ತಾಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 11 ಕಡೆಗೆ ವೈದ್ಯರಿಲ್ಲ. ಅಕ್ಕಿಆಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಸಾಮಾನ್ಯ ಶಸ್ತ್ರ ಚಿಕಿತ್ಸಕರಿಲ್ಲ, ಜನರಲ್ ಮೆಡಿಸಿನ್ ತಜ್ಞರಿಲ್ಲ. ಅರವಳಿಕೆ ತಜ್ಞರಿಲ್ಲ. ತಾಲೂಕಿನಲ್ಲಿ 10 ಪ್ರಥಮ ದರ್ಜೆ ಸಹಾಯಕರ ಮಂಜೂರಿ ಹುದ್ದೆಗಳಿದ್ದು 6 ಹುದ್ದೆಗಳು ಖಾಲಿ ಇವೆ. 16 ಫಾರ್ಮಸಿ ಅಧಿಕಾರಿ ದರ್ಜೆ ಸಹಾಯಕರಿರಬೇಕಾಗಿದ್ದು 9 ಹುದ್ದೆ ಖಾಲಿ ಇವೆ. ಇರುವ ಒಂದೇ ಹಿರಿಯ ಫಾರ್ಮಸಿ ಅಧಿಕಾರಿ ದರ್ಜೆ ಹುದ್ದೆ ಖಾಲಿ ಇದೆ. ತಾಲೂಕಿನಲ್ಲಿ 32 ಶುಷ್ರೂಷಕ ಹುದ್ದೆಗಳಲ್ಲಿ 8 ಹುದ್ದೆ ಖಾಲಿ ಇವೆ. ಇರುವ ಒಂದೇ ಶುಷ್ರೂಷಕ ಅಧೀಕ್ಷಕ ಹುದ್ದೆಯೂ ಖಾಲಿ ಇದೆ. ಕಿರಿಯ ಪ್ರಯೋಗಶಾಲಾ ತಂತ್ರಜ್ಜರು 12 ಇರಬೇಕಾಗಿದ್ದು, 9 ಹುದ್ದೆ ಖಾಲಿ ಇವೆ. ಹಿರಿಯ ಪ್ರಯೋಗಶಾಲಾ ತಂತ್ರಜ್ಞರೂ ಇಲ್ಲ. ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಲ್ಲಿ 31 ಇರಬೇಕಾಗಿದ್ದು 20 ಖಾಲಿ ಇವೆ. ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ 8 ಹುದ್ದೆಗಳಲ್ಲಿ 7 ಖಾಲಿ ಇವೆ. 50 ಆರೋಗ್ಯ ಸುರಕ್ಷಣಾಧಿಕಾರಿ ಹುದ್ದೆಯಲ್ಲಿ 24 ಹುದ್ದೆ ಖಾಲಿ ಇವೆ. 69 ಡಿ ಗ್ರುಪ್ ಸಿಬ್ಬಂದಿಯಲ್ಲಿ 55 ಹುದ್ದೆ ಖಾಲಿ ಇವೆ.100 ಹಾಸಿಗೆಗಳ ಹಾನಗಲ್ಲ ತಾಲೂಕು ಆರೋಗ್ಯ ಕೇಂದ್ರದಲ್ಲಿ ತಿಂಗಳಿಗೆ 20 ಸಾವಿರ ಹೊರ ರೋಗಿಗಳನ್ನು ಪರೀಕ್ಷಿಸಲಾಗುತ್ತದೆ. ಅಲ್ಲದೆ 1 ಸಾವಿರ ಒಳರೋಗಿಗಳು. ಇದರೊಂದಿಗೆ ಬಿಪಿ, ಶುಗರ್, ಥೈರಾಯ್ಡ ಸೇರಿದಂತೆ ಇತರೆ ಪರೀಕ್ಷೆಗಾಗಿ ಬರುವವರು 2 ಸಾವಿರಕ್ಕೂ ಅಧಿಕ. 30 ಕಣ್ಣಿನ ಶಸ್ತ್ರ ಚಿಕಿತ್ಸೆಗಳು, 50 ಸಂತಾನಹರಣ ಶಸ್ತ್ರ ಚಿಕಿತ್ಸೆ, 15 ಸಿಜೇರಿಯನ್ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಕಿಮ್ಸ್‌-ಹಾವೇರಿಗೆ: ಪ್ರಮುಖ ಕಾಯಿಲೆ ಸೇರಿದಂತೆ ತುರ್ತು ಚಿಕಿತ್ಸೆಗಳ ಸಂದರ್ಭದಲ್ಲಿ ಅರವಳಿಕೆ ತಜ್ಞರ ಕೊರತೆಯಿಂದಾಗಿ ಬಹುತೇಕ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಹಾಗೂ ಹಾವೇರಿಯ ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಕಳಿಸಿಕೊಡುವ ಅನಿವಾರ್ಯತೆ ಇದೆ. ಕಳೆದ 6 ವರ್ಷಗಳಿಂದ ಇಲ್ಲಿ ಅರವಳಿಕೆ ತಜ್ಞರ ಲಭ್ಯತೆ ಇಲ್ಲದಂತಾಗಿದೆ. ಕೆಲವೊಮ್ಮೆ ಅರವಳಿಕೆ ತಜ್ಞರು ಬಂದರೂ ವರ್ಗಾವಣೆಗೊಂಡು ಬೇರೆಡೆಗೆ ಹೋಗುತ್ತಾರೆ. ಹಾನಗಲ್ಲ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 250 ಬೆಡ್‌ಗಳ ಅಸ್ಪತ್ರೆಯನ್ನಾಗಿಸಬೇಕೆಂಬ ಬೇಡಿಕೆ ಇದೆಯಾದರೂ ಅದನ್ನು ಸಾಕಾರ ಮಾಡಲು ಯಾವುದೇ ಸಿದ್ಧತೆಗಳು ಕಂಡುಬರುತ್ತಿಲ್ಲ. ಇಷ್ಟರಲ್ಲೂ ಲಭ್ಯ ಇರುವ ವೈದ್ಯರು ಕಿಕ್ಕಿರಿದು ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ತೀರ ಸಮಾಧಾನದಿಂದ ಚಿಕಿತ್ಸೆ ನೀಡುವ ಹರ ಸಾಹಸ ಮಾಡುತ್ತಿರುವುದಂತೂ ಸತ್ಯ. ಇತರ ಸಿಬ್ಬಂದಿಗಳ ಕೊರತೆಯಲ್ಲಿಯೂ ಹಾನಗಲ್ಲ ತಾಲೂಕು ಆಸ್ಪತ್ತೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡಿರುವುದು ಕೂಡ ಗಮನಾರ್ಹ ಸಂಗತಿ. ಅದಷ್ಟು ಬೇಗ ಖಾಲಿ ಇರುವ ಹುದ್ದೆಗಳನ್ನು ನೇಮಿಸುವುದು ಹಾಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರುವ ಕಾರ್ಯ ನಡೆಯಬೇಕಾಗಿದೆ.ವೈದ್ಯರೂ ಸಿಬ್ಬಂದಿಗಳ ಕೊರತೆಯಲ್ಲಿಯೂ ರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಅಸ್ಪತ್ರೆಗೆ ಬೇಡಿಕೆಗಳು ಸಾಕಷ್ಟಿವೆ. ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಅಗತ್ಯ ಸಿಬ್ಬಂದಿ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಹಾನಗಲ್ಲ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಜೆ. ಲಿಂಗರಾಜ ಹೇಳಿದರು.ಸಿಬ್ಬಂದಿಯ ಕೊರತೆ ಇದ್ದರೂ ಕೂಡ ಚಿಕಿತ್ಸೆಗೆ ಏನೂ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಔಷಧಿಯ ಕೊರತೆಯನ್ನು ನೀಗಿಸುವುದು ಸ್ವಲ್ಪ ಕಷ್ಟವಾಗಿದೆ. ಅತೀ ಮುಖ್ಯವಾಗಿ ಅರವಳಿಕೆ ತಜ್ಞರು ಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಹುಬ್ಬಳ್ಳಿ ಹಾಗೂ ಹಾವೇರಿ ಆಸ್ಪತ್ರೆಗಳಿಗೆ ರೋಗಿಗಳನ್ನು ರೆಫರ್ ಮಾಡುವ ಅನಿವಾರ್ಯತೆ ಉಂಟಾಗುತ್ತದೆ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅಖಿಲೇಶ ಮಾಳೋದೆ ಹೇಳಿದರು.