ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸಂಪೂರ್ಣ ವ್ಯಾಪಾರೀಕರಣಗೊಂಡಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಕಳವಳ ವ್ಯಕ್ತಪಡಿಸಿದರು.ನಗರದ ಪೊಲೀಸ್ ಕಾಲೋನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಮತ್ತು ಸಾಹಿತ್ಯ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಉಚಿತ ದಂತ ಚಿಕಿತ್ಸಾ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವೀಯತೆ ಮರೆಯಾಗಿದೆ. ಸೇವಾ ಮನೋಭಾವವೆಂಬ ಮಾತು ದೂರವೇ ಉಳಿದಿದೆ. ಎಲ್ಲದಕ್ಕೂ ಹಣವನ್ನೇ ಮಾನದಂಡವಾಗಿಸಿಕೊಳ್ಳಲಾಗಿದೆ. ಹೀಗಾಗಿ ಎರಡೂ ಕ್ಷೇತ್ರಗಳು ಬಡವರ ಕೈಗೆ ಸಿಗದ ಗಗನಕುಸುಮವಾಗಿವೆ ಎಂದರು.ದಿನೇ ದಿನೇ ಹೆಚ್ಚಾಗುತ್ತಿರುವ ಡೆಂಘೀ ಜ್ವರದ ಅಪಾಯದಿಂದ ಸಾಕಷ್ಟು ಜನರು, ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಸರ್ಕಾರ ಯಾವುದೇ ಸೂಕ್ತ ಕ್ರಮಕೈಗೊಳ್ಳದೆ ಮೀನಮೇಷ ಎಣಿಸುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿದರೆ ಸಾಲದು. ಕೋವಿಡ್-೧೯ರ ಮಾದರಿಯಲ್ಲಿ ಆರೋಗ್ಯ ರಕ್ಷಣಾ ಚಟುವಟಿಕೆಗಳು ಸಾಗಬೇಕು, ಸ್ವಚ್ಛತೆ, ಔಷಧ ಸಿಂಪರಣೆ, ಉಚಿತ ರಕ್ತ ಪರೀಕ್ಷೆಯಂತಹ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ದಂತ ವೈದ್ಯೆ ಡಾ.ಕೆ.ಎಲ್.ಸುಕನ್ಯಾ ಮಾತನಾಡಿ, ಪ್ರತಿಯೊಂದು ಮಗುವಿಗೂ ಹಾಲುಹಲ್ಲುಗಳು ಬಿದ್ದು ಮತ್ತೆ ಹುಟ್ಟುತ್ತವೆ. ಎರಡನೇ ಬಾರಿ ಹುಟ್ಟುವ ಹಲ್ಲುಗಳೇ ಶಾಶ್ವತ ಹಲ್ಲುಗಳು. ಇವುಗಳನ್ನು ಜೀವಿತದ ಕೊನೆಹೊರೆಗೂ ಜೋಪಾನ ಮಾಡಬೇಕು ಎಂದು ಸಲಹೆ ನೀಡಿದರು.ಪ್ರತಿದಿನ ಬೆಳಗ್ಗೆ ಮತ್ತು ಮಲಗುವ ಮುನ್ನ ಹಲ್ಲು ಉಜ್ಜಬೇಕು. ಮಕ್ಕಳ ಹಲ್ಲುಗಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು, ಹುಳುಕು, ವಕ್ರ, ಏರುಪೇರು ಹಲ್ಲುಗಳು ಕಂಡುಬಂದ ತಕ್ಷಣ ದಂತವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಸಾಹಿತ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ಜೆ.ಸುಜಾತಕೃಷ್ಣ ಮಾತನಾಡಿ, ಮನುಷ್ಯನಿಗೆ ನಿಜವಾದ ಆಭರಣ ನಗು, ಮುಖದ ಸೌಂದರ್ಯ ಹೆಚ್ಚಾಗಲು ಹಲ್ಲುಗಳು ಕಾರಣ. ಆಹಾರವನ್ನು ಅಗಿದು-ಜಗಿದು ತಿನ್ನುವುದಕ್ಕೆ ಹಲ್ಲುಗಳು ಸಹಕಾರಿ. ಹಲ್ಲುಗಳ ಆರೋಗ್ಯ ಕಾಪಾಡಿಕೊಂಡರೆ ಆಯಸ್ಸು ವೃದ್ದಿ, ಹಲ್ಲಿದ್ದರೂ ಆಹಾರ ಪದಾರ್ಥಗಳನ್ನು ಅಗಿಯದೇ ನುಂಗುವುದರಿಂದ ಆಹಾರ ಜೀರ್ಣವಾಗುವುದಿಲ್ಲ ಎಂದರು.ದಂತವೈದ್ಯರು ವಿದ್ಯಾರ್ಥಿಗಳ ದಂತ ಆರೋಗ್ಯ ತಪಾಸಣೆ ನಡೆಸಿ, ಸಲಹೆ ಮಾರ್ಗದರ್ಶನ ನೀಡಿದರು, ವಿವಿಧ ಕ್ಷೇತ್ರಗಳ ಸಾಧಕರನ್ನು ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ದಂತವೈದ್ಯೆ ಡಾ.ರೂಪಾ, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಘಟಕ ಅಧ್ಯಕ್ಷ ಪೊತೇರ ಮಹದೇವು, ಮೈಸೂರು ಜಿಲ್ಲಾಧ್ಯಕ್ಷೆ ಮಂಜುಳಾ, ಮುಖ್ಯಶಿಕ್ಷಕಿ ಬಿ.ಎಸ್.ಜಯಲಕ್ಷ್ಮಮ್ಮ, ಶಿಕ್ಷಕ ಸುರೇಶ್, ಸಾಹಿತ್ಯ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಉಮಾ, ಮಂಗಳವಾದ್ಯ ಕಲಾವಿದರಾದ ಕುಮಾರ್, ಲಕ್ಷ್ಮಣ, ಪ್ರಕಾಶ್, ಕಾಂತರಾಜು, ಸೋಮಾಚಾರ್ ಮತ್ತಿತರರಿದ್ದರು.