ಸಾರಾಂಶ
ಆಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಆರೈಕೆ ಸೌಲಭ್ಯಗಳು ಜನಸಾಮಾನ್ಯರಿಗೂ ಲಭ್ಯವಾಗಬೇಕೆಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಹದೇವಪುರ: ಆಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಆರೈಕೆ ಸೌಲಭ್ಯಗಳು ಜನಸಾಮಾನ್ಯರಿಗೂ ಲಭ್ಯವಾಗಬೇಕೆಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅಭಿಪ್ರಾಯಪಟ್ಟರು.
ಮಾರತ್ತಹಳ್ಳಿಯ ಕಾವೇರಿ ಆಸ್ಪತ್ರೆಯಲ್ಲಿ ಕೀಲು ಜೋಡಣೆ, ಮೂಳೆ ಶಸ್ತ್ರ ಚಿಕಿತ್ಸೆಗೆ ನೂತನವಾಗಿ ಅಳವಡಿಸಿಕೊಂಡಿರುವ ರೊಬೋಟಿಕ್ಸ್ ತಂತ್ರಜ್ಞಾನ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ದಿನೇ ದಿನೇ ಬದಲಾಗುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ಯಂತ್ರ ಚಾಲಿತ ಉಪಕರಣಗಳು, ಕೃತಕ ಬುದ್ಧಿಮತ್ತೆ, ರೊಬೋಟಿಕ್ಸ್ ತಂತ್ರಜ್ಞಾನ ಬಹುಮುಖ್ಯ ಪಾತ್ರ ವಹಿಸುತ್ತಿವೆ. ನಿಖರವಾಗಿ ಕಾಯಿಲೆ ಪತ್ತೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಉತ್ತಮ ಆರೈಕೆ ಸಾಧ್ಯವಾಗುತ್ತಿದೆ ಎಂದರು.ಬೆಳೆಯುತ್ತಿರುವ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಜನಸಾಮಾನ್ಯರಿಗೂ ಲಭ್ಯವಾಗಬೇಕು. ಆರ್ಥಿಕವಾಗಿ ಮತ್ತು ಆರೋದ್ಯದ ದೃಷ್ಟಿಯಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಆರೋಗ್ಯಯುತ ಜನರ ಸಮಾಜದಲ್ಲಿ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದರುಮೂಳೆ ಚಿಕಿತ್ಸೆಗೆ ಎಐ ತಂತ್ರಜ್ಞಾನ ಆಧಾರಿತ ರೊಬೋಟಿಕ್ಸ್ ತಂತ್ರಜ್ಞಾನವನ್ನು ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಇದು ಮಂಡಿನೋವು ಚಿಕಿತ್ಸೆ, ಅಪಘಾತಗಳು, ಕೀಲು ಜೋಡಣೆ ಮುಂತಾದ ಶಸ್ತ್ರಚಿಕಿತ್ಸೆಗಳಿಗೆ ಅನುಕೂಲಕರವಾಗಿದೆ. ರೋಗಿಯು ಶೀಘ್ರದಲ್ಲೇ ಗುಣಮುಖರಾಗಿ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.ಈ ವೇಳೆ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿಜಯ್ ಭಾಸ್ಕರ್ ಹಾಗೂ ಆರ್ಥೋಪೇಡಿಕ್ ವಿಭಾಗದ ಮುಖ್ಯಸ್ಥರಾದ ಡಾ. ರಘು ನಾಗರಾಜ್ ಹಾಜರಿದ್ದರು.