ಮಡಿಕೇರಿ: ನಗರದ ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನಿಮಿಯ ಹಾಗೂ ಆರೋಗ್ಯ ತಪಾಸಣೆಯನ್ನು ಆರ್‌ಬಿಎಸ್‌ಕೆ ತಂಡದಿಂದ ನಡೆಸಲಾಯಿತು.

ಮಡಿಕೇರಿ: ನಗರದ ಪುಟಾಣಿನಗರ ಅಂಗನವಾಡಿ ಕೇಂದ್ರದಲ್ಲಿ ಅನಿಮಿಯ ಹಾಗೂ ಆರೋಗ್ಯ ತಪಾಸಣೆಯನ್ನು ಆರ್‌ಬಿಎಸ್‌ಕೆ ತಂಡದಿಂದ ನಡೆಸಲಾಯಿತು. ಅನಿಮಿಯ ತಪಾಸಣೆ ಕುರಿತು ಪೋಷಕರಿಗೆ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾಹಿತಿ ನೀಡಿದರು. ವರ್ಷದಲ್ಲಿ ಎರಡು ಬಾರಿ ಅಂಗನವಾಡಿ ಕೇಂದ್ರ ವ್ಯಾಪ್ತಿಗೊಳಪಡುವ ಆರು ತಿಂಗಳಿಂದ 5 ವರ್ಷದವರೆಗಿನ ಮಕ್ಕಳಿಗೆ ಅನೀಮಿಯ ತಪಾಸಣೆಯನ್ನು ಮಾಡಿ ಮಕ್ಕಳ ರಕ್ತಹೀನತೆ ತಡೆಗಟ್ಟುವ ಪ್ರಯತ್ನವನ್ನು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಆರಂಭಿಸಿದೆ.

6ರಿಂದ 59 ತಿಂಗಳ ವಯಸ್ಸಿನ ಮಕ್ಕಳಲ್ಲಿ ಹಿಮೋಗ್ಲೋಬಿನ್ ಸಾಂದ್ರತೆ ಕಡಿಮೆ ಇದ್ದರೆ ರಕ್ತಹೀನತೆ ಎಂದು ಪರಿಗಣಿಸಲಾಗುವುದು. ಪೋಷಕರಿಗೆ ತಿಳಿವಳಿಕೆ ನೀಡಿ ನಂತರ ಮಗುವಿನ ಆಹಾರ ಪದ್ಧತಿ, ಮಗುವಿನ ರಕ್ತಹೀನತೆ ಇತಿಹಾಸದ ಬಗ್ಗೆ ಪೋಷಕರ ಮೂಲಕ ಮಾಹಿತಿ ಪಡೆದು ಸ್ಕ್ರೀನಿಂಗ್ ಮಾಡಲಾಗುವುದು.

ರಕ್ತಹೀನತೆಗೊಳಗಾದ ಮಕ್ಕಳ ಚಿಕಿತ್ಸೆ:

6-12 ತಿಂಗಳ ಮಕ್ಕಳಿಗೆ ಪ್ರತಿ ದಿನ 1 ಎಂಎಲ್ ಐರನ್ ಸಿರಪ್, 1-3 ವರ್ಷದ ಮಕ್ಕಳಿಗೆ ಪ್ರತಿ ದಿನ 1.5 ಎಂಎಲ್, 3-5 ವರ್ಷದ ಮಕ್ಕಳಿಗೆ ಪ್ರತಿ ದಿನ 2 ಎಂಎಲ್, ಎರಡು ತಿಂಗಳ ಅವಧಿಗೆ ಪ್ರತಿ 14 ದಿನಗಳಿಗೊಮ್ಮೆ ಐಎಫ್ ಎ ಸಿರಪ್ ನ ಅನುಸರಣೆಗಾಗಿ ಆಶಾ ಕಾರ್ಯಕರ್ತೆಯರ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.

ಹಿಮೋಗ್ಲೋಬಿನ್ ಸಾಮಾನ್ಯ ಮಟ್ಟಕ್ಕೆ ಸುಧಾರಿಸಿದರೆ ಚಿಕಿತ್ಸೆ ನಿಲ್ಲಿಸಲಾಗುವುದು. ಆದರೆ ರೋಗ ನಿರೋಧಕ ಐಎಫ್‌ಎ ಡೋಸ್‌ಗಳು ಮುಂದುವರಿಸಲಾಗುವುದು (ವಾರಕ್ಕೊಮ್ಮೆ), ಎರಡು ತಿಂಗಳಲ್ಲಿ ರಕ್ತಹೀನತೆ ಚಿಕಿತ್ಸೆಗೆ ಮಗು ಪ್ರತಿಕ್ರಿಸದಿದ್ದರೆ ಹೆಚ್ಚಿದ ತಪಾಸಣೆಗಾಗಿ ಶಿಶು ವೈದ್ಯರ ಬಳಿಗೆ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ಮಕ್ಕಳಲ್ಲಿ ಪೋಷಕಾಂಶದ ಕೊರತೆಯಿಂದ, ಜಂತುಹುಳು ಭಾದೆಯಿಂದ, ಸ್ವಚ್ಛತೆಗೆ ಗಮನ ಹರಿಸದೆ ಇರುವುದರಿಂದ ರಕ್ತಹೀನತೆ ಉಂಟಾಗುತ್ತದೆ. ಮಕ್ಕಳಲ್ಲಿ ಸುಸ್ತು, ತಲೆ ಸುತ್ತುವಿಕೆ, ಕೈ ಕಾಲು ಸೆಳೆಯುವಿಕೆ, ಏಕಾಗ್ರತೆ ಕೊರತೆ, ಹಸಿವಾಗದಿರುವುದು ಇವೆಲ್ಲ ತೊಂದರೆಗಳಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹೇಳಿದರು.ಪೋಷಕರ ಒಪ್ಪಿಗೆ ಪಡೆದು 35 ಮಕ್ಕಳ ಅನಿಮಿಯ ತಪಾಸಣೆಯನ್ನು ವೈದ್ಯಾಧಿಕಾರಿ ಶೈಮಾ, ಆರೋಗ್ಯ ಕಾರ್ಯಕರ್ತರಾದ ಮಮತಾ ನೆರವೇರಿಸಿದರು.ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮತ್ತು ಅನಿಮಿಯ ತಪಾಸಣೆಗೊಳಪಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆ ಉಮಾವತಿ ಮತ್ತು ಸಹಾಯಕಿ ದೈವಣಿ ಅವರು ಶ್ರಮಿಸಿದ್ದು, ಅಧಿಕಾರಿಗಳು ಅವರನ್ನು ಪ್ರಶಂಸಿಸಿದರು.