ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಉಡುಪಿ ಘಟಕದ ಮಹಿಳಾ ಸದಸ್ಯರಿಂದ ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ - ನಾರಿ ಶಕ್ತಿ’ಯನ್ನು ಆಚರಿಸಲಾಯಿತು.

ಉಡುಪಿ: ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಉಡುಪಿ ಘಟಕದ ಮಹಿಳಾ ಸದಸ್ಯರಿಂದ ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ - ನಾರಿ ಶಕ್ತಿ’ಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ‘ವಾತ್ಸಲ್ಯದ ಒಸಗೆ’ ಪುಸ್ತಕದ ಲೇಖಕಿ, ಸ್ತ್ರೀರೋಗ ವೈದ್ಯೆ ಡಾ. ರಾಜಲಕ್ಷ್ಮಿ ಅವರು ‘ಆರೋಗ್ಯ ಮತ್ತು ಮಹಿಳೆ’ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಮಹಿಳೆಯರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ಆಹಾರ, ಧ್ಯಾನ, ವಿವಿಧ ಹವ್ಯಾಸಗಳ ಮೂಲಕ ಕಾಪಾಡಬಹುದು ಎಂದರು.

ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಮಾಲತಿ ತಂತ್ರಿ ಅವರು, ಪ್ರಸ್ತುತ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತೀರ ಅವಶ್ಯಕತೆಯಾಗಿರುವುದು ಸುರಕ್ಷಿತ ವಾತಾವರಣ ಹಾಗೂ ಭಧ್ರತೆ ಎಂದರು. ಸಂಘದ ಕೇಂದ್ರೀಯ ಸಮಿತಿ ಸದಸ್ಯರಾದ ಕೆ.ಎಂ. ನಾಯಕ್, ಪ್ರಾದೇಶಿಕ ಕಾರ್ಯದರ್ಶಿ ಸುಧೀಂದ್ರ ಭಂಡಾರಿ, ಯೋಗೀಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ವೈಜಯಂತಿ ಕಾಮತ್ ಸ್ವಾಗತಿಸಿದರು, ಶಶಿಕಲಾ ರಾಜವರ್ಮ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶಾಂತಲಾ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಜಯಲಕ್ಷ್ಮಿ ಬಡಕಿಲ್ಲಾಯರು ವಂದಿಸಿದರು.

ಕಾರ್‍ಯಕ್ರಮದ ಅಂಗವಾಗಿ ಕೆಲವು ಮನೋರಂಜನಾ ಆಟಗಳು, ಲಕ್ಕಿ ಡ್ರಾಗಳನ್ನು ಆಯೋಜಿಸಲಾಗಿತ್ತು. ಸಮೂಹ ಗಾನ, ಹಾಸ್ಯ ನಾಟಕ, ಅಷ್ಟ ಲಕ್ಷ್ಮೀ ರೂಪಕದ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.