ಸಾರಾಂಶ
ಶಿರಸಿ: ನಗರ ವ್ಯಾಪ್ತಿಯಲ್ಲಿ ಮೂಲಭೂತ ಸಮಸ್ಯೆಗಳ ನಡುವೆ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದೆ. ಇವು ಕಸ ಹಾಕುವ ಬಯಲು ತೊಟ್ಟಿಗಳಾಗಿ ಪರಿವರ್ತನೆಗೊಂಡಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ತಾಣವಾಗುತ್ತಿದೆ ಎಂಬ ಆತಂಕ ಸ್ಥಳೀಯರಿಗೆ ಎದುರಾಗಿದೆ.
ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಗಾಲ ಪೂರ್ವದಲ್ಲಿ ಇಲ್ಲಿನ ನಗರಸಭೆಯು ಮುಖ್ಯ ಚರಂಡಿ ಹಾಗೂ ವಾರ್ಡ್‌ಗಳಲ್ಲಿನ ಚರಂಡಿಯ ಸ್ವಚ್ಛತೆ ಕಾರ್ಯ ನಡೆಸುತ್ತಿದೆ. ಆದರೆ ನಗರದಲ್ಲಿನ ಖಾಲಿ ನಿವೇಶನಗಳಲ್ಲಿ ತುಂಬಿಕೊಂಡಿರುವ ಕಸದ ಸ್ವಚ್ಛತೆ ಮಾತ್ರ ಕೈಗೊಂಡಿಲ್ಲ. ಬಳಸಿದ ಪ್ಲಾಸ್ಟಿಕ್, ಗಾಜಿನ ಬಾಟಲಿ, ಅನುಪಯುಕ್ತ ವಸ್ತು ಮತ್ತಿತರ ತ್ಯಾಜ್ಯವನ್ನು ಖಾಲಿ ನಿವೇಶನದಲ್ಲಿ ನಾಗರಿಕರೇ ಹಾಕುತ್ತಿದ್ದಾರೆ. ಇದರಿಂದ ನಿವೇಶನ ಅಕ್ಕಪಕ್ಕದ ಮನೆಯವರು ಸಮಸ್ಯೆ ಅನುಭವಿಸುವಂತಾಗಿದೆ.ನಗರದ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳು ಡಂಪಿಂಗ್ ಯಾರ್ಡ್‌ನಂತಾಗಿದೆ. ನಗರದಲ್ಲಿನ ೫೦೦ಕ್ಕೂ ಅಧಿಕ ಖಾಲಿ ನಿವೇಶನಗಳಲ್ಲಿ ಶೇ. ೪೦ರಷ್ಟು ಮಾಲೀಕರು ಯಾರು? ಅವರು ಎಲ್ಲಿದ್ದಾರೆ? ಎನ್ನುವುದೇ ತಿಳಿದಿಲ್ಲ. ಇದು ನಗರಸಭೆಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ದೊಡ್ಡ ಸಮಸ್ಯೆ ತಂದೊಡ್ಡಿದೆ. ನಗರದ ಶೇ. ೨೫ಕ್ಕಿಂತ ಹೆಚ್ಚಿನ ತ್ಯಾಜ್ಯ ಖಾಲಿ ನಿವೇಶನದಲ್ಲಿ ಸಂಗ್ರಹವಾಗುತ್ತಿದೆ.ನಗರದ ವಿವೇಕಾನಂದನಗರ, ಕೆಎಚ್‌ಬಿ ಕಾಲನಿ, ದುಂಡಶಿನಗರ, ಲಯನ್ಸ್ ನಗರ, ಅಶೋಕನಗರ, ಮರಾಠಿಕೊಪ್ಪ, ದೇವಿಕೆರೆ ಸುತ್ತಲಿನ ನೂರಾರು ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಪೊದೆಗಳು ಹಂದಿ, ಹಾವು, ಚೇಳುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ರಾತ್ರಿ ಸಮಯದಲ್ಲಿ ಓಡಾಡಲು ಭಯದ ವಾತಾವರಣವಿದೆ. ಕೆಲವು ಮನೆಗಳಲ್ಲಿ ವಯಸ್ಸಾದ ಒಬ್ಬಿಬ್ಬರು ಮಾತ್ರ ಇರುತ್ತಾರೆ. ರಾತ್ರಿ ಸಮಯದಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ.
ಇನ್ನೇನು ಕೆಲವು ದಿನಗಳಲ್ಲಿ ಮಳೆ ಆರಂಭವಾಗಲಿದ್ದು, ಖಾಲಿ ನಿವೇಶನಗಳಲ್ಲಿ ಬಿಸಾಡಿದ ತ್ಯಾಜ್ಯಗಳು ಚರಂಡಿ ಸೇರಿ, ಚರಂಡಿ ಕಟ್ಟಿ, ನೀರು ರಸ್ತೆಯ ಮೇಲೆ ಹರಿಯಲು ಆರಂಭಿಸುತ್ತದೆ. ನಗರಸಭೆಯು ನಿವೇಶನದ ಮಾಲೀಕರನ್ನು ಪತ್ತೆ ಮಾಡಿ, ಸ್ವಚ್ಛಗೊಳಿಸಲು ಕಠಿಣ ಆದೇಶ ಮಾಡಬೇಕು. ಇಲ್ಲವಾದಲ್ಲಿ ನಗರಸಭೆಯೇ ಸಾರ್ವಜನಿಕರ ಅನುಕೂಲಕ್ಕಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಕೆಎಚ್‌ಬಿ ಕಾಲನಿಯ ನಿವಾಸಿ, ನಿವೃತ್ತ ಅಂಚೆ ಇಲಾಖೆ ನೌಕರ ವಿ.ಎಸ್. ಹೆಗಡೆ ಆಗ್ರಹಿಸಿದ್ದಾರೆ.ನಗರದ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಿದವರು ಹೊರ ತಾಲೂಕು, ಹೊರ ಜಿಲ್ಲೆ ಹಾಗೂ ಕೆಲವಷ್ಟು ಜನರು ವಿದೇಶದಲ್ಲಿದ್ದಾರೆ. ತಮ್ಮ ಖಾಲಿ ನಿವೇಶನದ ಸುತ್ತ ಕಾಂಪೌಂಡ್ ನಿರ್ಮಿಸಿ, ಕಸ ಚೆಲ್ಲದಂತೆ ಭದ್ರತೆ ಮಾಡಿಕೊಳ್ಳುವಂತೆ ನಗರಸಭೆಯಿಂದ ಸಾಕಷ್ಟು ಬಾರಿ ಖಾಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ, ದಂಡ ವಿಧಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಗರಸಭೆಯಿಂದ ಮಾಲೀಕರ ಮೇಲೆ ಕ್ರಮ ಜರುಗಿಸಬೇಕೆಂಬ ಆಗ್ರಹ ಬಲವಾಗಿ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಕಸ ಸಂಗ್ರಹ ವಾಹನ...ನಗರ ವ್ಯಾಪ್ತಿಯ ಪ್ರತಿ ವಾರ್ಡ್‌ಗೂ ಮನೆ ಮನೆಗೆ ಕಸ ಸಂಗ್ರಹ ವಾಹನ ತೆರಳಿ, ಕಸ ಸಂಗ್ರಹ ಮಾಡುತ್ತಿದೆ. ಆದರೂ ಕೆಲವರು ವಾಹನಗಳಿಗೆ ಕಸ ನೀಡದೇ ಖಾಲಿ ನಿವೇಶನದಲ್ಲಿ ಎಸೆಯುವ ಚಾಳಿ ರೂಢಿಸಿಕೊಂಡಿದ್ದಾರೆ. ಅಲ್ಲದೇ, ತಳ್ಳುಗಾಡಿ ವ್ಯಾಪಾರಸ್ಥರು ಕಸವನ್ನು ಈ ಖಾಲಿ ನಿವೇಶನ ಹುಡುಕಿ ಚೆಲ್ಲುತ್ತಾರೆ. ಅಕ್ಕಪಕ್ಕದ ಮನೆಯವರು ವಿರೋಧಿಸಿದರೂ ಕೇಳುತ್ತಿಲ್ಲ. ಶಿರಸಿ ನಗರಸಭೆ ೨೦೨೨-೨೩ರಲ್ಲಿ ಸ್ವಚ್ಛ ಸರ್ವೇಕ್ಷಣದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಆದರೆ ಶಿರಸಿಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.ಸೂಚನೆ: ನಗರ ವ್ಯಾಪ್ತಿಯ ಖಾಲಿ ನಿವೇಶನದ ಮಾಲೀಕರ ಪತ್ತೆಗೆ ನಗರಸಭೆಯ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗುತ್ತದೆ. ಅವರನ್ನು ಸಂಪರ್ಕಿಸಿ, ಸ್ವಚ್ಛಗೊಳಿಸಲು ತಿಳಿಸಲಾಗುತ್ತದೆ. ಆದರೂ ಸ್ವಚ್ಛಗೊಳಿಸದಿದ್ದರೆ ನಗರಸಭೆಯಿಂದ ಸ್ವಚ್ಛಗೊಳಿಸಿ, ಅದರ ವೆಚ್ಚವನ್ನು ಮಾಲೀಕರ ತೆರಿಗೆಗೆ ಸೇರಿಸಲಾಗುತ್ತದೆ ಎಂದು ಶಿರಸಿ ನಗರಸಭೆಯ ಪೌರಾಯುಕ್ತ ಕಾಂತರಾಜು ತಿಳಿಸಿದರು.