ಸಾರಾಂಶ
- ಮುಡುಕುತೊರೆ ಸೋಪಾನ ಕಟ್ಟೆಯ ನೀರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ
- ಸ್ನಾನಘಟ್ಟದ ಬಳಿ ಸೇರುವ ತ್ಯಾಜ್ಯದ ಸ್ವಚ್ಚತೆ ಮಾಡಲು ನಿರ್ಲಕ್ಷ್ಯಅಕ್ರಂಪಾಷ ತಲಕಾಡು
ಕನ್ನಡಪ್ರಭ ವಾರ್ತೆ ತಲಕಾಡುಮುತ್ತೈದೆಯರ ಪೂಜೆಗೆ ಮುಡುಕುತೊರೆ ನದಿಯಲ್ಲಿ ಪುಣ್ಯಸ್ನಾನಕ್ಕೆಂದು ಚಾಮರಾಜನಗರ, ಮೈಸೂರು ಜಿಲ್ಲಾ ಭಾಗದಿಂದ ಸಹಸ್ರಾರು ಸಂಖ್ಯೆಯಲ್ಲಿ ಶುಕ್ರವಾರ ಆಗಮಿಸಿದ್ದ ಮಹಿಳಾ ಭಕ್ತರು, ನದಿ ನೀರಿಗಿಳಿಯುವ ಸ್ಥಳದಲ್ಲಿ ಸ್ವಚ್ಚತೆ ಇಲ್ಲದೆ ಮುಜುಗರ ಅನುಭವಿಸಿದರು.
ಹದಿನೈದು ದಿನಗಳ ಹಿಂದೆ ಇಲ್ಲಿ ವಿಜೃಂಭಣೆಯಿಂದ ಪರ್ವತ ಪರಿಷೆ ಉತ್ಸವ ವಿಜೃಂಭಣೆಯಿಂದ ನೆರವೇರಿತ್ತು. ಉತ್ಸವ ನಡೆದ ಒಂದು ತಿಂಗಳು ಮುಂದಿನ ಅಮವಾಸ್ಯೆವರೆಗೆ, ಪ್ರತಿ ಸೋಮವಾರ ಮತ್ತು ಶುಕ್ರವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡೇ ಮುಡುಕುತೊರೆಗೆ ಹರಿದು ಬರಲಿದೆ. ಇಲ್ಲಿನ ನದಿಯಲ್ಲಿ ಪುಣ್ಯಸ್ನಾನ ಮಾಡಿ ಮುತ್ತೈದೆಯರ ಪೂಜೆಯಲ್ಲಿ ಪಾಲ್ಗೊಳ್ಳುವುದು ಉತ್ಸವದ ವಿಶೇಷ.ಗುರುವಾರ ಹುಣ್ಣಿಮೆಯ ದಿನ ಮುಕ್ತಾಯಗೊಂಡು ಶುಕ್ರವಾರದ ವಿಶೇಷ ಶುಭದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮುಡುಕುತೊರೆಗೆ ಆಗಮಿಸಿದ್ದರು.
ಇಲ್ಲಿನ ನದಿಯಲ್ಲಿ ತೀರ್ಥಸ್ನಾನ ಮಾಡಿದ ಭಕ್ತರು, ದಡದಲ್ಲಿ ತಂಡೋಪತಂಡವಾಗಿ ಮುತ್ತೈದೆಯರು ಪೂರ್ಣಕುಂಭ ಕಳಶ ಸ್ಥಾಪಿಸಿ ಭಕ್ತಿಸಡಗರದಿಂದ ವಿಶೇಷ ಪೂಜೆ ಸಲ್ಲಿಸಿದರು.ಇಲ್ಲಿನ ನದಿಯಲ್ಲಿ ಭಕ್ತರು ಪುಣ್ಯಸ್ನಾನಕ್ಕೆ ನೆರವಾಗಲು ಸ್ನಾನಘಟ್ಡದ ಉದ್ದಕ್ಕೂ ನೂತನವಾಗಿ ಕಲ್ಲು ಚಪ್ಪಡಿ ಅಳವಡಿಸಿದ್ದು, ಸ್ಟೈನ್ ಲೆಸ್ ಸ್ಟೀಲ್ ಬ್ಯಾರಿಕೇಡ್ ಕೂಡ ನದಿಯಾಳದ ಕಡೆ ಭಕ್ತರು ಜಾರಿ ಹೋಗದಂತೆ ಸುರಕ್ಷತೆಗೆ ಅಳವಡಿಸಿದ್ದಾರೆ.
ನದಿ ನೀರಿಗಿಳಿಯುವ ಭಕ್ತರಿಗೆ ಸರ್ಕಾರ ಸಾಕಷ್ಟು ಸೌಕರ್ಯ ಒದಗಿಸಿಕೊಟ್ಟಿದ್ದರು, ನದಿಯಲ್ಲಿ ಕಾಲಿಡಲು ಜಾಗವಿಲ್ಲದಂತೆ ಆವರಿಸಿಕೊಂಡಿದ್ದ ಜೊಂಡು ಕಸ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಭಕ್ತರು ನೀರಿಗಿಳಿದು ಪುಣ್ಯಸ್ನಾನ ಮಾಡಲು ಸಾಧ್ಯವಾಗದೆ ನಿರಾಶೆ ಅನುಭವಿಸಿದರು. ಮುತ್ತೈದೆಯರ ಪೂಜೆಗೆ ಆಗಮಿಸಿದ್ದ ಬಹುತೇಕ ಭಕ್ತರು ತೀರ್ಥಸ್ನಾನ ಸಂಪ್ರೋಕ್ಷಣೆಗಷ್ಟೇ ಇಲ್ಲಿ ಸೀಮಿತರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.ಕಾಲಕಾಲಕ್ಕೆ ಇಲ್ಲಿನ ಸ್ನಾನಘಟ್ಟದ ಬಳಿ ಸೇರುವ ತ್ಯಾಜ್ಯದ ಸ್ವಚ್ಚತೆ ಮಾಡಲು ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದರಿಂದ, ರಾಜ್ಯದ ನಾನಾ ಭಾಗಗಳಿಂದ ಶ್ರೀಶೈಲ ಪುಣ್ಯಕ್ಷೇತ್ರವೆಂದು ಪ್ರಸಿದ್ದಿ ಪಡೆದ ಶ್ರೀಭ್ರಮರಾಂಬ ಮಲ್ಲಿಕಾರ್ಜುನ ಸನ್ನಿಧಿಗೆ ಆಗಮಿಸುವ ಭಕ್ತರ ಮುಜುಗರಕ್ಕೆ ಕಾರಣವಾಗಿದೆ. ಮುಂದಿನ ಅಮವಾಸ್ಯೆವರೆಗೆ ಎರಡು ವಾರ ಕಾಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವುದರಿಂದ ಸೋಪಾನಕಟ್ಟೆಯ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಯಾತ್ರಾರ್ಥಿಗಳು ಒತ್ತಾಯಿಸಿದ್ದಾರೆ.
--------ಈ ವಾರ ಉತ್ತಮ ಮಳೆಯಾದ್ದರಿಂದ ನದಿಯಲ್ಲಿ ಹೆಚ್ಚಿನ ನೀರಿನ ಜತೆ ಜೊಂಡು ತ್ಯಾಜ್ಯ ಹರಿದು ಬಂದು ಸೋಪಾನ ಕಟ್ಟೆಯ ಬಳಿ ಆವರಿಸಿದೆ. ಕೂಡಲೆ ಸ್ವಚ್ಚತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
- ವೆಂಕಟೇಶ್ ಮೂರ್ತಿ, ಇಒ, ಪಂಚಲಿಂಗ ಸಮೂಹ ದೇವಾಲಯಗಳು, ತಲಕಾಡು.-----
ಪರ್ವತ ಪರಿಷೆ ನಡೆದು ಹದಿನೈದು ದಿನವಾದರು, ಇಲ್ಲಿನ ಸೋಪಾನ ಕಟ್ಟೆಯ ಬಳಿ ಸೇರಿಕೊಂಡ ತ್ಯಾಜ್ಯ ತೆರವು ಮಾಡದೆ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿದ್ದಾರೆ. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಸ್ವಯಂ ಸೇವಕರ ಸಹಕಾರದಲ್ಲಿ ಇಲ್ಲಿ ಸ್ವಚ್ಚತೆ ನಡೆಸಲಾಗುತ್ತದೆ.- ಶಿವಕುಮಾರ್, ಸರ್ವೋದಯ ಜನಜಾಗೃತಿ ಟ್ರಸ್ಟ್ ಅಧ್ಯಕ್ಷರು, ಕಣ್ಣೂರು ಮಂಗಲ, ಹನೂರು ತಾಲೂಕು.
-----ಇಲ್ಲಿ ಪುಣ್ಯಸ್ನಾನದ ಮಾತಿರಲಿ ತಟ್ಟೆ ನೀರಿನಲ್ಲಿ ಜಾಲಾಡಿಸಲು ಆಗದಂತೆ ಜೊಂಡು ಕಸ ಆವರಿಸಿದೆ. ಸಂಬಂಧ ಪಟ್ಟವರು ಇಲ್ಲಿನ ಸೋಪಾನ ಕಟ್ಟೆಯ ಸ್ವಚ್ಚತೆ ನೆರವೇರಿಸಿ ಮುಂದಿನ ಸೋಮವಾರ ಹಾಗು ಶುಕ್ರವಾರ ಆಗಮಿಸುವ ಭಕ್ತರ ಪುಣ್ಯಸ್ನಾನಕ್ಕೆ ಅನುಕೂಲ ಮಾಡಿಕೊಡಬೇಕು.
- ಶಿವಬಸಪ್ಪ, ಪಡಗಗೂರು ಗ್ರಾಮಸ್ಥರು, ಗುಂಡ್ಲುಪೇಟೆ ತಾಲೂಕು.-------