ಚನ್ನರಾಯಪಟ್ಟಣ: ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗಣ್ಯರು ಗಾಯಕಿ ಎಸ್. ಜಾನಕಿಯವರ, ಚನ್ನಮ್ಮದೇವೇಗೌಡರ ಬಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ದಕ್ಷಿಣ ಭಾರತದ ಗಾನ ಕೋಗಿಲೆ ಎಸ್. ಜಾನಕಿ ಅಮ್ಮನವರ ಸಾಧನೆಯು ಅವಿಸ್ಮರಣೀಯವಾಗಿದೆ. ಅವರು ಸಾವಿರಾರು ಹಾಡುಗಳನ್ನು ತಮ್ಮ ಕಂಠ ಸಿರಿಯ ಮೂಲಕ ದೇಶದ ಕೋಟ್ಯಂತರ ಜನತೆಗೆ ಉಣಬಡಿಸಿದ್ದಾರೆ. ೧೪ ಭಾಷೆಗಳಲ್ಲಿ ೪೮ ಸಾವಿರ ಹಾಡುಗಳನ್ನು ಹಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಮತ್ತು ದಕ್ಷಿಣ ಭಾರತದಲ್ಲಿ ಎಸ್. ಜಾನಕಿಯವರು ಅತ್ಯುತ್ತಮ ಸಾಧನೆ ಮಾಡಿದವರಾಗಿದ್ದಾರೆ. ಎಸ್. ಜಾನಕಿಯವರು ಆಂಧ್ರಪ್ರದೇಶದಲ್ಲಿ ಹುಟ್ಟಿದರೂ ಕನ್ನಡ ನಾಡಿನಲ್ಲಿ ಅದರಲ್ಲೂ ಕನ್ನಡದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ೪ ರಾಷ್ಟ್ರ ಪ್ರಶಸ್ತಿಗಳು, ವಿವಿಧ ರಾಜ್ಯಗಳಲ್ಲಿ ಹಲವಾರು ರಾಜ್ಯ ಪ್ರಶಸ್ತಿಗಳು ಬಂದಿರುವುದು ಅವರ ಸಂಗೀತಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ. ಅಲ್ಲದೆ ಎಸ್. ಜಾನಕಿಯವರು ೬೫ ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಹಾಡುಗಳನ್ನು ಹಾಡಿದವರು. ಅವರ ಅಭಿಮಾನಿಗಳು ವಿಶ್ವದಾದ್ಯಂತ ಇದ್ದಾರೆ. ಜೊತೆಗೆ ಅವರು ಸಾಂಸ್ಕೃತಿಕ ನಗರಿ ಮೈಸೂರನ್ನು ಆಯ್ಕೆ ಮಾಡಿಕೊಂಡು ಕೊನೆಯ ದಿನಗಳನ್ನು ಕಳೆದಿದ್ದು, ಮೈಸೂರಿನಲ್ಲೇ ಅಂತ್ಯಸಂಸ್ಕಾರ ಮಾಡಿಸಿಕೊಂಡಿದ್ದು ಸಹ ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿಯಾಗಿದೆ. ಜಾನಕಿಯವರು ಭೌತಿಕವಾಗಿ ನಮ್ಮನ್ನಗಲಿದ್ದರೂ ಅವರ ಮಾಡಿರುವ ಸಾಧನೆ ಸದಾ ನಮ್ಮೊಂದಿಗಿರುತ್ತದೆ ಎಂದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ. ನಂ. ಲೋಕೇಶ್ ಮಾತನಾಡಿ ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದವರು ಎಸ್. ಜಾನಕಿಯವರು ಎಂದರು. ಜಾನಕಿ ಅಮ್ಮನವರು ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲೆ ೧೧ ರಾಜ್ಯ ಪ್ರಶಸ್ತಿಗಳನ್ನು ಪಡೆದು ವಿವಿಧ ರಾಜ್ಯಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಹಾಡುಗಳು ಇoದು ವಿಶ್ವದಲ್ಲಿ ಮನೆ ಮಾತಾಗಿವೆ. ಇಂತಹ ಎಸ್. ಜಾನಕಿಯವರ ನುಡಿ ನಮನ ಕಾರ್ಯಕ್ರಮವನ್ನು ರವಿ ನಾಕಲಗೂಡು ಅವರು ಜಿಲ್ಲೆಯಾಧ್ಯಂತ ಆಚರಿಸುವ ಮೂಲಕ ಗೌರವ ಸಲ್ಲಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ಕನ್ನಡ ಪರ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತರ ಗೋಕಾಕ್ ಪುಟ್ಟಣ್ಣ ಮಾತನಾಡಿ, ಚಿಕ್ಕಂದಿನಲ್ಲಿ ನಾವು ಎಸ್. ಜಾನಕಿಯವರ ಹಾಡುಗಳನ್ನು ಕೇಳುತ್ತಲೆ ಬೆಳೆದವರು. ಅವರನ್ನು ದಕ್ಷಿಣ ಭಾರತಕ್ಕೆ ಸಂಗೀತದ ಮೂಲಕ ಹೆಸರು ತಂದು ಕೊಟ್ಟು ತಮ್ಮ ಹಾಡಿನ ಮೂಲಕ ಸಂಗೀತ ಪ್ರೇಮಿಗಳ ಮನಸ್ಸು ಗೆದ್ದವರು. ಅವರು ನಮ್ಮನ್ನಗಲಿರುವುದು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು. ಸ್ಕೂಲ್ ಮಾಸ್ಟರ್‌ ಡಿ. ಎಸ್. ದಿನೇಶ್ ಮಾತನಾಡಿ ದೇವೇಗೌಡರ ರಾಜಕೀಯ ಬಿರುಗಾಳಿಯಲ್ಲಿ ಮನೆಯ ಜ್ಯೋತಿ ಹಾರದಂತೆ ಕಾಪಾಡಿಕೊಂಡು ಬಂದವರು ಚನ್ನಮ್ಮ ದೇವೇಗೌಡರು ಅವರ ಆದರ್ಶ ಸಂಸ್ಕಾರ, ಸಂಸಾರ ಎಲ್ಲರಿಗೂ ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಂಕರಾಚಾರ್ಯ, ತುಮಕೂರು ನಾಗರತ್ನ, ಪ್ರೇಮಮ್ಮ, ತಾಂಡವೇಶ್, ಆನಂದ್ ಕಾಳೇನಹಳ್ಳಿ, ಸಾಹಿತಿ ಜಯಂತಿ ಚಂದ್ರಶೇಖರ್, ಕಲಾವಿದರಾದ ಮಹದೇವ್, ಸಿ. ಜಿ. ಸೋಮಶೇಖರ್, ಸಮಾಜ ಸೇವಕರಾದ ಎಸ್‌ಎಂಆರ್‌ ರಮೇಶ್, ರಾಜಕುಮಾರ್‌, ಮನೋಹರ್‌ ಗಜಾನನ, ರುದ್ರೇಶ್‌ಗೌಡ, ಜಗದೀಶ್, ಆನಂದ್, ಹರೀಶ್, ಶಂಕರಲಿಂಗೇಗೌಡ, ಶಿವರಾಜ್, ಚಂದ್ರು ಸೇರಿದಂತೆ ಇತರರು ಹಾಜರಿದ್ದರು.