ಸಾರಾಂಶ
ಹೊನ್ನಾವರ: ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಚರ್ಚೆ ನಡೆಯಿತು.ಸಭೆ ಪ್ರಾರಂಭದಲ್ಲಿ ಪಪಂ ಮುಖ್ಯಾಧಿಕಾರಿ ಏಸು ಬೆಂಗಳೂರು ಅವರು ಯೋಜನೆಗೆ ಸರ್ಕಾರ ಮುಂದಾಗಿರುವ ವಿಷಯ ತಿಳಿಸಿ ಸದಸ್ಯರು ಸಭೆಯಲ್ಲಿ ಅಭಿಪ್ರಾಯ ತಿಳಿಸುವಂತೆ ವಿನಂತಿಸಿದರು.
ಸದಸ್ಯರಾದ ಶಿವರಾಜ್ ಮೇಸ್ತ ಮಾತನಾಡಿ, ಈಗಾಗಲೇ ಗೇರುಸೊಪ್ಪ ಡ್ಯಾಂ ನಿರ್ಮಾಣದಿಂದ ಶರಾವತಿ ನದಿ ನೀರಿನ ಮಟ್ಟ ಕಡಿಮೆಯಾಗಿದೆ. ಈ ಯೋಜನೆ ಜಾರಿಯಾದರೆ ನದಿಯೇ ಸಂಪೂರ್ಣ ಬತ್ತಿ ಹೋಗಲಿದೆ. ಇದರಿಂದ ಮೀನುಗಾರಿಕೆಗೂ ತೊಂದರೆಯಾಗಲಿದೆ ಎಂದರು.ಪಪಂ ಉಪಾಧ್ಯಕ್ಷ ಸುರೇಶ್ ಮೇಸ್ತ ಮಾತನಾಡಿ, ಶರಾವತಿ ನದಿ ನೀರು ಅವಲಂಬಿಸಿಕೊಂಡಿರುವ ನಮಗೆಲ್ಲ ಈ ಯೋಜನೆ ಜಾರಿಯಿಂದ ಮಾರಕ ಆಗಲಿದೆ. ಸಮುದ್ರದ ಉಪ್ಪು ನೀರು ನದಿಗೆ ನುಗ್ಗಿ ಕೃಷಿ ತೋಟಕ್ಕೂ ಹಾನಿಯಾಲಿದೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷ ವಿಜಯ ಕಾಮತ್ ಮಾತನಾಡಿ, ಯೋಜನೆ ಜಾರಿಯಾದರೆ ನಾವೆಲ್ಲ ಉಪ್ಪುನೀರು ಕುಡಿಯಬೇಕಾಗುತ್ತದೆ. ನಾವೆಲ್ಲ ಈ ಯೋಜನೆಗೆ ವಿರೋಧಿಸೋಣ ಎಂದರು.ಈ ವೇಳೆ ಸದಸ್ಯರಾದ ಅಜಾದ್ ಅಣ್ಣಿಗೇರಿ ಆಕ್ಷೇಪ ವ್ಯಕ್ತಪಡಿಸಿ, ಅಧ್ಯಕ್ಷರೇ ನೀವು, ಎಲ್ಲರು ವಿರೋಧಿಸೋಣ ಎಂದು ಹೇಗೆ ಹೇಳುವಿರಿ? ಈ ಯೋಜನೆಯ ಸಾಧಕ-ಬಾಧಕ ತಿಳಿಸಬೇಕು. ತನ್ನದು ಈ ವಿಚಾರದಲ್ಲಿ ತಟಸ್ಥ ನಿಲುವು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಜಯ ಕಾಮತ್, ಇಡೀ ತಾಲೂಕಿಗೆ ಈ ಯೋಜನೆಯ ಪರಿಣಾಮ ಏನು ಎಂದು ತಿಳಿದಿದೆ. ಈಗಾಗಲೇ ಯೋಜನೆ ವಿರೋಧಿಸಿ ಹೋರಾಟ ನಡೆದಿದೆ. ಮತ್ತೆ ಇದರ ಸಾಧಕ-ಭಾದಕ ಹೇಳುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಇತ್ತರು. ಈ ವಿಚಾರವಾಗಿ ಅರ್ಧ ಗಂಟೆ ಗಂಭೀರ ಚರ್ಚೆ ನಡೆಯಿತು. ಕೊನೆಯಲ್ಲಿ ಕೈ ಮೇಲಕ್ಕೆತ್ತುವ ಮೂಲಕ ಹಾಜರಿದ್ದ 13 ಸದಸ್ಯರು, 2 ನಾಮನಿರ್ದೇಶಿತ ಸದಸ್ಯರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಅಜಾದ್ ಅಣ್ಣಿಗೇರಿ ಮಾತ್ರ ಕೈ ಎತ್ತದೇ ತಟಸ್ಥವಾಗಿದ್ದರು.ನಂತರ ಗಣೇಶೋತ್ಸವ ಆಚರಣೆ,ಬಿಡಾಡಿ ದನಗಳ ಸಂಚಾರದಿಂದ ಆಗುತ್ತಿರುವ ಸಮಸ್ಯೆ, ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಕುರಿತ ಚರ್ಚೆ ನಡೆದವು.ಈ ವೇಳೆ ಪಟ್ಟಣ ಪಂಚಾಯತ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಮೇಸ್ತ,ಸದಸ್ಯರು ಉಪಸ್ಥಿತರಿದ್ದರು.