ಗುಮ್ಮಟನಗರಿಗೆ ಮಾರ್ಚ್‌ನಲ್ಲೇ ಬಿಸಿಲಾಘಾತ

| Published : Mar 21 2025, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಮಾರ್ಚ್‌ ತಿಂಗಳು ಆರಂಭವಾಗಿದ್ದೆ ತಡ ಬಿಸಿಲ ಝಳ ಶುರುವಾಗಿದೆ. ರಾಜ್ಯದ ಜನರು ಬಿಸಿಯ ತಾಪಕ್ಕೆ ಹೈರಾಣಾಗಿ ವಿಲವಿಲ ಎನ್ನುತ್ತಿದ್ದಾರೆ. ಅದರಲ್ಲೂ ಈ ಬಾರಿ ಗುಮ್ಮಟ ನಗರಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿದ್ದು, ಜನರು ಆತಂಕಕ್ಕೊಳಗಾಗುವಂತೆ ಮಾಡಿದೆ. ಗೋಳಗುಮ್ಮಟ, ವಚನಗುಮ್ಮಟ, ಆಧ್ಯಾತ್ಮಿಕ ನೆಲೆಗಟ್ಟಿನಿಂದ ತನ್ನತ್ತ ಸೆಳೆಯುತ್ತಿದ್ದ ವಿಜಯಪುರ ಇದೀಗ ತಾಪಮಾನಕ್ಕೂ ಹೆಸರಾಗುವಂವತಾಗಿದೆ.

ಶಶಿಕಾಂತ ಮೆಂಡೆಗಾರಕನ್ನಡಪ್ರಭ ವಾರ್ತೆ ವಿಜಯಪುರಮಾರ್ಚ್‌ ತಿಂಗಳು ಆರಂಭವಾಗಿದ್ದೆ ತಡ ಬಿಸಿಲ ಝಳ ಶುರುವಾಗಿದೆ. ರಾಜ್ಯದ ಜನರು ಬಿಸಿಯ ತಾಪಕ್ಕೆ ಹೈರಾಣಾಗಿ ವಿಲವಿಲ ಎನ್ನುತ್ತಿದ್ದಾರೆ. ಅದರಲ್ಲೂ ಈ ಬಾರಿ ಗುಮ್ಮಟ ನಗರಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿದ್ದು, ಜನರು ಆತಂಕಕ್ಕೊಳಗಾಗುವಂತೆ ಮಾಡಿದೆ. ಗೋಳಗುಮ್ಮಟ, ವಚನಗುಮ್ಮಟ, ಆಧ್ಯಾತ್ಮಿಕ ನೆಲೆಗಟ್ಟಿನಿಂದ ತನ್ನತ್ತ ಸೆಳೆಯುತ್ತಿದ್ದ ವಿಜಯಪುರ ಇದೀಗ ತಾಪಮಾನಕ್ಕೂ ಹೆಸರಾಗುವಂವತಾಗಿದೆ. ವಿಜಯಪುರದಲ್ಲಿ ಗರಿಷ್ಠ ತಾಪಮಾನ 42.3 ಉಷ್ಣಾಂಶ ದಾಖಲಾಗಿದೆ. ಅಲ್ಲದೇ, ಇದು ಉತ್ತರ ಕರ್ನಾಟಕದಲ್ಲೇ ಅತಿಹೆಚ್ಚು ತಾಪಮಾನ ದಾಖಲಾಗಿರುವ ಜಿಲ್ಲೆಯಾಗಿ ದಾಖಲೆ ಬರೆಯಿತು. ಇದರೊಂದಿಗೆ ವಿಜಯಪುರ ಮಾತ್ರವಲ್ಲ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲೂ ಹೀಟ್ ವೇವ್ ಕಂಡುಬರುತ್ತಿದೆ.ರಾಜ್ಯದಲ್ಲೇ ಅತಿಹೆಚ್ಚಿನ ಉಷ್ಣಾಂಶ ದಾಖಲಾಗಿದ್ದರಿಂದ ಜಿಲ್ಲೆಯಲ್ಲಿ ಬಿಸಿಗಾಳಿ ಹೆಚ್ಚಾಗಿದೆ. ಬಿಸಿಲುಗಾಳಿಯಿಂದ ಜನರಲ್ಲಿ ಆರೋಗ್ಯ ಟೆನ್ಷನ್ ಹೆಚ್ಚಾಗಿದೆ. ಅತಿ ಹೆಚ್ಚು ತಾಪಮಾನ ದಾಖಲಾದ ಹಿನ್ನೆಲೆ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗುತ್ತಿರುವ ಕಾರಣ ಮಾರ್ಚ್18ರಿಂದ ಜನತೆ ಬಿಸಿಲಲ್ಲಿ ಓಡಾಡದಂತೆ, ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಲಾಗಿದೆ. ಮಧ್ಯಾಹ್ನ 12 ರಿಂದ ಮಧ್ಯಾಹ್ನ 3ಗಂಟೆಯವರೆಗೆ ಮನೆಯಿಂದ ಹೊರಗೆ ಬರದಂತೆ ಹಾಗೂ ನೆರಳಿನಲ್ಲೇ ಇರುವಂತೆ ಕೆಎಸ್ಎನ್ಎಂಡಿಸಿ (ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ) ಸಹ ಜನರಿಗೆ ಎಚ್ಚರಿಕೆ ನೀಡಿದೆ.ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪನೆ

ಬಿಸಿಲಿನಿಂದ ತೊಂದರೆಗೊಳಗಾದವರ ರಕ್ಷಣೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ನಿಭಾಯಿಸಲು ವಿಶೇಷ ವಾರ್ಡ್ ಓಪನ್ ಮಾಡಲಾಗಿದೆ. ಅಧಿಕ ಬಿಸಿಗಾಳಿಯಿಂದ ಸನ್ ಸ್ಟ್ರೋಕ್ ಗೆ ಒಳಗಾದ ರೋಗಿಗಳು ಬಂದರೆ ತುರ್ತು ಚಿಕಿತ್ಸೆಗೆ ಅನುಕೂಲವಾಗಲಿ ಎಂದು ವಾರ್ಡ್ ನಿರ್ಮಿಸಲಾಗಿದೆ‌. 10 ಬೆಡ್ ಗಳನ್ನು ಹೊಂದಿರುವ ಈ ವಿಶೇಷ ವಾರ್ಡ್ ಅನ್ನು ಮಾರ್ಚ್ 1ರಿಂದಲೇ ಆರಂಭಿಸಲಾಗಿದೆ. ಇಲ್ಲಿ ಆಕ್ಸಿಜನ್, ಎಸಿ, ರೆಫ್ರಿಜಿರೇಟರ್ ಸೇರಿದಂತೆ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸಿದ್ದಪಡಿಸಲಾಗಿದೆ.ವಿಜಯಪುರ ಜಿಲ್ಲೆಯಲ್ಲಿ ಮಾ.19 ಮತ್ತು 20 ರಂದು ವಿಜಯಪುರ ಜಿಲ್ಲೆಯಲ್ಲಿ 42.3°ಸೆ ಉಷ್ಣಾಂಶ ದಾಖಲಾಗಿದೆ. ಅಲ್ಲದೇ, ರಾಯಚೂರು 42°ಸೆ, ಬಾಗಲಕೋಟೆ 41.5°ಸೆ, ಬೀದರ್ 41.4°ಸೆ, ಬೆಳಗಾವಿ 41.3°ಸೆ, ಕಲಬುರಗಿ 41.1°ಸೆ, ಯಾದಗಿರಿ 40.7°ಸೆ, ಗದಗ 40.5°ಸೆ, ತುಮಕೂರು 40.3°ಸೆ, ಚಿತ್ರದುರ್ಗ 40.2°ಸೆ, ದಾಖಲಾಗಿದೆ. ಇನ್ನುಳಿದಂತೆ ರಾಜ್ಯದ ಇತರೇ ಜಿಲ್ಲೆಗಳಲ್ಲಿ ಸರಾಸರಿ 36°ಸೆ ನಿಂದ 39°ಸೆ ವರೆಗೆ ತಾಪಮಾನ ದಾಖಲಾಗಿದ್ದು, ವಿಜಯಪುರ ಜಿಲ್ಲೆಯಲ್ಲಿಯೇ ಅಧಿಕ ತಾಪಮಾನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢೀಕರಿಸಿದೆ.ಜಿಲ್ಲೆಯಲ್ಲಿ ದಾಖಲೆ ಬಿಸಿಲು

ವಿಜಯಪುರ ಜಿಲ್ಲೆಯಲ್ಲೇ ಹಿಂದೆಂದು ಕಾಣದಂತಹ ತಾಪಮಾನ ಕಂಡುಬರುತ್ತಿದೆ. ಈ ಬಾರಿ ಮುಂಚಿತವಾಗಿಯೇ ತಾಪಮಾನ ಹೆಚ್ಚಾಗುತ್ತಿರುವುದು ನೋಡಿದರೆ ಈ ಹಿಂದಿನ ದಾಖಲೆಯನ್ನೇ ಮುರಿಯುವ ಲಕ್ಷಣಗಳು ಕಾಣಿಸುತ್ತಿವೆ. ಕಳೆದ 15ವರ್ಷಗಳಲ್ಲಿನ ತಾಪಮಾನ ನೋಡುವುದಾದರೆ 2010 ಮೇ 12 ಹಾಗೂ 19ರಂದು 43°ಸೆ ಅತಿಹೆಚ್ಚು ಉಷ್ಣಾಂಶ ದಾಖಲಾಗಿತ್ತು. 2013 ಏಪ್ರಿಲ್ 11ರಂದು 41.8°ಸೆ ದಾಖಲಾಗಿತ್ತು. 2014 ಏಪ್ರಿಲ್ 24ರಂದು 42.1°ಸೆ ದಾಖಲಾಗಿತ್ತು. ಬಳಿಕ 2017 ಏಪ್ರಿಲ್ ನಲ್ಲಿ 42.5°ಸೆ ದಾಖಲಾಗುವ ಮೂಲಕ ಈ ವರ್ಷದಲ್ಲಿ ಮಾರ್ಚ್‌ ತಿಂಗಳಲ್ಲಿಯೇ ರಾಜ್ಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಈ ವೇಳೆಯಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಉಷ್ಣಾಂಶ ಕಂಡುಬರುವ ಮೂಲಕ ಬಿಸಿಲ ನಾಡಾದ ಕಲಬುರಗಿ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ವಿಜಯಪುರ ಮೀರಿಸಿದಂತಾಗಿದೆ.ರಕ್ಷಣೆಗೆ ಉಪಾಯಗಳೇನು..?

ಮಧ್ಯಾಹ್ನ 12ರಿಂದ ಸಂಜೆ 5ರ ವರೆಗೆ ಬಿಸಿಲಿನಲ್ಲಿ‌ ಓಡಾಡದೆ ಮನೆಯಲ್ಲಿಯೇ ಇರಿ. ಹೀಟ್ ನಿಂದ ಪಾರಾಗಲು ಹಣ್ಣುಗಳನ್ನು ಸೇವಿಸಿ. ಹಣ್ಣಿನ ರಸ ಕುಡಿಯಬೇಕು, ನೀರು ಜಾಸ್ತಿ ಕುಡಿಯಬೇಕು. ತೆಳುವಾದ ಕಾಟನ ಬಟ್ಟೆ ಧರಿಸಬೇಕು. ಮಕ್ಕಳು, ವೃದ್ಧರು ಮನೆಯಿಂದ ಹೊರಗೆ ಬರಬಾರದು ಎಂದು ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕೋಟ್:ಬಿಸಿಲಾಘಾತಕ್ಕೊಳಗಾದ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು 10 ಹಾಸಿಗೆಗಳ ಪ್ರತ್ಯೆಕ ವಾರ್ಡ್ ಸ್ಥಾಪಿಸಲಾಗಿದೆ. ಯಾರಿಗಾದರೂ ಬಿಸಿಲಿನಿಂದ ತೊಂದರೆಯಾದರೆ ತಕ್ಷಣ ಜಿಲ್ಲಾಸ್ಪತ್ರೆಗೆ ಬನ್ನಿ. ಕೈ-ಕಾಲಿನಲ್ಲಿ ಶಕ್ತಿ ಇಲ್ಲದಂತಾಗುವುದು, ಸುಸ್ತಾಗುವುದು, ವಾಂತಿ ಬರುವುದು, ಕಣ್ಣಿಗೆ ಕತ್ತಲು ಬರುವುದು, ತಲೆ ತಿರುಗುವುದು ಇತ್ಯಾದಿಗಳು ಸನ್ ಸ್ಟ್ರೋಕ್ ಲಕ್ಷಣಗಳಾಗಿವೆ. ಮಕ್ಕಳು ಹಾಗೂ ವೃದ್ಧರಲ್ಲಿ ಬಿಸಿಲಿಗೆ ಹೆಚ್ಚಿನ ಸಮಸ್ಯೆಗಳು ಆಗಬಹುದು. ಹಾಗಾಗಿ ಯಾರಿಗೆ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾಸ್ಪತ್ರೆಕೋಟ್:

ಕಳೆದೆರೆಡು ದಿನಗಳ ಬಿಸಿಲು ನೋಡಿದರೆ ಈ ವರ್ಷ ಬಿಸಿಲಿನಲ್ಲಿ ನಾವು ಬದುಕುಳಿಯುತ್ತೇವಾ ಎಂಬ ಆತಂಕ ಶುರುವಾಗಿದೆ. ಮಾರ್ಚ್‌ನಲ್ಲೇ ಈ ರೀತಿಯಾದರೆ ಏಪ್ರೀಲ್ ಹಾಗೂ ಮೇ ತಿಂಗಳಿನಲ್ಲಿ ಜನರ ಗತಿಯೇನು ಎಂಬುದು ಚಿಂತಿಸುವಂತಾಗಿದೆ. ಯಾವುದೇ ಕೆಲಸಗಳು ಆಗುತ್ತಿಲ್ಲ, ಊಟ ಹೋಗುತ್ತಿಲ್ಲ, ನಿದ್ರೆ ಬರುತ್ತಿಲ್ಲ ಎಂಬ ಸ್ಥಿತಿ ಜಿಲ್ಲೆಯ ಜನರನ್ನು ಕಾಡುತ್ತಿದೆ.ರೇಣುಕಾ ನಿರ್ವಾಣಶೆಟ್ಟಿ, ನಗರದ ಮಹಿಳೆ.