ಸಾರಾಂಶ
ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರಿನ ಒಳಹರಿವು ಬರುತ್ತಿದ್ದು, ಶನಿವಾರ ಜಲಾಶಯಕ್ಕೆ 1,16,040 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದೆ. ಜಲಾಶಯದಲ್ಲಿ 65 ಟಿಎಂಸಿ ನೀರು ಶೇಖರಣೆಯಾಗಿದೆ.
ಮುನಿರಾಬಾದ್: ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರಿನ ಒಳಹರಿವು ಬರುತ್ತಿದ್ದು, ಶನಿವಾರ ಜಲಾಶಯಕ್ಕೆ 1,16,040 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದೆ. ಇದು ಪ್ರಸಕ್ತ ಸಾಲಿನಲ್ಲಿ ಹರಿದು ಬಂದ ಅತ್ಯಧಿಕ ಒಳಹರಿವು ಆಗಿದೆ. ಶನಿವಾರ ಜಲಾಶಯದ ನೀರಿನ ಮಟ್ಟವು 1621 ಅಡಿಗಳಿತ್ತು. ಜಲಾಶಯದಲ್ಲಿ 65 ಟಿಎಂಸಿ ನೀರು ಶೇಖರಣೆಯಾಗಿದೆ.
4 ದಿನದಲ್ಲಿ 3.93 ಲಕ್ಷ ಕ್ಯುಸೆಕ್: ಕಳೆದ 4 ದಿನಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ 3,93,210 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿದು ಬಂದಿದೆ. ಜು. 17ರಂದು ಜಲಾಶಯಕ್ಕೆ 63,320 ಸಾವಿರ ಕ್ಯುಸೆಕ್ ನೀರು, 18ರಂದು 1,04,060 ಲಕ್ಷ ಕ್ಯುಸೆಕ್ಸ್ ನೀರು, 19ರಂದು 1,08,790 ಲಕ್ಷ ಕ್ಯುಸೆಕ್ಸ್ ನೀರು ಹಾಗೂ 20ರಂದು 1,16,040 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದೆ. 4 ದಿನಗಳಲ್ಲಿ ಜಲಾಶಯಕ್ಕೆ 35 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಕಳೆದ 3 ದಿನಗಳಿಂದ ಪ್ರತಿದಿನ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 1 ಲಕ್ಷ ಕ್ಯುಸೆಕ್ ದಾಟಿದ್ದು, ಇದೇ ಪ್ರಮಾಣ ಮುಂದುವರಿದರೆ ಜಲಾಶಯ ಇನ್ನು 3-4 ದಿನಗಳಲ್ಲಿ ಭರ್ತಿಯಾಗುವುದು ಖಚಿತ.ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ: ತುಂಗಭದ್ರಾ ಜಲಾಶಯಕ್ಕೆ ಭಾರಿ ಒಳಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಬಹುದು. ಆಗ ಜಲಾಶಯದ ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುವುದು. ಕಾರಣ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.