ಬಿರುಸಿನ ಮಳೆ: ಮೂಲ್ಕಿಯ ವಿವಿಧೆಡೆ ಹಾನಿ

| Published : May 26 2024, 01:36 AM IST

ಸಾರಾಂಶ

ಕೊಕ್ಕರ್‌ ಕಲ್‌ ಬಳಿ ಪ್ರತಿ ಬಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ಬಂದಾಗ ನೀರು ನಿಲ್ಲುವುದು ಸಾಮಾನ್ಯವಾಗಿದ್ದು, ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆ ನದಿಯಂತಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಹೆದ್ದಾರಿಯಲ್ಲಿ ನೀರು ನಿಂತಿರುವುದು ಕಾಣದೆ ಕಾರುಗಳು ಅಪಘಾತಕ್ಕೀಡಾಯಿತು. ಕೆಲವು ಕಾರುಗಳು ಕೆಟ್ಟು ನಿಂತ ಘಟನೆ ನಡೆಯಿತು. ಕೆಲವು ಬೈಕ್‌ಗಳು ನೀರಿನಲ್ಲಿ ಮುಳುಗಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಶುಕ್ರವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಮೂಲ್ಕಿ ಕೊಕ್ಕರ್‌ ಕಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ನದಿಯಂತಾಗಿ ವಾಹನ ಸವಾರರು ಸಂಕಷ್ಟ ಪಡುವಂತಾಯಿತು. ಹಳೆಯಂಗಡಿಯ ಕದಿಕೆಯಲ್ಲಿ ಬಿರುಸಿನ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದಿದ್ದು, ಏಳು ಮಂದಿ ಪವಾಡ ಸದೃಶ ಪಾರಾದ ಘಟನೆ ನಡೆದಿದೆ.

ಕೊಕ್ಕರ್‌ ಕಲ್‌ ಬಳಿ ಪ್ರತಿ ಬಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ಬಂದಾಗ ನೀರು ನಿಲ್ಲುವುದು ಸಾಮಾನ್ಯವಾಗಿದ್ದು, ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆ ನದಿಯಂತಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಹೆದ್ದಾರಿಯಲ್ಲಿ ನೀರು ನಿಂತಿರುವುದು ಕಾಣದೆ ಕಾರುಗಳು ಅಪಘಾತಕ್ಕೀಡಾಯಿತು. ಕೆಲವು ಕಾರುಗಳು ಕೆಟ್ಟು ನಿಂತ ಘಟನೆ ನಡೆಯಿತು. ಕೆಲವು ಬೈಕ್‌ಗಳು ನೀರಿನಲ್ಲಿ ಮುಳುಗಿತು.

ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಿಕೆ ಮಸೀದಿ ಬಳಿಯ ನಿವಾಸಿ ಶಮೀನಾ ಕೌಸರ್ ಎಂಬವರ ಮನೆಗೆ ಬಿರುಸಿನ ಗಾಳಿಗೆ ಭಾರಿ ಗಾತ್ರದ ಹುಣಸೆ ಮರ ಬಿದ್ದು ಹಾನಿಯಾಗಿದೆ. ಮನೆಯ ಹೆಂಚು, ಗೋಡೆಗೆ ಹಾನಿಯಾಗಿದೆ. ಶಮೀನಾ ಕೌಸರ್ ವಿದೇಶದಲ್ಲಿದ್ದು, ಮನೆಯಲ್ಲಿ ವಾಸ್ತವ್ಯವಿದ್ದ ಅವರ ತಂದೆ ಆಲಿಯಬ್ಬ, ಸಣ್ಣ ಮಕ್ಕಳು ಸಹಿತ ಏಳು ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆಗೆ ಮರ ಬಿದ್ದ ಕೂಡಲೇ ಭಾರಿ ಶಬ್ದ ಕೇಳಿದ್ದು, ಮನೆಯವರು ಹೆದರಿ ಹೊರಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಕೋಟ್ಯಾನ್, ಮಾಜಿ ಉಪಾಧ್ಯಕ್ಷ ಸಾಹುಲ್ ಹಮೀದ್, ವಿ.ಎ. ನಿಶ್ಮಿತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೂಲ್ಕಿ ತಾಲೂಕು ವ್ಯಾಪ್ತಿಯ ಪಡುಪಣಂಬೂರು ಪರಿಸರದ ಹೊಯಿಗೆ ಗುಡ್ಡೆ ಬಳಿ ಚಿತ್ರಾಪು ಕಡೆಗೆ ಹೋಗುವ ರಸ್ತೆಗೆ ಮರ ಬಿದ್ದು, ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ಕೂಡಲೇ ಸ್ಥಳೀಯರು ಮರವನ್ನು ತೆರವು ಮಾಡಿ ಸಂಚಾರ ಸುಗಮಗೊಳಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿ ಜಂಕ್ಷನ್‌, ಹಳೆಯಂಗಡಿ ಜಂಕ್ಷನ್‌ ಹಾಗೂ ಕೆಲವು ಕಡೆಗಳಲ್ಲಿ ಕೃತಕ ನೆರೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಭಾಗದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಪ್ರತಿ ಮಳೆಗಾಲದಲ್ಲಿ ನೆರೆ ಉಂಟಾಗುತ್ತಿದ್ದು, ಹೆದ್ದಾರಿ ಪ್ರಾಧಿಕಾರ ಶಾಶ್ವತ ಪರಿಹಾರ ಇನ್ನೂ ಕೈಗೊಂಡಿಲ್ಲ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಗೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗಡೆ ಮಳೆ ನೀರು ನುಗ್ಗಿ ಕೃತಕ ನೆರೆ ಉಂಟಾಗಿ ಶ್ರೀ ದೇವರ ಉತ್ಸವಕ್ಕೆ ತೊಂದರೆಯಾಯಿತು. 40 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪತ್ತನಾಜೆಯ ಉತ್ಸವ ಸಮಯದಲ್ಲಿ ದೇವಸ್ಥಾನಕ್ಕೆ ಮಳೆ ನೀರು ಬಂದಿದೆ.

ಮೂಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಹಳೆಯಂಗಡಿ, ಕಟೀಲು, ಪಕ್ಷಿಕೆರೆ, ಪಡುಪಣಂಬೂರು ಅತಿಕಾರಿ ಬೆಟ್ಟು ಶಿಮಂತೂರು ಪರಿಸರದಲ್ಲಿ ಭಾರಿ ಮಳೆ, ಸಿಡಿಲು, ಗಾಳಿಗೆ ಸಣ್ಣಪುಟ್ಟ ಹಾನಿ ಸಂಭವಿಸಿದೆ.