ಕಾರ್ಕಳ: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದರ ನಡುವೆಯೇ ಶನಿವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಯು ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಸಾಕಷ್ಟು ಹಾನಿ ಉಂಟುಮಾಡಿದೆ.ಹೆಬ್ರಿ ಹಾಗೂ ಕಾರ್ಕಳದ ಕೆಲವು ಭಾಗಗಳಲ್ಲಿ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಪೂರೈಕೆ ಕೆಲಕಾಲ ಸ್ಥಗಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸುವ ಕಾರ್ಯ ನಡೆಸಿದರು.ನಿರಂತರ ಮಳೆಯಿಂದ ಕಾರ್ಕಳದ ಸ್ವರ್ಣ ನದಿ ಹಾಗೂ ಅದರ ಉಪನದಿಗಳು, ಹೆಬ್ರಿಯ ಸೀತಾ ನದಿ ಮತ್ತು ಅದರ ಉಪನದಿಗಳು ತುಂಬಿ ತುಳುಕುತ್ತಿದ್ದು, ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ನದಿ ತೀರದ ನಿವಾಸಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.ಗಾಳಿ-ಮಳೆಯ ಪರಿಣಾಮ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಹರ್ಷಿತಾ ಶೆಟ್ಟಿ ಅವರ ತೋಟದಲ್ಲಿ ಏಳು ಅಡಿಕೆ ಮರಗಳು ನೆಲಕ್ಕುರುಳಿ ಹಾನಿಗೊಳಗಾಗಿವೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 2 ಮತ್ತು 3ರಂದು ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯ ಕುದುರೆಮುಖ, ಗಂಗಡಿಕಲ್, ನೇತ್ರಾವತಿ ಹಾಗೂ ಕುರಿಂಜಾಲು ಭಾಗಗಳಲ್ಲಿ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ಕುದುರೆಮುಖ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಪ್ರಭಾಕರ್ ಕುಲಾಲ್ ಹಾಗೂ ಬೆಳ್ತಂಗಡಿ ವಲಯದ ಆರ್‌ಎಫ್‌ಒ ಶರ್ಮಿಷ್ಠ ಮನವಿ ಮಾಡಿದ್ದಾರೆ.ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕಾರ್ಕಳದಲ್ಲಿ 39.6 ಮಿ.ಮೀ., ಇರ್ವತ್ತೂರಿನಲ್ಲಿ 69.4 ಮಿ.ಮೀ., ಅಜೆಕಾರಿನಲ್ಲಿ 39.4 ಮಿ.ಮೀ., ಸಾಣೂರಿನಲ್ಲಿ 66.4 ಮಿ.ಮೀ., ಕೆದಿಂಜೆಯಲ್ಲಿ 36 ಮಿ.ಮೀ. ಹಾಗೂ ಮುಳಿಕಾರಿನಲ್ಲಿ 76 ಮಿ.ಮೀ. ಮಳೆ ದಾಖಲಾಗಿದೆ.ಮುಂದಿನ ಕೆಲವು ದಿನಗಳ ಕಾಲವೂ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಗುಡ್ಡ ಪ್ರದೇಶದ ನಿವಾಸಿಗಳು, ನದಿ ತೀರದ ಜನರು ಹಾಗೂ ವಾಹನ ಸವಾರರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಹಾಗೂ ಜಿಲ್ಲಾಡಳಿತ ಮನವಿ ಮಾಡಿದೆ.