ಸಾರಾಂಶ
ಹುಬ್ಬಳ್ಳಿ: ಮಹಾನಗರದಲ್ಲಿ ಬರೋಬ್ಬರಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ಭೂಮಿ ತಂಪಾಗಿಸಿತು. ರಸ್ತೆ ಮೇಲೆಲ್ಲ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
ಬೆಳಗ್ಗೆಯಿಂದ ಬಿಸಿಲಿನ ತಾಪ ಜೋರಾಗಿತ್ತು. ಸಂಜೆ 5.30ರ ವೇಳೆಗೆ ಸಣ್ಣದಾಗಿ ಶುರುವಾದ ಮಳೆ, ಕೆಲಹೊತ್ತಿನಲ್ಲೇ ರಭಸತೆ ಪಡೆಯಿತು. ಮಳೆ ಪ್ರಾರಂಭದಲ್ಲಿ ಕೆಲಕಾಲ ಆಲಿಕಲ್ಲುಗಳು ಬಿದ್ದವಾದರೂ ಕೆಲಸಮಯದ ಬಳಿಕ ಆಲಿಕಲ್ಲು ಬೀಳುವುದು ನಿಂತಿತು. ಆಗ ವರುಣನ ಅಬ್ಬರ ಜೋರಾಯಿತು.ಬಿಆರ್‌ಟಿಎಸ್ ಕಾರಿಡಾರನಲ್ಲೂ ನೀರು ನಿಂತಿತ್ತು. ಇನ್ನು ಇಲ್ಲಿನ ತುಳಜಾಭವಾನಿ ದೇವಸ್ಥಾನದ ಬಳಿ ಮಳೆ ನೀರೆಲ್ಲ ರಸ್ತೆ ಮೇಲೆ ಹರಿದು ಬಂದಿತ್ತು. ಇದರಿಂದ ಚರಂಡಿಯ ಗಲೀಜೆಲ್ಲ ರಸ್ತೆ ಮೇಲೆ ಹರಿದಾಡುತ್ತಿತ್ತು. ಇದು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿತು. ಉಳಿದಂತೆ ಎಲ್ಲೆಡೆ ರಸ್ತೆ ಮೇಲೆ ನೀರೆಲ್ಲ ಹರಿದು ಪಾದಚಾರಿಗಳು, ದ್ವಿಚಕ್ರವಾಹನ ಸವಾರರು, ವಾಹನ ಚಲಾಯಿಸಲು ಹರಸಾಹಸ ಪಡುವಂತಾಗಿತ್ತು.
ಇನ್ನು ಕುಂದಗೋಳ, ನವಲಗುಂದ, ಅಣ್ಣಿಗೇರಿಯಲ್ಲೂ ಕೆಲಕಾಲ ಮಳೆ ಸುರಿದಿದೆ.ಧಾರವಾಡದಲ್ಲಿ ಉತ್ತಮ ಮಳೆ
ಧಾರವಾಡ: ಕೆಲವು ದಿನಗಳಿಂದ ಬಿರು ಬಿಸಿಲಿನಿಂದ ಕಂಗಾಲಾಗಿದ್ದ ಧಾರವಾಡ ಜನತೆಗೆ ಬುಧವಾರದ ಧಾರಾಕಾರ ಮಳೆ ಆಹ್ಲಾದಕರ ವಾತಾವರಣ ಒದಗಿಸಿತು.ಹಲವು ದಿನಗಳಿಂದ ಧಾರವಾಡ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಶುರುವಾಗಿದ್ದು, ಬೆಳಗಿನಿಂದ ಸಂಜೆ ವರೆಗೂ ಬಿಸಿಲು ಸಂಜೆ ನಂತರ ಮಳೆ ಬರುತ್ತಿತ್ತು. ಒಂದು ವಾರದಿಂದ ಮಳೆಯಾಗಿರಲಿಲ್ಲ. ಇದೀಗ ಬುಧವಾರ ಮಧ್ಯಾಹ್ನ ವರೆಗೆ ತೀವ್ರ ಬಿಸಿಲಿದ್ದು, ಮಧ್ಯಾಹ್ನ 3ರ ನಂತರ ಮೋಡ ಮುಸುಕಿ 4ರ ನಂತರ ಗುಡುಗು-ಸಿಡಿಲಿನೊಂದಿಗೆ ಧಾರಾಕಾರವಾಗಿ ಮಳೆ ಸುರಿಯಿತು. ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ದಿದ್ದು ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ. ಎಂದಿನಂತೆ ಧಾರವಾಡ- ಹುಬ್ಬಳ್ಳಿ ಮಾರ್ಗದ ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಬೈಕ್ ಸವಾರರಿಗೆ ತೊಂದರೆಯಾಯಿತು.