ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಭಾರಿ ಮಳೆ

| Published : Jun 28 2024, 12:55 AM IST

ಸಾರಾಂಶ

ಭಾರಿ‌ ಮಳೆಗೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿನ ವಸಂತಿ ಶೆಟ್ಟಿ ಎಂಬವರ ಮನೆಯಂಗಳದಲ್ಲಿದ್ದ ಬಾವಿಯು ಗುರುವಾರ ಕುಸಿತವಾಗಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬುಧವಾರ ಕಾರ್ಕಳ ತಾಲೂಕಿನಲ್ಲಿ 1200 ಮಿ.ಮೀ. ಮಳೆಯಾಗಿದ್ದು, ಸರಾಸರಿ 171 ಮಳೆಯಾಗಿದೆ.

ಗಾಳಿ ಮಳೆಗೆ ಈದು ಗ್ರಾಮದ ರತ್ನ ದೇವಾಡಿಗ ಎಂಬವರ ಮನೆಯ ಗೋಡೆ ಭಾಗಶಃ ಕುಸಿದು ಬಿದ್ದು ಅಂದಾಜು 15 ಸಾವಿರ ರು. ನಷ್ಟ ಸಂಭವಿಸಿದೆ. ಎಳ್ಳಾರೆ ಗ್ರಾಮದ ಸುಮತಿ ನಾಯ್ಕ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪರಿಣಾಮ ಅಂದಾಜು 30 ಸಾವಿರ ರು. ನಷ್ಟ ಸಂಭವಿಸಿದೆ. ಗುರುವಾರ ಸುರಿದ ಮಳೆಗೆ ೩ ಕಾರ್ಕಳ ತಾಲೂಕು ಕಚೇರಿಯ ಸಬ್‌ರಿಜಿಸ್ಟ್ರೇಷನ್‌ ಆಫೀಸ್ ಹಿಂಭಾಗದಲ್ಲಿ ಮರ ಬಿದ್ದು ಆವರಣ ಗೋಡೆ ಕುಸಿದಿದೆ. ನೀರೆ ಬೈಲೂರಿನ ಮೀನು ಮಾರುಕಟ್ಟೆಗೆ ಮರ ಬಿದ್ದು, ವ್ಯಾಪಾರಿಗಳಿಬ್ಬರು ಆಸ್ಪತ್ರೆ ದಾಖಲಾಗಿದ್ದಾರೆ. ಅನಂತಶಯನದಲ್ಲಿ ಅನಂತ ಭಟ್ ಎಂಬವರ ಮನೆಗೆ ತೆಂಗಿನ ಮರ ಬಿದ್ದಿದೆ. ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಖ್ಯ ರಸ್ತೆಯಲ್ಲಿ ಮರಬಿದ್ದಿದ್ದು 3 ವಿದ್ಯುತ್ ಕಂಬಗಳು ತುಂಡಾಗಿವೆ.

ಕುಸಿದ ಬಾವಿ

ಭಾರಿ‌ ಮಳೆಗೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿನ ವಸಂತಿ ಶೆಟ್ಟಿ ಎಂಬವರ ಮನೆಯಂಗಳದಲ್ಲಿದ್ದ ಬಾವಿಯು ಗುರುವಾರ ಕುಸಿತವಾಗಿದೆ.ಸುಮಾರು 58 ಅಡಿ ಆಳವಾಗಿರುವ ಬಾವಿಯು ಹತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಮೂರು ವರ್ಷಗಳ ಹಿಂದೆ ಈ ಬಾವಿ ನಿರ್ಮಾಣ ಮಾಡಲಾಗಿತ್ತು. ಬಾವಿಯ ದಂಡೆ ಕುಸಿತವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಗಲಿನಲ್ಲಿ ಬಾವಿ ಕುಸಿತವಾದ ಕಾರಣ ಮನೆಯವರ ಗಮನಕ್ಕೆ ಬಂದಿದೆ. ಬಾವಿಯ ಹತ್ತು ಅಡಿ ದೂರದಲ್ಲಿ ಮನೆಯಿದೆ. ಅದರ ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿದೆ.