ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ಕೋಲಾರದಲ್ಲಿ ಶುಕ್ರವಾರ ತಡರಾತ್ರಿ ಬಿದ್ದ ಧಾರಕಾರ ಮಳೆಯಿಂದಾಗಿ ನಗರದ ವಿವಿಧ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕೋಲಾರದ ಕಾಲೇಜು ವೃತ್ತದಲ್ಲಿರುವ ಕುವೆಂಪು ಪಾರ್ಕ್‌ನ ತಗ್ಗು ಪ್ರದೇಶದ ಮನೆಗಳಿಗೆ ಮಳೆನೀರು ನುಗ್ಗಿದ ಪರಿಣಾಮ ಮನೆಯವರೆಲ್ಲ ಗ್ಗುವ ಮೂಲಕ ರಾತ್ರಿಯೆಲ್ಲ ನಿದ್ರೆಗೆಟ್ಟು ನೀರು ಹೊರಹಾಕುವ ಕೆಲಸ ಮಾಡುವ ಸ್ಥಿತಿ ಉಂಟಾಗಿತ್ತು, ಶನಿವಾರ ಮುಂಜಾನೆ ವಾಕಿಂಗ್ ಮಾಡುವ ನಾಗರಿಕರಿಗೆ ಪಾರ್ಕಿನಲ್ಲಿ ನೀರು ನಿಂತಿದ್ದರಿಂದ ವಾಕಿಂಗ್ ಮಾಡಲು ಸಾಧ್ಯವಾಗದೆ ಹಿಂತಿರುಗಬೇಕಾಯಿತು.
ಉರುಳಿದ ಮರ: ಶಡ್‌ಗೆ ಹಾನಿನಗರದ ಸರ್ವಜ್ಞ ಉದ್ಯಾನವನದಲ್ಲಿನ ಸರ್ವಜ್ಞ ಪುತ್ಥಳಿಕೆಗೆ ಅಳವಡಿಸಿದ್ದ ಶೀಟ್‌ಗಳ ಹೊದಿಕೆ ಮೇಲೆ ಹಿಂಭಾಗದ ಮರ ಉರುಳಿ ಬಿದ್ದು ಜಖಂಗೊಂಡಿದೆ. ಸ್ಥಳಕ್ಕಾಗಮಿಸಿದ ನಗರಸಭೆ ಅಧಿಕಾರಿಗಳು ನೆರಕ್ಕುರಳಿದ ಮರವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಂಗಾರಪೇಟೆ ಮಾರ್ಗದ ರಸ್ತೆ ಬದಿಯ ತಗ್ಗದ ಪ್ರದೇಶದ ಆರ್.ಟಿ.ಓ. ಕಚೇರಿಯ ಸುತ್ತಲು ಮಳೆನೀರು ಸರಾಗವಾಗಿ ಹರಿಯದ ಕಚೇರಿ ಸುತ್ತಲೂ ನೀರು ನಿಲ್ಲುವ ಮೂಲಕ ಆರ್.ಟಿ.ಓ. ಕಟ್ಟಡವು ದ್ವೀಪದಂತಾಗಿತ್ತು.ಇಂದು ಎರಡನೇ ಶನಿವಾರ ರಜೆ ಇದ್ದ ಕಾರಣ ಸಾರ್ವಜನಿಕರಾಗಲಿ ಅಥವಾ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಕಚೇರಿಗೆ ಬಾರದ ಹಿನ್ನಲೆಯಲ್ಲಿ ಯಾರಿಗೂ ತೊಂದರೆಯಾಗಲಿಲ್ಲ. ಆದರೆ ಪ್ರತಿಭಾರಿ ಮಳೆ ಬಂದಾಗಲು ಈ ಕಚೇರಿ ಕಟ್ಟಡಗಳ ಸುತ್ತಲೂ ಜಲಾವೃತ್ತಗೊಳ್ಳುವುದು ಸಾಮಾನ್ಯವಾಗಿದೆ. ನಗರದ ಖಾದ್ರಿಪುರ, ಕಾರಂಜಿಕಟ್ಟೆ, ಮುನೇಶ್ವರ ನಗರ, ಸಾರಿಗೆ ನಗರ, ರಹಮತ್ ನಗರ ಮುಂತಾದ ತಗ್ಗು ಪ್ರದೇಶಗಳು ಜಲವೃತಗೊಂಡು ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು.
ವಾಹನ ಸವಾರರ ಪರದಾಟಶುಕ್ರವಾರ ರಾತ್ರಿ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ ನೀರು ಸಂಗ್ರಹವಾದ ಪರಿಣಾಮ ವಾಹನ ಸವಾರರು ಪರದಾಡುತ್ತಿರುವುದು ಕಂಡುಬಂತು. ಅಲ್ಲದೆ ಯುಜಿಡಿಗಳ ಸಮಸ್ಯೆಯಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು,
ತಿಂಗಳಾನುಗಟ್ಟಲೇ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಮಳೆನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುವ ಮೂಲಕ ನಗರಸಭೆ ಕಾರ್ಯವೈಖರಿಗೆ ಸಾರ್ವಜನಿಕರು ಹಿಡಿಶಾಪ ಹಾಕುವುದು ಮಾಮೂಲಿಯಾಗಿತ್ತು.ಕೆರೆಗಳಲ್ಲಿ ನೀರು ಸಂಗ್ರಹ
ನಗರದಲ್ಲಿ ಕಳೆರಡು ದಿನಗಳಿಂದ ತಡರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳಲ್ಲಿ ಮಳೆ ನೀರು ಶೇಖರಣೆಯಾಗುತ್ತಿದ್ದು, ಮಳೆ ಮುಂದುವರಿದರೆ ಒಂದೆರಡು ದಿನಗಳಲ್ಲಿ ಕೆರೆಗಳು ಕೋಡಿ ಹರಿಯುವ ಸಾಧ್ಯತೆ ಇದೆ. ಉತ್ತಮ ಮಳೆಯಾಗುತ್ತಿರುವುದು ರೈತರಲ್ಲಿ ಮೊಗದಲ್ಲಿ ಸಂತಸ ಮೂಡಿಸಿದೆ.ಅಂತರಗಂಗೆಯ ಜತಪಾತ
ಶುಕ್ರವಾರ ತಡರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಅಂತರಗಂಗೆಯ ಬೆಟ್ಟದ ತಪ್ಪಲಿನಲ್ಲಿ ಜಲಧಾರೆಗಳು ಸೃಷ್ಟಿಯಾಗಿವೆ. ಝುಳು ಝುಳು ಜಲಪಾತಗಳನ್ನು ವೀಕ್ಷಿಸಲು ಕೋಲಾರ ಸುತ್ತಮುತ್ತಲಿ ಸಾರ್ವಜನಿಕರು ಹಾಗೂ ಬೆಂಗಳೂರು ಹಾಗೂ ಹೊರರಾಜ್ಯಗಳಿಂದ ಪ್ರವಾಸಿಗರು ಅಂತರಗಂಗೆ ಕ್ಷೇತ್ರಕ್ಕೆ ಆಗಮಿಸುವುದಲ್ಲದೆ ಜಲಪಾತಗಳಲ್ಲಿ ಪ್ರವಾಸಿಗರು ನೀರಿನಲ್ಲಿ ಆಟವಾಡುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸುತ್ತಿದ್ದಾರೆ.ಅಂತರಗಂಗೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನಾದರೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿಗಳು ಎಚ್ಚೆತ್ತುಕೊಂಡು ಅಂತಗಂಗೆಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂದು ಪ್ರವಾಸಿಗರ ಒತ್ತಾಯವಾಗಿದೆ.