ಭಾರಿ ಮಳೆಗೆ ರಾಜ್ಯ ತತ್ತರ: ತೀವ್ರ ಹಾನಿ,ಜನಜೀವನ ಅಸ್ತವ್ಯಸ್ತ

| Published : Aug 19 2025, 01:00 AM IST

ಭಾರಿ ಮಳೆಗೆ ರಾಜ್ಯ ತತ್ತರ: ತೀವ್ರ ಹಾನಿ,ಜನಜೀವನ ಅಸ್ತವ್ಯಸ್ತ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು, ಮಲೆನಾಡು, ಉತ್ತರ ಕರ್ನಾಟಕ, ಕರಾವಳಿ ಸೇರಿ ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ, ತುಂಗಾ, ತುಂಗಭದ್ರಾ, ಶರಾವತಿ, ನೇತ್ರಾವತಿ, ಕೃಷ್ಣಾ ಸೇರಿ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ.

- 5 ಲಕ್ಷ ಹೆಕ್ಟೇರ್‌ ಬೆಳೆ ನಾಶ, 150 ಮನೆ ಧರೆಗೆ- ನಲುಗಿದ ಉತ್ತರ ಕರ್ನಾಟಕ, ಕರಾವಳಿ ಭಾಗ

- ಕೊಡಗು, ಮಲೆನಾಡಲ್ಲೂ ವರುಣನ ಆರ್ಭಟ

---

- ರಂಗನತಿಟ್ಟು ಪಕ್ಷಿಧಾಮ, ಶೃಂಗೇರಿಯ ಕಪ್ಪೆ ಶಂಕರ, ಹಂಪಿ ಸ್ಮಾರಕಗಳು ಜಲಾವೃತ

- ಮಹಾರಾಷ್ಟ್ರದಲ್ಲಿ ಭಾರಿ ಮಳೆಗೆ ಚಿಕ್ಕೋಡಿ ಭಾಗದಲ್ಲಿನ 8 ಸೇತುವೆಗಳು ಜಲಾವೃತ

- ಬೆಂಗಳೂರು, ಧಾರವಾಡ, ಕೊಪ್ಪಳ, ಗದಗ, ಹಾವೇರಿ, ಚಿತ್ರದುರ್ಗ ಸೇರಿ ಹಲವೆಡೆ ಮಳೆ

- ತೀವ್ರ ಶೀತಗಾಳಿ, ಜನಜೀವನ ಏರುಪೇರು, ಹಲವೆಡೆ ಜನರಿಗೆ ಕೆಮ್ಮು, ನೆಗಡಿ, ಜ್ವರಬಾಧೆ

- ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆಯಾಗಲೆಂದು ಮಳೆ ದೇವರಿಗೆ ಸೇವೆ

===

---

5 ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆಈ ಮಧ್ಯೆ, ಭಾರೀ ಮಳೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಧಾರವಾಡ, ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳು, ಚಿಕ್ಕಮಗಳೂರು ಜಿಲ್ಲೆಯ 5 ತಾಲೂಕುಗಳು, ಬೆಳಗಾವಿ ಜಿಲ್ಲೆಯ 8 ತಾಲೂಕುಗಳ ಶಾಲಾ-ಕಾಲೇಜುಗಳು ಇದರಲ್ಲಿ ಸೇರಿವೆ.

-----

ಇಂದು, ನಾಳೆ ವ್ಯಾಪಕ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಮಂಗಳವಾರ ಮತ್ತು ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ.19 ಮತ್ತು 20 ರಂದು ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗಲಿದೆ. ಆ.21 ರಂದು ಮಳೆಯ ಪ್ರಮಾಣ ಕಡಿಮೆಯಾಗಲಿದ್ದು ಮೋಡ ಕವಿದ ವಾತಾವರಣವಿರಲಿದೆ. ತಿಂಗಳ ಕೊನೆಯ ವಾರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲಿನ ವಾತಾವರಣ ನಿರ್ಮಾಣವಾಗಲಿದೆ ಎಂದು ಅದು ಹೇಳಿದೆ. ಬೆಂಗಳೂರಿನಲ್ಲಿ 5 ದಿನ ಮಳೆ ಸಾಧ್ಯತೆ ಇದೆ.

----

ಭಾರೀ ಮಳೆಗೆ ಹಲವು ಡ್ಯಾಂಗಳು ಭರ್ತಿಬೆಂಗಳೂರು: ಭಾರೀ ಮಳೆಗೆ ರಾಜ್ಯದ ಪ್ರಮುಖ ಡ್ಯಾಂಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು 4 ಅಡಿ ಬಾಕಿ ಇದೆ. ಭದ್ರಾ ಭರ್ತಿಗೆ ಕೇವಲ ಒಂದು ಅಡಿಯಷ್ಟೇ ಬಾಕಿ ಇದೆ. ಹಾಸನ ಭಾಗದ ಹೇಮಾವತಿಗೆ 32,925 ಕ್ಯುಸೆಕ್‌ ಒಳ ಹರಿವಿದೆ. ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಆಲಮಟ್ಟಿಗೆ ಒಳಹರಿವು ಹೆಚ್ಚಿದೆ. ಬಸವಸಾಗರ ಜಲಾಶಯದಿಂದ 1.27 ಲಕ್ಷ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೂ ಒಳಹರಿವು ಹೆಚ್ಚಿದೆ. ಕೊಡಗಿನಲ್ಲಿ ಮಳೆಯಾಗುತ್ತಿರುವ ಕಾರಣ ಕೆಆರ್‌ ಎಸ್‌ನಿಂದ 1.2 ಲಕ್ಷ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಡಗು, ಮಲೆನಾಡು, ಉತ್ತರ ಕರ್ನಾಟಕ, ಕರಾವಳಿ ಸೇರಿ ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ, ತುಂಗಾ, ತುಂಗಭದ್ರಾ, ಶರಾವತಿ, ನೇತ್ರಾವತಿ, ಕೃಷ್ಣಾ ಸೇರಿ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಸುಮಾರು 5 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದ್ದು, 150 ಮನೆ ಧರೆಗೆ ಉರುಳಿವೆ.

ಹಂಪಿಯ ಸ್ಮಾರಕಗಳು, ಶೃಂಗೇರಿಯ ಕಪ್ಪೆ ಶಂಕರ ದೇಗುಲ, ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮ ಸೇರಿ ಹಲವು ಪ್ರವಾಸಿ ತಾಣಗಳು ಜಲಾವೃತಗೊಂಡಿವೆ.

ಕೊಡಗಿನಲ್ಲಿ ಧಾರಾಕಾರ ಮಳೆ:

ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮರಗಳು ಬಿದ್ದು, ಚೆಟ್ಟಳ್ಳಿ-ಮಡಿಕೇರಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕೆಆರ್‌ಎಸ್‌ಗೂ ಒಳಹರಿವು ಹೆಚ್ಚಿದ್ದು, ಡ್ಯಾಂನಿಂದ 1.2 ಲಕ್ಷ ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದರಿಂದಾಗಿ ರಂಗನತಿಟ್ಟು ಪಕ್ಷಿಧಾಮಕ್ಕೆ ನೀರು ನುಗ್ಗಿದ್ದು, ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿನ ಮಂಟಪಗಳು, ಸ್ನಾನಘಟ್ಟದ ಮಂಟಪಗಳು, ಶ್ರೀಸಾಯಿ ಮಂದಿರ, ಐತಿಹಾಸಿಕ ವೆಲ್ಲೆಸ್ಲಿ ಸೇತುವೆಗಳು ಜಲಾವೃತಗೊಂಡಿವೆ. ಈ ಮಧ್ಯೆ, ಶ್ರೀರಂಗಪಟ್ಟಣದ ರೈಲ್ವೇ ಬ್ರಿಡ್ಜ್‌ ಬಳಿ ನೀರಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ ನದಿಯ ಪ್ರವಾಹಕ್ಕೆ ಶೃಂಗೇರಿಯ ಕಪ್ಪೆ ಶಂಕರ ದೇಗುಲ, ಗುರುಗಳ ಸಂಧ್ಯಾವಂದನೆ ಮಂಟಪ, ಗಾಂಧಿ ಮೈದಾನಗಳು ಜಲಾವೃತಗೊಂಡಿವೆ. ಕೆಮ್ಮಣ್ಣುಗುಂಡಿ ಬಳಿ ಹೊಂಡಕನ ಹಳ್ಳಿ ಬಳಿ ಗುಡ್ಡಿದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ತುಂಗಭದ್ರಾ ನದಿಯಲ್ಲೂ ನೆರೆ ಬಂದಿದ್ದು, ಹಂಪಿಯ ಪುರಂದರದಾಸರ ಮಂಟಪ ಸೇರಿ ಹಲವು ಸ್ಮಾರಕಗಳು, ಆನೆಗುಂದಿಯಲ್ಲಿನ ಕೃಷ್ಣದೇವರಾಯರ ಸಮಾಧಿಗಳು ಜಲಾವೃತಗೊಂಡಿವೆ. ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಕಂಪ್ಲಿ-ಗಂಗಾವತಿ ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹರಿಹರ ತಾಲೂಕಿನ ಪ್ರಸಿದ್ಧ ಕ್ಷೇತ್ರ ಉಕ್ಕಡಗಾತ್ರಿಯ ಸ್ನಾನಘಟ್ಟ ಮುಳುಗಡೆಯಾಗಿದೆ. ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಗಂಜಿ ಕೇಂದ್ರ ತೆರೆಯಲಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೆರೆ ಬಂದಿದ್ದು, ಚಿಕ್ಕೋಡಿ ಭಾಗದಲ್ಲಿ 8 ಸೇತುವೆಗಳು ಜಲಾವೃತಗೊಂಡಿವೆ. ಹಾಸನ ಭಾಗದಲ್ಲೂ ಮಳೆಯಾಗುತ್ತಿದ್ದು, ಸಕಲೇಶಪುರ ತಾಲೂಕಿನ ಬಿಸ್ಲೆ ಘಾಟ್ ರಸ್ತೆಯಲ್ಲಿ ಮರಗಳು ಬಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಬೀದರ್‌ ಜಿಲ್ಲೆಯಲ್ಲಿಯೂ ಮಳೆ ಅಬ್ಬರಿಸುತ್ತಿದ್ದು, ಮಂಜ್ರಾ ನದಿಯ ಪ್ರವಾಹದಲ್ಲಿ 30ಕ್ಕೂ ಹೆಚ್ಚು ಜಾನುವಾರುಗಳು ಕೊಚ್ಚಿಹೋಗಿವೆ.

ಕಮಲನಗರ ತಾಲೂಕಿನ ದಾಪಕಾ ಹೋಬಳಿಯಲ್ಲಿ ಸೋಮವಾರ ಒಂದೇ ದಿನ 300 ಮಿ.ಮೀ. ಮಳೆ ಬಿದ್ದಿದೆ. ಕಲಬುರಗಿ ಜಿಲ್ಲೆಯ ಕಾಗಿಣಾ ನದಿ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.4.85 ಲಕ್ಷ ಹೆಕ್ಟೇರ್‌ ಬೆಳೆ:

ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಹಾನಿಗೆ ಒಳಗಾಗಿವೆ. ಬೀದರ್‌, ಕಲಬುರಗಿ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ 4.85 ಲಕ್ಷ ಹೆಕ್ಟೇರ್‌ ಪ್ರದೇಶವ್ಯಾಪ್ತಿಯ ಬೆಳೆಗಳು ಹಾನಿಗೆ ಒಳಗಾಗಿವೆ. ಇದೇ ವೇಳೆ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್‌, ಕಲಬುರಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಇದೇ ವೇಳೆ, ರಾಜಧಾನಿ ಬೆಂಗಳೂರು, ಧಾರವಾಡ, ಕೊಪ್ಪಳ, ಗದಗ, ಹಾವೇರಿ, ಚಿತ್ರದುರ್ಗ ಸೇರಿ ರಾಜ್ಯದ ಇತರೆಡೆಯೂ ಮಳೆಯಾಗುತ್ತಿದ್ದು, ಶೀತಗಾಳಿ ಬೀಸುತ್ತಿದೆ.