ಸಾರಾಂಶ
ರೋಣ : ಗುಡುಗು, ಸಿಡಿಲು, ಗಾಳಿ ಸಮೇತ ರಭಸವಾಗಿ ಸೋಮವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ರೋಣ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮಳೆ ಸುರಿಯಿತು.
ಮಳೆಯಿಂದ ಕೆಲ ಕಾಲ ಜನಜೀವನ ಅಸ್ತವ್ಯಸ್ತವಾಯಿತು. ಗಟಾರು ತುಂಬಿ ನೀರು ರಸ್ತೆ ಮೇಲೆ ಹಳ್ಳದಂತೆ ಹರಿದಿದ್ದರಿಂದ ಸ್ಪಷ್ಟವಾಗಿ ರಸ್ತೆ ಕಾಣದೆ ಪಟ್ಟಣದಲ್ಲಿ ಸಂಚಾರಕ್ಕೆ ಅಡತಡೆ ಉಂಟಾಯಿತು.ಶಿವಪೇಟಿ, ಶಿವಾನಂದ ನಗರ, ಕುರಬಗಲ್ಲಿ ಓಣಿಯಲ್ಲಿನ ಮಳೆ ನೀರು ಸೂಡಿ ವೃತ್ತದಿಂದ ಮುಲ್ಲನಬಾವಿ ವೃತ್ತದ ವರೆಗಿನ ಮುಖ್ಯ ರಸ್ತೆ ಮೇಲೆ ಹಳ್ಳದಂತೆ ಹರಿಯಿತು. ಇದರಿಂದ ಮುಲ್ಲನಬಾವಿ ವೃತ್ತದಿಂದ ಬಸ್ ನಿಲ್ದಾಣ ವರೆಗೆ, ಸೂಡಿ ವೃತ್ತದಿಂದ ಸಿದ್ಧಾರೂಢ ಮಠದ ವರೆಗೆ, ಬದಾಮಿ ರಸ್ತೆಯ ಎಸ್.ಆರ್. ಪಾಟೀಲ ಮಾದರಿ ಕೇಂದ್ರ ಶಾಲೆ ವರೆಗೆ ಒಂದು ಗಂಟೆಗೂ ಹಚ್ಚುಕಾಲ ಟ್ರಾಫಿಕ್ ಜಾಮ್ ಆಗಿತ್ತು. ಬದಾಮಿ, ಬಾಗಲಕೋಟೆ, ಗದಗ, ಗಜೇಂದ್ರಗಡ, ನವಲಗುಂದ, ಹುಬ್ಬಳ್ಳಿಗೆ ತೆರಳುವ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು.
ಕಿತ್ತುಹೋದ ಚಾವಣಿ:
ಜೋರಾಗಿ ಮಳೆ ಸಮೇತ ಬೀಸಿದ ಗಾಳಿಗೆ ಪಟ್ಟಣದ ಕಲ್ಯಾಣ ನಗರ, ಶ್ರೀನಗರ, ಶಿವಾನಂದ ನಗರ, ಗಾಂಧಿನಗರ, ಆಶ್ರಯ ಕಾಲನಿ, ದಲಿತ ಕಾಲನಿ ಮುಂತಾದೆಡೆ ತಗಡಿನ ಚಾವಣಿ ಹಾರಿಹೋಗಿದೆ.
ದವಸ-ಧಾನ್ಯ ನೀರು ಪಾಲು:
ಹೊಳೆಆಲೂರ ಕ್ರಾಸ್‌ನಲ್ಲಿರುವ ಲಕ್ಷ್ಮಣ ಗೌಡಣ್ಣವರ ಅವರ ಹೊಲದಲ್ಲಿನ ದವಸ-ಧಾನ್ಯ ಸಂಗ್ರಹ ಶೆಡ್‌ಗೆ ಅಳವಡಿಸಲಾದ 30ಕ್ಕೂ ಹೆಚ್ಚು ತಗಡುಗಳು ಸಂಪೂರ್ಣ ಕಿತ್ತು ಹೋಗಿದ್ದು, ಬಹುಕೇಕ ತಗಡುಗಳು ನಜ್ಜುಗುಜ್ಜಾಗಿವೆ. ಇದರಿಂದ ಶೆಡ್ಡಿನಲ್ಲಿ ಸ್ವೀಟ್ ಮಾರ್ಟ್‌ಗೆ ಬೇಕಾದ ಅಪಾರ ಪ್ರಮಾಣದ ಜೋಳ ಹಿಟ್ಟು, ಗೋವಿನಜೋಳ ಹಿಟ್ಟು, ಗೋದಿ, ರವೆ, ಗೋದಿ ಹಿಟ್ಟು, ಮೈದಾ ಹಿಟ್ಟು, ಸಕ್ಕರೆ, ಬೆಲ್ಲ ಸೇರಿದಂತೆ ಲಕ್ಷಾಂತರ ಮೌಲ್ಯದ ದವಸ-ಧಾನ್ಯಗಳು ನೀರು ಪಾಲಾಗಿವೆ.
ಅಂಗಡಿ, ಮನೆಗಳಿಗೆ ನುಗ್ಗಿದ ನೀರು:
ದಿಢೀರ್ ರಭಸವಾಗಿ ಸುರಿದ ಮಳೆಯಿಂದಾಗಿ ಚರಂಡಿ ತುಂಬಿ ಹರಿದಿದ್ದರಿಂದ ಸೂಡಿ ವೃತ್ತದಿಂದ ವೀರಭದ್ರೇಶ್ವರ ದೇವಸ್ಥಾನದ ವರೆಗಿನ ಕೆಲ ಅಂಗಡಿಗಳ ಒಳಗೆ ಮತ್ತು ಕುರಬಗಲ್ಲಿ, ಶಿವಪೇಟಿ 1, 2, 4, 7ನೇ 8ನೇ ಹಾಗೂ 9ನೇ ಕ್ರಾಸ್‌ನಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ಅಂಗಡಿ ಮತ್ತು ಮನೆಯೊಳಗೆ ನುಗ್ಗಿದ ನೀರನ್ನು ಹೊರ ಹಾಕುವಲ್ಲಿ ಅಂಗಡಿ, ಮನೆ ಮಾಲೀಕರು ತೀವ್ರ ಹರಸಾಹಸ ಪಟ್ಟರು.
ಮುಗಳಿಯಲ್ಲಿ ಆಲಿಕಲ್ಲು ಮಳೆ:
ತಾಲೂಕಿನ ಮುಗಳಿ ಗ್ರಾಮದಲ್ಲಿ 15 ನಿಮಿಷಕ್ಕೂ ಹೆಚ್ವುಕಾಲ ಆಲಿಕಲ್ಲು ಮಳೆಯಾಗಿದ್ದು, ಮನೆ ಮುಂದೆ ಮತ್ತು ಚಾವಣಿ ಮೇಲೆ ಹಿಮದ ರಾಶಿಯಂತಹ ದೃಶ್ಯ ಕಂಡು ಬಂತು. ಆಲಿಕಲ್ಲು ಬೀಳುತ್ತಿದ್ದಂತೆ ಯುವಕ, ಯುವತಿಯರು, ಪುಟಾಣಿ ಮಕ್ಕಳಾದಿಯಾಗಿ ಮಹಿಳೆಯರು, ಪ್ಲೇಟ್, ಬುಟ್ಟಿ, ಬಕೆಟ್‌ನಲ್ಲಿ ಆಲಿಕಲ್ಲನ್ನು ಹಿಡಿದಿಟ್ಟು ಸವಿದು ಸಂಭ್ರಮಿಸಿದರು.