ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಬ್ಯಾಡಗಿ ಸೇರಿದಂತೆ ವಿವಿಧೆಡೆ ಗುರುವಾರ ಮಧ್ಯಾಹ್ನ ಭರ್ಜರಿ ಮಳೆ ಸುರಿದಿದೆ. ರಾಣಿಬೆನ್ನೂರು ನಗರದಲ್ಲಿ ಮಳೆ ನೀರು ಚರಂಡಿ ತುಂಬಿ ರಸ್ತೆ ಮೇಲೆಯೇ ಹರಿದಿದೆ. ಕೆಲವೆಡೆ ರಸ್ತೆ ಸಂಚಾರ ಸ್ಥಗಿತವಾಗಿತ್ತು.

ಹಾವೇರಿ: ಜಿಲ್ಲೆಯ ರಾಣಿಬೆನ್ನೂರು, ಬ್ಯಾಡಗಿ ಸೇರಿದಂತೆ ವಿವಿಧೆಡೆ ಗುರುವಾರ ಮಧ್ಯಾಹ್ನ ಭರ್ಜರಿ ಮಳೆ ಸುರಿದಿದೆ.ರಾಣಿಬೆನ್ನೂರು ನಗರದಲ್ಲಿ ಮಳೆ ನೀರು ಚರಂಡಿ ತುಂಬಿ ರಸ್ತೆ ಮೇಲೆಯೇ ಹರಿದಿದೆ. ಕಾಯಿಪಲ್ಲೆ ಮಾರುಕಟ್ಟೆ ಪ್ರದೇಶದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ರಸ್ತೆ ಪಕ್ಕದಲ್ಲಿ ಮಾರಾಟಕ್ಕಿಟ್ಟಿದ್ದ ತರಕಾರಿ ತೇಲಿಹೋಗಿ ಬಡ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು. ರಸ್ತೆಗಳ ಮೇಲೆ ಮಳೆ ನೀರು ಹಳ್ಳದಂತೆ ಹರಿಯತೊಡಗಿತು. ಏಕಾಏಕಿಯಾಗಿ ಭಾರೀ ಮಳೆ ಸುರಿದಿದ್ದರಿಂದ ಅವಾಂತರ ಸೃಷ್ಟಿಯಾಯಿತು. ಸಂಚಾರ ಅಸ್ತವ್ಯಸ್ತಗೊಂಡಿತು. ಬ್ಯಾಡಗಿ ಪಟ್ಟಣದಲ್ಲೂ ಭರ್ಜರಿ ಮಳೆಯಾಗಿದೆ. ಹಾವೇರಿ, ಹಾನಗಲ್ಲ, ಹಿರೇಕೆರೂರು, ಸವಣೂರು ಇನ್ನಿತರ ತಾಲೂಕುಗಳಲ್ಲಿ ಅರ್ಧ ಗಂಟೆ ಸಾಧಾರಣ ಮಳೆಯಾಗಿದೆ.ಎರಡು ವಾರದ ಹಿಂದೆ ಸುರಿದ ಮಳೆಗೆ ಸೋಯಾಬೀನ್‌, ಮೆಕ್ಕೆಜೋಳ ಬಿತ್ತನೆ ಮಾಡಿಕೊಂಡಿರುವ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಳೆ ಮಾಯವಾದ್ದರಿಂದ ರೈತರು ಆತಂಕಗೊಂಡಿದ್ದರು. ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಲಕ್ಷಣ ಕಂಡುಬಂದಿದೆ.

ಶಿಗ್ಗಾಂವಿ ತಾಲೂಕಿನ ಶ್ಯಾಂಡಬಿಯಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿ ನೀರು ಹರಿಯಿತು. ಮನೆ, ಶಾಲೆ ಆವರಣದಲ್ಲಿ ನೀರು ತುಂಬಿತ್ತು.ಜನತೆಗೆ ನೆಮ್ಮದಿ ತಂದ ಮಳೆ

ರಾಣಿಬೆನ್ನೂರು ತಾಲೂಕಿನ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶದಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ಜನರಲ್ಲಿ ನೆಮ್ಮದಿ ಮೂಡಿಸಿದೆ.

ನಗರದಲ್ಲಿ ಮಧ್ಯಾಹ್ನ 3ರ ಸುಮಾರು ಪ್ರಾರಂಭವಾದ ಮಳೆ ಸುಮಾರು ಒಂದು ಗಂಟೆಯ ಕಾಲ ನಿರಂತವಾಗಿ ಸುರಿಯಿತು. ಮಳೆಯಿಂದಾಗಿ ನಗರದ ವಿವಿಧ ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತು. ಮಳೆಯಿಂದ ಇಲ್ಲಿಯ ಚಿದಂಬರ ನಗರ, ಪಂಪಾನಗರ, ಹುಣಸಿಕಟ್ಟಿ ರಸ್ತೆಯಲ್ಲಿರುವ ಪಾರ್ವತಿ ಲೇಔಟ್, ಮೃತ್ಯುಂಜಯ ನಗರ, ಉಮಾಶಂಕರ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ನೀರು ಹರಿದು ಜನಸಂಚಾರಕ್ಕೆ ತೊಂದರೆಯಾಯಿತು.

ಚರಂಡಿ ದುರಸ್ತಿಗೆ ಒತ್ತಾಯ: ಇಲ್ಲಿಯ ಚಿದಂಬರ ನಗರ ಸೇರಿದಂತೆ ಪ್ರಮುಖ ನಗರದಲ್ಲಿ ನೀರು ಸರಾಗವಾಗಿ ಹರಿಯಲು ಚರಂಡಿಗಳ ನಿರ್ಮಾಣ ಮಾಡದೇ ಇರುವುದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ಕುರಿತು ಅನೇಕ ಬಾರಿ ಸಂಬಂಧಿಸಿದ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ಮಾರ್ಗದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಓಡಾಡುತ್ತಿದ್ದು, ಮಳೆಗಾಲದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡುವ ಜತೆಗೆ ಸರಿಯಾದ ಚರಂಡಿಗಳನ್ನು ನಿರ್ಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಬ್ಯಾಡಗಿಯಲ್ಲಿ ಮಳೆಯ ರಭಸಕ್ಕೆ ರಸ್ತೆ ಸಂಚಾರ ಸ್ಥಗಿತಬುಧವಾರ ತಡರಾತ್ರಿ ಹಾಗೂ ಗುರುವಾರ ಸಂಜೆ ಸುರಿದ ಮಳೆಗೆ ಬ್ಯಾಡಗಿಯಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮಳೆಯ ರಭಸಕ್ಕೆ ಪಟ್ಟಣದ ವಿದ್ಯಾನಗರಕ್ಕೆ ಹೊಂದಿಕೊಂಡಿರುವ ರಾಜ ಕಾಲುವೆಯಲ್ಲಿ ನೀರು ಸಂಗ್ರಹಗೊಂಡು ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.

ಕಳೆದ 2 ದಿನದಿಂದ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಸುರಿಯುತ್ತಿರುವ ಮಳೆಗೆ ಚರಂಡಿಗಳು ತುಂಬಿ ಹರಿದಿದ್ದು, ಸಣ್ಣಪುಟ್ಟ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಅದರಲ್ಲೂ ಪ್ರಮುಖವಾಗಿ ವಿದ್ಯಾನಗರಕ್ಕೆ ಹೊಂದಿರುವ ಮೂರ‍್ನಾಲ್ಕು ರಸ್ತೆಗಳು ಸಂಪರ್ಕವನ್ನು ಕಡಿತಗೊಂಡಿದ್ದವು.ಮಂಗಳವಾರ ಮಳೆಯಾಗಿರಲಿಲ್ಲ, ಆದರೆ ಬುಧವಾರ ತಡರಾತ್ರಿ ಸುರಿದ ಮಳೆಗೆ ಪಟ್ಟಣದಾದ್ಯಂತ ನೀರು ಸಂಗ್ರಹಗೊಂಡು ತಗ್ಗುಪ್ರದೇಶಗಳು ಜಲಾವೃತಗೊಂಡವು. ಅದರಲ್ಲೂ ಮುಖ್ಯರಸ್ತೆಯಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ನೀರು ಹರಿಯಿತು.ಕೃಷಿ ಚಟುವಟಿಕೆ ಸ್ಥಗಿತ: ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬಹುತೇಕ ಕಡೆಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ತಗ್ಗು ಪ್ರದೇಶದ ಜಮೀನುಗಳಲ್ಲಂತೂ ಮರ‍್ನಾಲ್ಕು ದಿನಗಳ ಕಾಲ ಕೃಷಿ ನಡೆಸಲು ಸಾಧ್ಯವಿಲ್ಲದಂತಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಮಳೆಯ ರಭಸ ಕಡಿಮೆಯಾಗುತ್ತಿದ್ದಂತೆ ಚುರುಕಾದ ಸ್ಥಳೀಯ ಪುರಸಭೆಯ ಅಧಿಕಾರಿಗಳು ಕಾಲುವೆಗಳಲ್ಲಿ ನೀರು ತುಂಬಿರುವ ಸ್ಥಳಗಳಿಗೆ ಭೇಟಿ ನೀಡಿದರು. ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ, ಎಂಜಿನಿಯರ್ ಚನ್ನಪ್ಪ ಹಾಗೂ ತಬಸ್ಸುಮ್ ತಮ್ಮ ಸಿಬ್ಬಂದಿಯೊಂದಿಗೆ ಚರಂಡಿಗಳಲ್ಲಿ ಸಂಗ್ರಹವಾಗಿರುವ ಕಸಕಡ್ಡಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.

ಶ್ಯಾಡಂಬಿಯಲ್ಲಿ ಮಳೆ, ರಸ್ತೆಯಲ್ಲಿ ಹರಿದ ನೀರುಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ. ಕಾಲುವೆಯ ಹೂಳು ಹಾಗೂ ಕಸ-ಕಡ್ಡಿ ತೆರವು ಮಾಡದೇ ಇರುವುದರಿಂದ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಮನೆ ಆವರಣ, ಶಾಲಾ ಮೈದಾನದಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಕೂಡಲೇ ಕಾಲುವೆಗಳ ಹೂಳು ತೆಗೆದು ಸ್ವಚ್ಛ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.