ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾದ್ಯಂತ ಕಳೆದ 2 ದಿನದಿಂದ ಬಿರುಸಿನಿಂದ ಮಳೆ ಸುರಿಯುತ್ತಿದೆ. ಉತ್ತರಿ ಹಾಗೂ ಹಸ್ತ ಮಳೆ ಅಬ್ಬರದ ನಂತರ ಇದೀಗ ಚಿತ್ತ ಮಳೆಯೂ ಬಿರುಸಿನಿಂದ ಜಿಲ್ಲಾದ್ಯಂತ ಸುರಿಯಲಾರಂಭಿಸಿದೆ.ಈಗಾಗಲೇ ಜಿಲ್ಲೆಯಲ್ಲಿ ಹಿದೆಂದಿಗಿಂತಲೂ ಹೆಚ್ಚು 5 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ತೊಗರಿ ಫಸಲು ಕೂಡಾ ನಳನಳಿಸುತ್ತಿರುವಾಗಲೇ ಚಿತ್ತ ಮಳೆ ಜಿಲ್ಲಾದ್ಯಂತ 2 ದಿನದಿಂದ ಸುರಿಯತ್ತಿದೆ.
ಎತ್ತರದ ಪ್ರದೇಶದಲ್ಲಿ ಹೊಲಗದ್ದೆ ಇರುವವರಿಗೆ ಈ ಮಳೆಯಿಂದ ಚಿಂತೆಯಿಲ್ಲ, ಆದರೆ, ಕೆಳ ಪ್ರದೇಶದಲ್ಲಿ ತೊಗರಿ ಹೊಲಗಳಿರುವ ರೈತರು ಅದೆಲ್ಲಿ ತೊಗರಿಯಲ್ಲಿ ನೀರು ನಿಂತು ತೊಂದರೆ ಎದುರಾಗುವುದೋ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.ಏತನ್ಮಧ್ಯೆ ಕಳೆದ 15 ದಿನದಿಂದ ಮಳೆರಾಯ ಬಿಡುವು ನೀಡಿದ್ದರಿಂದ ಜಿಲ್ಲೆಯಲ್ಲಿ ರೈತರು ಜೋಳ, ಕಡಲೆ ಬಿತ್ತನೆಗೆ ಮುಂದಾಗಿದ್ದರು. ಇದೀಗ ಚಿತ್ತ ಮಳೆ ಸುರಿಯುತ್ತಿರೋದರಿಂದ ಬಿತ್ತನೆಗೆ ಅಡಚಣೆಯಾಗಿದೆ. ಕೆಲವರು ತಗ್ಗು ಪ್ರದೇಶದ ಹೊಲಗಳಿದ್ದ ರೈತರು ಚಿತ್ತ ಮಳೆ ಕೊನೆಯ ಚರಣದಲ್ಲಿ ಬಿತ್ತೋಣವೆಂದು ಮಳೆ ನಿಲ್ಲುವ ದಾರಿ ಕಾಯುತ್ತಿದ್ದಾರೆ.
ಅ.10 ರಿಂದ ಚಿತ್ತ ಮಳೆ ಸುರಿಯಲು ಶುರುವಾಗಿದ್ದು ಅ. 22ರ ವರೆಗೂ ಮುಂದುವರಿಯಲಿದೆ. ಅ. 23 ರಿಂದ ಸ್ವಾತಿ, ನ. 6 ರಿಂದ ವಿಶಾಖಾ ಮಳೆಗಳು ಉತ್ತಮವಾಗಿ ಸುರಿಯುವ ನಿರೀಕ್ಷೆಯೂ ಇದೆ. ಈ ಬಾರಿ ಕಲಬುರಗಿ ಜಿಲ್ಲಾದ್ಯಂತ ಎಲ್ಲಾ ಮಳೆಗಳೂ ಸುರಿಯುವ ಮೂಲಕ ರೈತರು ಹರುಷದಿಂದ ಇರುವಂತೆ ಮಾಡಿವೆ.ಕಲಬುರಗಿ ಮಹಾ ನಗರದಲ್ಲಂತೂ ನಿನ್ನೆಯಿಂದಲೇ ಭಾರಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿರೋದರಿಂದ ಮಳೆ ನೀರು ತಗ್ಗುಗಳಲ್ಲಿ ತುಂಬಿ ಭಾರಿ ತೊಂದರೆ ಒಡ್ಡಿವೆ. ಇದಲ್ಲದೆ ಹಳೆ ಜೇವರ್ಗಿ ರಸ್ತೆಯಲ್ಲಿಯೂ ಮಳೆ ನೀರು ಮಡುಗಟ್ಟಿ ನಂತು ವಾಹನ ಸವಾರರಿಗೆ ಸವಾಲೊಡ್ಡಿವೆ. ಇದಲ್ಲದೆ ಆರ್‌ಟಿ ನಗರದ ಸರ್ವಿಸ್ ರಸ್ತೆಯಲ್ಲಿ ಮಲೆ ನೀರು ಮಡುಗಟ್ಟಿ ನಿಂತಿದ್ದು ತೊಂದರೆ ಎದುರಾಗಿದೆ. ಈ ರಸ್ತೆ ಬಳಸಿ ಸಾಗುವ ಬಡಾವಣೆಯ ನಾಗರಿಕರು ಕೆಸರಲ್ಲಿ ಹೋಗೋದು ಹೇಗೆಂದು ಕಂಗಾಲಾಗಿದ್ದಾರೆ.ಎರಡು ದಿನದಿಂದ ಜಿಲ್ಲಾದ್ಯಂತ ಮಳೆ:
ಕಲಬುರಗಿ ಜಿಲ್ಲೆಯಲ್ಲಿ ಕಳೆದ 2 ದಿನದಿಂದ ಜಿಲ್ಲಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಚಿಂಚೋಳಿ ತಾಲೂಕಿನ ಕುಂಚಾವರಮ್, ನಿಡಗುಂದಾ, ಸುಲೇಪೇಟ್‌ನಲ್ಲಿ ಸರಾಸರಿ 30 ಮಿ.ಮೀ., ಕಾಳಗಿ ತಾಲೂಕಿನ ಕೋಡ್ಲಿ, ಕಾಳಗಿ ಹೇರೂರಲ್ಲಿ ಸರಾಸರಿ 40 ಮಿ.ಮೀ., ಚಿತ್ತಾಪುರದ ಗುಂಡಗುರ್ತಿ, ಅಳ್ಳೋಳ್ಳಿಯಲ್ಲಿ 20 ಮಿ.ಮೀ., ಜೇವರ್ಗಿ, ಜೇರಟಗಿ, ಆಂದೋಲಾ ಹಾಗೂ ನೆಲೋಗಿಯಲ್ಲಿ ಸರಾಸರಿ 35 ರಿಂದ 41 ಮಿ.ಮೀ., ಯಡ್ರಾಮಿ 24, ಇಜೇರಿ- 11 ಮಿ.ಮೀ. ಮಳೆ ಸುರಿದಿದೆ.ಮಹಾಗಾಂವ್ ಕ್ರಾಸ್‌ನಲ್ಲಿ 16 ಮಿ.ಮೀ., ಅಫಜಲ್ಪುರ, ಆತನೂರ್, ಗೊಬ್ಬೂರ್, ಕರಜಗಿಯಲ್ಲಿ ಸರಾಸರಿ 22 ರಿಂದ 40 ಮಿ.ಮೀ., ಕಲಬುರಗಿ ನಗರದಲ್ಲಿ 45 ಮಿ.ಮೀ., ಫರತಾಬಾದ್, ಪಟ್ಟಣ ಸಾವಳಗಿಯಲ್ಲಿ ಸರಾಸರಿ 30 ಮಿ.ಮೀ., ಸೇಡಂ, ಆಡಕಿ, ಮುಧೋಳ, ಇಲ್ಲೆಲ್ಲಾ ಸರಾಸರಿ 25 ರಿಂದ 33 ಮಿ.ಮೀ. ಮಳೆ ಸುರಿದ ವರದಿಗಳಿವೆ.
ಅ. 17 ರಂದೂ ಕೂಡಾ ಜಿಲ್ಲಾದ್ಯಂತ ವಾಡಿ, ಸೇಡಂ, ಚಿತ್ತಾಪುರ, ಜೇವರ್ಗಿ, ಕಲಬುರಗಿ ಇಲ್ಲೆಲ್ಲಾ ಬಿರುಸಿನ ಮಳೆ ಸುರಿಯುತ್ತಿದೆ. ದಟ್ಟವಾದಂತಹ ಮೋಡಗಳು ಕವಿದ ವಾತಾವರಣ ಜಿಲ್ಲಾದ್ಯಂತ ಕವಿದಿದೆ. ಇನ್ನೂ 1 ದಿನ ಇದೇ ರೀತಿ ತೊಗರಿ ಕಣಜದಲ್ಲಿ ಚಿತ್ತ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಜಿಲ್ಲಾಡಳಿತ, ಕೃಷಿ ಇಲಾಖೆ ಹೇಳಿದೆ.