ಉಕ್ಕೇರಿದ ನದಿಗಳ ಅಬ್ಬರ; ಗ್ರಾಮಗಳು ತತ್ತರ

| Published : Sep 03 2024, 01:38 AM IST

ಸಾರಾಂಶ

ಕಾಗಿಣಾ, ಕಮಲಾವತಿ, ಗಂಡೋರಿ, ಬೆಣ್ಣೆತೊರಾ ನದಿಗಳ್ಲಲಿ ಪ್ರವಾಹ, ಶಹಾಬಾದ್‌ ತಾಲೂಕು ಮುತ್ತಗಾ ಗ್ರಾಮ ಹೊಕ್ಕ ಕಾಗಿಣಾ ನದಿ ನೀರು. ಬೆಣ್ಣೆತೊರೆ ಡ್ಯಾಮ್‌ನಿಂದ 9,200 ಕ್ಯುಸೆಕ್‌ ನೀರು ಹೊರಗೆ ಬಿಡುಗಡೆ ಹೆಬ್ಬಾಳ ಸೇರಿದಂತೆ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದ 3 ದಿನದಿಂದ ಸುರಿಯುತ್ತಿರುವ ಮಳೆಗೆ ಕಲಬುರಗಿ ಜಿಲ್ಲೆ ತತ್ತರಿಸಿದೆ. ಜಿಲ್ಲೆಯಲ್ಲಿರುವ ಮುಲ್ಲಾಮಾರಿ, ಕಾಗಿಣಾ, ಕಮಲಾವತಿ, ಗಂಡೋರಿ, ಬೆಣ್ಣೆತೊರಾ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಈ ನದಿಗಳು ಉಕ್ಕೇರಿದ್ದು ಅನೇಕ ಗ್ರಾಮಗಳಲ್ಲಿ ನೀರು ನುಗ್ಗಿ ಜನಜೀವನ ತೊಂದರಗೆ ಸಿಲುಕಿದೆ.

ಕಾಗಿಣಾ ಹಾಗೂ ಕಮಲಾವತಿ ನದಿಗಳಿಗೆ ಪ್ರವಾಹ ಬಂದಿದ್ದು ಉಭಯ ನದಿಗಳು ಉಕ್ಕೇರಿ ಪ್ರವಹಿಸುತ್ತಿವೆ. ಈ ನದಿಯ ನೀರಲ್ಲೇ ಮೀನು ಹಿಡಿಯಲು ಹೋಗಿದ್ದ ಕುರಕುಂಟಾದ ವ್ಯಕ್ತಿಯೋರ್ವ ಕಾಣೆಯಾಗಿದ್ದು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಏತನ್ಮಧ್ಯೆ ಮಳೆಯ ಅಬ್ಬರದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಜಿಲ್ಲಾಡಳಿತ ಸೋಮವಾರ ರಜೆ ಘೋಷಿಸಿದೆ.

ಉಕ್ಕೇರಿದ ಮುಲ್ಲಾಮಾರಿ ನದಿ:

ಚಿಂಚೋಳಿ ತಾಲೂಕಿನಲ್ಲಿ ಪ್ರವಹಿಸುವ ಮುಲ್ಲಾಮಾರಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಈ ನದಿಗೆ ಅಡ್ಡಲಾಗಿ ಕಟ್ಟಿರುವ ನಾಗರಾಳ ಜಲಾಶಯದ 3 ಗೇಟ್‌ ಎತ್ತಿ 4 ಸಾವಿರ ಕ್ಯುಸೆಕ್‌ ನೀರು ಹೊರಗೆ ಬಿಡಲಾಗುತ್ತಿದೆ.

ಇನ್ನು ಚಂದ್ರಂಪಳ್ಳಿ ಜಲಾಶಯದಿಂದಲೂ 4 ಗೇಟ್‌ ತೆರೆದು 5 ಸಾವಿರ ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದೆ. ಈ ಎರಡೂ ನದಿಗಳ ನೀರು ಬೆಣ್ಣೆತೊರಾ, ಗಂಡೋರಿ ನಾಲಾ ಸೇರಿ ಆ ಮೂಲಕ ಕಾಗಿಣಾ ನದಿಗೆ ಸೇರೋದರಿಂದಾಗಿ ಕಾಗಿಣಾಗೆ ನಿರಂತರ ಪ್ರವಾಹ ಕಾಡುತ್ತಿದೆ.

ಮುಲ್ಲಾಮಾರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ಸೇತುವೆ ಜಲಾವೃತ ವಾಗಿದೆ. ಚಿಂಚೋಳಿ ಪಟ್ಟಣದಲ್ಲಿ ಬಡಿದರ್ಗಾ, ಚೋಟಿದರ್ಗಾ, ಹರಿಜನವಾಡ, ಐನೋಳಿ, ಕನಕಪುರ, ಅಣವಾರ, ಗರಗಪಳ್ಳಿ, ಗರಗಪಳ್ಳಿ, ಇರಗಪಳ್ಳಿ ಗ್ರಾಮಗಳಲ್ಲಿ 25 ಕ್ಕೂ ಹೆಚ್ಚು ಮನೆಗಳಲ್ಲಿ ನೀರು ನುಗ್ಗಿದೆ.

ಕಾಗಿಣಾ, ಬೆಣ್ಣೆತೊರಾ ಅಬ್ಬರ:

ಗಂಡೋರಿ ನಾಲಾ ಹಾಗೂ ಬೆಣ್ಣೆತೊರಾ ಜಲಾನಯನ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿದ್ದು ಈ ಎರಡೂ ನದಿಗಳು ಉಕ್ಕೇರಿ ಹರಿಯುತ್ತಿವೆ. ಇದರಿಂದಾಗಿ ದಸ್ತಾಪುರ ಸೇರಿದಂತೆ ಹಲವು ಗ್ರಾಮಗಳ ಜಲ ಜದಿಗ್ಬಂಧನ ಮುಂದುವರಿದಿದೆ. ಇದಲ್ಲದೆ ತಾಲೂಕಿನಲ್ಲಿರುವ ಕೆರೆ ಕುಂಟೆ, ಹಳ್ಳಕೊಳ್ಳಗಳು ಭರ್ತಿಯಾಗಿವೆ.

ಚಿತ್ತಾಪೂರ ತಾಲೂಕಿನ ಕರದಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಣ್ಣಿಕೆರಾ ಗ್ರಾಮದ ಅಮೃತ ಸರೋವರ ಕೆರೆ ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾಗಿವೆ.

ಶಾಲೆಗೆ ರಜೆ:

ಜಿಲ್ಲಾದ್ಯಂತ ಮಳೆಯಿಂದಾಗಿ ಶೀತಗಾಳಿ ಬೀಸುತ್ತಿದೆ. ಮಳೆಯ ಹಿನ್ನೆಲೆ ಡಿಸಿ ಫೌಜಿಯಾ ತರನ್ನುಮ್ ನಿರ್ದೇಶನದಂತೆ ಮಕ್ಕಳ ಹಿತದೃಷ್ಟಿಯಿಂದ ಸೆ.2ರಂದು ಜಿಲ್ಲೆಯ ಎಲ್ಲಾ ಸರ್ಕಾರಿ,‌ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಒಂದು ದಿನ ರಜೆ ಘೋಷಿಸಿ ಡಿಡಿಪಿಐ ಸೂರ್ಯಕಾಂತ‌ ಮದಾನೆ ಆದೇಶಿಸಿದ್ದರು. ಇದರಿಂದಾಗಿ ಮಕ್ಕಳು ಶೀತಗಾಳಿಯಿಂದ ಬಚಾವ್‌ ಆದಂತಾಯ್ತು.

ಧಾರಾಕಾರ ಮಳೆಗೆ ಹೆಚ್ಚಿದ ಸಂಕಷ್ಟ: ಜಿಲ್ಲಾದ್ಯಂತ ಭಾನುವಾರ ರಾತ್ರಿ ಪೂರಾ ಧಾರಾಕಾರ ಮಳೆ ಸುರಿದಿದೆ, ಅಫಜಲ್ಪುರದಲ್ಲಂತೂ ಸೋಮವಾರ ಬೆಳಗ್ಗೆ 9 ಗಂಟೆಗೆ ಶುರುವಾದ ಮಳೆ ಮಧ್ಯಾಹ್ನ 2 ಗಂಟೆಯವರೆಗೂ ಸುರಿದಿದ್ದು ಸಾಕಷ್ಟು ಅವಾಂತರ ಹುಟ್ಟು ಹಾಕಿದೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಅಫಜಲ್ಪುರ, ಆತನೂರ್‌, ಕರಜಗಿ, ಗೊಬ್ಬೂರ ಹೋಬಳಿಯಲ್ಲಿ ಸರಾಸರಿ 20 ರಿಂದ 25 ಮಿ.ಮೀ. ಮಳೆ ಸುರಿದಿದೆ. ಚಿಂಚೋಳಿಯಲ್ಲಿ 25.2 ಮಿ.ಮೀ, ಕುಂಚಾವರಂ. 50. 3, ಐನಾಪುರ 55. 6 ಮೀಮೀ ಸುಲೇಪೇಟ 24.8 ಮಿ.ಮೀ., ಚಿಮ್ಮನಚೋಡ 39.2 ಮಿ.ಮೀ., ಕೋಡ್ಲಿ- 47.6 ಮಿ.ಮೀ. ನೀಡಗುಂದಾ 42.0 ಮಿ.ಮೀ. ಮಳೆ ಸುರಿದಿದೆ.

ಯಡ್ರಾಮಿಯಲ್ಲಿ ಇಜೇರಿ ಹಾಗೂ ಯಡ್ರಾಮಿಯಲ್ಲಿ ಸರಾಸರಿ 15 ಮಿ.ಮೀ., ಚಿತ್ತಾಪುರದಲ್ಲಿ ಚಿತ್ತಾಪೂರ, ಗುಂಡಗುರ್ತಿ, ನಾಲವಾರ್‌, ಅಳ್ಳೋಳ್ಳಿಯಲ್ಲಿ ಸರಾಸರಿ 15 ರಿಂದ 20 ಮಿ.ಮೀ. ಮಳೆ ಸುರಿದಿದೆ.

ಮಣ್ಣೂರ ಗೋಕಟ್ಟೆ ಸೇತುವೆ ಮೇಲೆ ಅಪಾಯದ ಪಯಣ!

ಕಲಬುರಗಿ ಜಿಲ್ಲೆಯ ಭೀಮಾ ನದಿ ತೀರದಲ್ಲಿರುವ ಅಫಜಲ್ಪುರ ತಾಲೂಕಿನಲ್ಲಿ ಸೋಮವಾರ ಬೆಳಗಿನ 4 ಗಂಟೆವರೆಗೆ ಸತತ ಮಳೆ ಸುರಿದಿದೆ. ಬೆಳಗ್ಗೆ 6 ರಿಂದ ಮ. 2 ಗಂಟೆಯವರೆಗೂ ಸುರಿದ ಕುಂಭದ್ರೋಣ ಮಳೆಗೆ ಅಫಜಲ್ಪುರ ತಾಲೂಕಿನ ಕರಜಗಿ ಹೋಬಳಿ, ಮಾಶಾಳ, ಮಣ್ಣೂರ ಶೇಷಗಿರಿವಾಡಿ, ಹೊಸೂರ್‌ ತತ್ತರಿಸಿವೆ. ಈ ಗ್ರಾಮದಿಂದ ವಿಜಯಪೂರ ಜಿಲ್ಲೆಯ ಇಂಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ನೀರು ನುಗ್ಗಿ ಭಾರಿ ತೊಂದರೆ ಎದುರಾಗಿದೆ.

ಈ ಮಾರ್ಗದಲ್ಲಿರುವ ಗೋಕಟ್ಟಾ ಜಲಾವೃತಗೊಂಡಿದ್ದು ಕರಜಗಿ, ಮಣ್ಣೂರ, ಇಂಡಿ, ವಿಜಯಪುರ ಸಂಚಾರಕ್ಕೆ ಸಂಚಕಾರ ಉಂಟಾಗಿತ್ತು. ಗೋಕಟ್ಟೆ ಮೇಲಿನ ಚಿಕ್ಕ ಸೇತುವೆಯ ಮೇಲೆ ರಭಸದ ನೀರು ಹರಿದಿತ್ತು. ಅಲ್ಲೇ ವಾಹನ ಸಮೇತ ನೀರನ್ನು ದಾಟುವ ದುಸ್ಸಾಹಸ ಅನೇಕರು ಮಾಡಿದರು.

ಇಂಡಿ ತಾಲೂಕಿನ ಚಿಕ್ಕಮಣೂರ ಅಗರಖೇಡ ಬೇನೂರ ಗ್ರಾಮಗಳಿಗೆ ತಮ್ಮ ಕೆಲಸಗಳಿಗೆ ಹೋಗಬೇಕಿದ್ದ ಜನರು ಗೋಕಟ್ಟೆ ದಾಟಲು ಹೆಣಗಿದರು. ಗ್ರಾಮಸ್ಥರ ಸಹಾಯದಿಂದ ಮಹಿಳೆಯರು, ವೃದ್ಧರು, ಮಕ್ಕಳು ಗೋಕಟ್ಟೆ ದಾಟಿ ಮಣ್ಣೂರ ಗ್ರಾಮಕ್ಕೆ ಬರಬೇಕಾಯಿತು.

ಮನೆ ಮೇಲೆಯೇ ಉರುಳಿ ಬಿತ್ತು ಗುಡ್ಡದ ಭಾರಿ ಬಂಡೆ!

ಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿ ಭಾರಿ ಮಳೆಗೆ ಗುಡ್ಡದ ಬಂಡೆಗಲ್ಲು ಜಾರಿ ಬಂದು ಪಕ್ಕದಲ್ಲೇ ಇದ್ದ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗಲೇ ಬಂಡೆ ಮನೆ ಛಾವಣಿ ಮೇಲೆ ಬಿದ್ದು ಮನೆ ಕುಸಿದಿದೆ. ಮಕ್ಕಳಿಬ್ಬರಿಗೆ ಕಾಲಿಗೆ ಗಾಯವಾಗಿದ್ದು ಬಿಟ್ಟರೆ ಯಾರಿಗೂ ಏನೂ ಆಗಿಲ್ಲ. ದಿವಸ- ಧಾನ್ಯ ಮಾರಿದ್ದ ಹಣ ಸ್ವಲ್ಪ ಮನೆಯಲ್ಲಿತ್ತು, ಅದೆಲ್ಲವೂ ಹಾಳಾಗಿದೆ ಎಂದು ಮನೆಯವರು ಗೋಳಾಡುತ್ತಿದ್ದಾರೆ.