ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನಲ್ಲಿ ಬುಧವಾರ ರಾತ್ರಿ ಭಾರೀ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮನೆ ಮೇಲೆ ತೆಂಗಿನ ಮರ ಉರುಳಿ ಮನೆ ಸಂಪೂರ್ಣ ಜಖಂಗೊಂಡು ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬಿ.ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಚಂದ್ರಶೇಖರ್ ಅವರ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದಿದ್ದು, ಮನೆ ಸಂಪೂರ್ಣ ಜಖಂಗೊಂಡಿರುವುದರಿಂದ ವಾಸ ಮಾಡಲು ಅನಾನುಕೂಲವಾಗಿದೆ. ತಾಲೂಕು ಆಡಳಿತಕ್ಕೆ ಪರಿಹಾರ ನೀಡಲು ಮನವಿ ಮಾಡಿದ್ದಾರೆ.ಉರುಳಿದ ವಿದ್ಯುತ್ ಟಿಸಿ, ಕಂಭಗಳು:
ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳ ಬಳಿಯ ರಸ್ತೆ ಬದಿ ವಿದ್ಯುತ್ ಕಂಬ ಹಾಗೂ ಬೋರೆವೆಲ್‌ಗಳ ಬಳಿಯ ಟಿಸಿಗಳು ನೆಲಕ್ಕುರುಳಿವೆ. ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದ ಬಳಿ ನಿರಂತರ ಕುಡಿಯುವ ನೀರು ಸರಬರಾಜಿಗೆ ಅಳವಡಿಸಿದ್ದ ವಿದ್ಯುತ್ ಟೀಸಿ ಸಂಪೂರ್ಣ ಹಾನಿಯಾಗಿ ನೆಲಕ್ಕೆ ಉರುಳಿದೆ.ಇದಲ್ಲದೇ, ಬಸ್ತಿಪುರ ಗ್ರಾಮದ ಬಳಿಯ ನಿರಂತರ ವಿದ್ಯುತ್ ಸರಬರಾಜು ಮಾಡುತ್ತಿದ್ದ ಎಲ್‌ಸಿ ಕಂಭ ಹಾಗೂ ಡಿಟಿಸಿ ಟ್ರಾನ್ಸ್‌ಫಾರಂ ಡ್ಯಾಮೇಜ್ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ, ಕೊಡಿಯಾಲ ಗ್ರಾಮದ ಮನೆ ಬಳಿ ನಿಲ್ಲಿಸಿದ ಎತ್ತಿನ ಗಾಡಿ ಮೇಲೆ ವಿದ್ಯುತ್ ಕಂಬ ಹಾಗೂ ಮರ ಉರುಳಿ ಬಿದ್ದು ಎತ್ತಿನ ಗಾಡಿ ಸಹ ಜಖಂಗೊಂಡು ಅಲ್ಲಲ್ಲಿ ರಸ್ತೆ ಬಳಿಯಲ್ಲಿ ಗಾಳಿ ಮಳೆಗೆ ಸಿಮೆಂಟ್‌ನ ವಿದ್ಯುತ್ ಕಂಬಗಳು ಉರುಳಿರುವ ಮಾಹಿತಿಗಳು ಲಭ್ಯವಾಗಿದೆ.
ತಾಲೂಕಿನ ಬಲ್ಲೇನಹಳ್ಳಿ ಮೂಲಕ ಹಾದು ಹೋಗಿದ್ದ 11ಕೆವಿ ವಿದ್ಯುತ್ ಕಂಬಗಳು ಬಾರಿ ಗಾಳಿ ಹಾಗೂ ಮಳೆಯಿಂದಾಗಿ ಮುರಿದು ಬಿದ್ದು ಐದಾರು ವಾಸದ ಮನೆಗಳ ಮೇಲೆ ವಿದ್ಯುತ್ ತಂತಿ ಹಾಗೂ ಕಂಬಗಳು ಬಿದ್ದಿವೆ. ಇದರಿಂದ ಸ್ಥಳೀಯ ನಿವಾಸಿಗಳು ವಿದ್ಯುತ್ ಅವಘಡ ಸಂಭವಿಸಬಹುದೆ ಎಂದು ರಾತ್ರಿ ಪೂರ್ತಿ ಭಯಭೀತರಾಗಿ ಕಾಯ್ದು ಕುಳಿತಿದ್ದಾರೆ.
ಈ ಹಿಂದೆ ಸೆಸ್ಕ್ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ, ಮೌಖಿಕವಾಗಿ ಮನವಿ ಮಾಡಿದ್ದರೂ ಅಧಿಕಾರಿಗಳ ಇತ್ತ ಗಮನ ಹರಿಸದ ಕಾರಣ ಈ ರೀತಿ ಅವಘಡ ಸಂಭವಿಸಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ವಿದ್ಯುತ್ ಟೀಸಿ ಕಂಬ ಹಾನಿ ತಾಲೂಕಿನಾದ್ಯಂತ ಅಂದಾಜು 30ಕ್ಕೂ ಹೆಚ್ಚು ಸಿಮೆಂಟ್ ಕಂಬಿಗಳು ಮುರಿದು ಬಿದ್ದಿದ್ದು, ಇಲಾಖೆ ಸಿಬ್ಬಂದಿ ತುರ್ತಾಗಿ ಪಟ್ಟಣ ಹಾಗೂ ಶೆಟ್ಟಹಳ್ಳಿ, ಅರಕೆರೆ, ಕೊಡಿಯಾಲ ಕುಡಿಯುವ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ತೆರವು ಕಾರ್ಯ ನಡೆಸಿದ್ದಾರೆ.ಇನ್ನಷ್ಟು ಹಾನಿಯಾದ ಪ್ರದೇಶಗಳ ಮಾಹಿತಿಗಳು ಶುಕ್ರವಾರ ಸಂಪೂರ್ಣ ತಿಳಿಯಲಿದೆ. ಸದ್ಯಕ್ಕೆ ಅಂದಾಜು 15 ರಿಂದ 20 ಲಕ್ಷ ರು.ಗಳಷ್ಟು ನಷ್ಟವಾಗಿದೆ ಎಂದು ಶ್ರೀರಂಗಪಟ್ಟಣ ಸೆಸ್ಕಾಂ ಇಲಾಖೆ ಎಇಇ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ವಿವಿಧೆಡೆ ಮನೆ ಹಾಗೂ ಬೆಳೆ ನಾಶ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಗಾಳಿಗೆ ಮನೆ ಕುಸಿತ ಹಾಗೂ ಬೆಳೆ ನಷ್ಟವಾಗಿರುವ ಬಗ್ಗೆ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಸಬಾ ಹೋಬಳಿಯ ನಗುವನಹಳ್ಳಿ ರಾಜಣ್ಣರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ.
ಅರಕೆರೆ ಗ್ರಾಮದಲ್ಲೂ ತೆಂಗಿನ ಮರ ಬಿದ್ದು ಮನೆ ಹಾನಿ, ಅರಕೆರೆ ಹೋಬಳಿ ಬನ್ನಹಳ್ಳಿ ಗ್ರಾಮದಲ್ಲಿ ಒಂದು ಎಕರೆಯಷ್ಟು ಬೀನ್ಸ್ ಬೆಳೆ ನೆಲಕಚ್ಚಿ ನಾಶವಾಗಿದೆ. ಕೂಡಲಕುಪ್ಪೆ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಮೇಲೆ ಮರ ಬಿದ್ದು ಹಾನಿ ಗೊಂಡಿದ್ದು, ಸ್ಥಳೀಯ ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆದು ಪರಿಹಾರಕ್ಕಾಗಿ ವರದಿ ಸಿದ್ದತೆ ಕಾರ್ಯ ನಡೆಯುತ್ತಿದೆ ಎಂದು ಕಂದಾಯ ಅಧಿಕಾರಿ ರೇವಣ್ಣ ತಿಳಿಸಿದ್ದಾರೆ.