ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂಧಗಂಗಾ ಹಾಗೂ ಮಲಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ಆತಂಕ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂಧಗಂಗಾ ಹಾಗೂ ಮಲಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ಆತಂಕ ಹೆಚ್ಚಾಗಿದೆ.

ಜಿಲ್ಲಾಡಳಿತ ನದಿಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮಂಗಳವಾರ ಸಂಜೆ 5 ಗಂಟೆಯ ವೇಳೆಗೆ ಕಲ್ಲೋಳ ಬ್ಯಾರೇಜ್ ನಲ್ಲಿ ಒಟ್ಟು 1 ಲಕ್ಷ 7 ಸಾವಿರ 28 ಕ್ಯುಸೆಕ್ ನೀರು ದಾಖಲಾಗಿದೆ. ರಾಜಾಪುರ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 84 ಸಾವಿರ 500 ಕ್ಯುಸೆಕ್ ಹಾಗೂ ಸದಲಗಾ ಕೇಂದ್ರೀಯ ಜಲ ಆಯೋಗದ ಕೇಂದ್ರದಲ್ಲಿ ದೂಧಗಂಗಾ ನದಿಯಿಂದ 22 ಸಾವಿರ 528 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಗ್ಗೆ 8 ಗಂಟೆಗೆ ದಾಖಲಾಗಿದ್ದ 98 ಸಾವಿರ 245 ಕ್ಯುಸೆಕ್‌ಗೆ ಹೋಲಿಸಿದರೆ ಸಂಜೆ ವೇಳೆಗೆ 8783 ಕ್ಯುಸೆಕ್ ಹೆಚ್ಚಳವಾಗಿದೆ. ನೀರಿನ ಹರಿವು ಇನ್ನೂ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.13 ಗ್ರಾಮಗಳ ಸಂಪರ್ಕ ಕಡಿತ:

ಖಾನಾಪುರ ತಾಲೂಕಿನ ಹಾಲಾತ್ರಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮುಳುಗಡೆಯಾಗಿದ್ದು, ಖಾನಾಪುರ, ಹೆಮ್ಮಡಗಾ ಸೇರಿದಂತೆ ಸುಮಾರು 13 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ಸಾರ್ವಜನಿಕರು ಸೇತುವೆ ದಾಟದಂತೆ ಎಚ್ಚರಿಕೆ ನೀಡಲಾಗಿದೆ.ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಹೊರವಲಯದಲ್ಲಿರುವ ಮುಲ್ಲಾಂಕಿ ತೋಟದ ಮನ್ಸೂರ್ ಅಲಿ ದರ್ಗಾ ದೂಧಗಂಗಾ ನದಿಯ ಪ್ರವಾಹದಿಂದ ಜಲಾವೃತವಾಗಿದೆ. ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದರ್ಗಾಕ್ಕೂ ಜಲದಿಗ್ಬಂಧನ ಉಂಟಾಗಿದೆ. ದೂಧಗಂಗಾ ನದಿಯಲ್ಲಿ 20 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹರಿಯುತ್ತಿದ್ದು, ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದೆ.ಪ್ರವಾಹದ ಸಾಧ್ಯತೆಯನ್ನು ಮನಗಂಡು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕಾಳಜಿ ಕೇಂದ್ರಗಳು, ಬೋಟ್‌ಗಳ ಸಿದ್ಧತೆ, ನದಿತೀರದ ಜನರು ಹಾಗೂ ಜಾನುವಾರುಗಳ ಸುರಕ್ಷಿತ ಸ್ಥಳಾಂತರ ಕುರಿತು ಪರಿಶೀಲನೆ ನಡೆಸಿದರು.ಚಿಕ್ಕೋಡಿ, ನಿಪ್ಪಾಣಿ ಹಾಗೂ ಅಥಣಿ ಭಾಗಗಳಲ್ಲಿ 26 ಬೋಟ್‌ಗಳನ್ನು ನಿಯೋಜಿಸಲಾಗಿದ್ದು, ಪರಿಹಾರ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ನದಿಪಾತ್ರದ ಜನರಿಗೆ ಆಹಾರ ಧಾನ್ಯ, ಜಾನುವಾರುಗಳಿಗೆ ಮೇವು ಹಾಗೂ ಆರೋಗ್ಯ ಸೇವೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಕೃಷ್ಣಾ, ದೂಧಗಂಗಾ ಹಾಗೂ ಮಲಪ್ರಭಾ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿತೀರದ ನಿವಾಸಿಗಳು ನದಿಯತ್ತ ತೆರಳದಂತೆ ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಬೆಳಗಾವಿಯಲ್ಲಿ ಮಳೆ ಅಬ್ಬರ ಮುಂದುವರಿಕೆ:

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮಂಗಳವಾರವೂ ಮುಂದುವರಿದಿದ್ದು, ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿ ಸಮೇತ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.ನಗರದ ಪ್ರಮುಖ ರಸ್ತೆಗಳ ಮೇಲೆ ಮಳೆ ನೀರು ಹರಿದ ಪರಿಣಾಮ ವಾಹನ ಸಂಚಾರ ನಿಧಾನಗೊಂಡಿತು. ದ್ವಿಚಕ್ರ ವಾಹನ ಸವಾರರು ಮಳೆಯ ನಡುವೆ ಹರಸಾಹಸಪಟ್ಟು ವಾಹನ ಚಲಾಯಿಸಿದರು. ಹಲವೆಡೆ ರಸ್ತೆಗಳು ಹೊಂಡಗಳಿಂದ ಕೂಡಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತಾಯಿತು.ನಿರಂತರ ಮಳೆಯಿಂದ ನಗರದ ವಿವಿಧ ಭಾಗಗಳಲ್ಲಿ ಮರಗಳು ಮತ್ತು ಕೊಂಬೆಗಳು ಉರುಳಿ ಬಿದ್ದಿವೆ. ನಗರದ ಆರ್‌ಟಿಒ ವೃತ್ತದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ಮೇಲೆ ಬೃಹತ್ ನೀಲಗಿರಿ ಮರ ಉರುಳಿ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಿರಂತರ ಮಳೆಯಿಂದಾಗಿ ಬೆಳಗಾವಿಯ ಗಾಂಧಿನಗರದಲ್ಲಿರುವ ಹೆಸ್ಕಾಂ ಗ್ರಾಮೀಣ ಉಪವಿಭಾಗ ಕಚೇರಿ ಆವರಣ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಸೇವಾ ರಸ್ತೆಯ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ಕಚೇರಿಗೆ ನುಗ್ಗಿದ್ದು, ಸಿಬ್ಬಂದಿ ಪಂಪ್ ಸೆಟ್ ಮೂಲಕ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಹೆಸ್ಕಾಂ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸಿದರು.₹4 ಕೋಟಿ ಮೌಲ್ಯದ ರೈತರ ಜಾಕ್‌ವೆಲ್ ಕುಸಿತ:

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಭಾರೀ ದುರಂತ ಸಂಭವಿಸಿದ್ದು, ಸುಮಾರು ₹4 ಕೋಟಿ ಮೌಲ್ಯದ ರೈತರ ಏತ ನೀರಾವರಿ ಜಾಕ್‌ವೆಲ್ ಸಂಪೂರ್ಣ ಕುಸಿದು ನದಿಪಾಲಾಗಿದೆ. ಈ ಘಟನೆಯಿಂದ 500ಕ್ಕೂ ಹೆಚ್ಚು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.ಶೇಡಬಾಳ ಗ್ರಾಮದ ರೈತರು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡಿದ್ದ ಶಾಂತಿನಾಥ ಏತ ನೀರಾವರಿ ಯೋಜನೆ ಮತ್ತು ಕೃಷ್ಣಾ ಏತ ನೀರಾವರಿ ಯೋಜನೆಗಳ ಜಾಕ್‌ವೆಲ್‌ಗಳು ಕುಸಿದು ಬಿದ್ದಿವೆ. ಜಾಕ್‌ವೆಲ್‌ನಲ್ಲಿದ್ದ 75 ಅಶ್ವಶಕ್ತಿಯ ನಾಲ್ಕು ಬೃಹತ್ ಪಂಪ್‌ಸೆಟ್‌ಗಳು, ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳೂ ಕೃಷ್ಣಾ ನದಿಯಲ್ಲಿ ಕೊಚ್ಚಿಹೋಗಿವೆ.ಸರ್ಕಾರದ ಅಮೃತ್-2 ಕುಡಿಯುವ ನೀರಿನ ಯೋಜನೆ ಕಾಮಗಾರಿ ವೇಳೆ ನದಿಪಾತ್ರದಲ್ಲಿ ನಡೆಸಿದ ಬ್ಲಾಸ್ಟಿಂಗ್‌ನಿಂದ ಈ ಅವಘಡ ಸಂಭವಿಸಿದೆ. ಈ ಕುರಿತು ಹಲವು ಬಾರಿ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿ ಕಾಮಗಾರಿ ಮುಂದುವರಿಸಿದರು ಎಂದು ರೈತರು ದೂರಿದ್ದಾರೆ.ಸುಮಾರು 30 ವರ್ಷಗಳ ಹಿಂದೆ ರೈತರು ತಮ್ಮ ಜಮೀನುಗಳನ್ನು ಅಡಮಾನವಿಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆದು ಈ ಎರಡು ಏತ ನೀರಾವರಿ ಯೋಜನೆಗಳನ್ನು ನಿರ್ಮಿಸಿದ್ದರು. ದಶಕಗಳಿಂದ ನೂರಾರು ಎಕರೆ ಕೃಷಿಭೂಮಿಗೆ ನೀರು ಪೂರೈಸುತ್ತಿದ್ದ ಈ ಯೋಜನೆಗಳು ಒಂದೇ ಕ್ಷಣದಲ್ಲಿ ಧ್ವಂಸವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.