ಭಾರಿ ಮಳೆ: ಕೊಳೆ ರೋಗಕ್ಕೆ ಕಾಫಿ ಫಸಲು ಧರಾಶಾಹಿ

| Published : Jul 24 2024, 12:18 AM IST

ಸಾರಾಂಶ

ಕೊಡಗು ಜಿಲ್ಲೆಯ ಎಲ್ಲೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿದ್ದು ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಮಿಡಿಗಳು ಉದುರುವಿಕೆಯ ಪ್ರಮಾಣ ಹೆಚ್ಚಾಗಿದೆ. ಕೆಲವು ಗಿಡಗಳಲ್ಲಿ ಕಾಫಿಯ ಫಸಲು ಬಹುತೇಕ ಧಾರಾಶಾಹಿಯಾಗಿದೆ. ಕೊಳೆರೋಗದಿಂದ ಕಾಫಿಯ ಗಿಡಗಳ ರೆಂಬೆಗಳಲ್ಲಿನ ಫಸಲು ಕಪ್ಪಾಗಿ ಕಾಫಿಯ ಮಿಡಿಗಳು ಇನ್ನಷ್ಟು ಉದುರಿ ಇತರ ಗಿಡಗಳಿಗೂ ಪಸರಿಸುವ ಆತಂಕ ರೈತರಲ್ಲಿ ಮನೆ ಮಾಡಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗಿನ ಕಾಫಿ ಬೆಳೆಗಾರರು ವರ್ಷವಿಡೀ ಜತನದಿಂದ ಕಾಪಾಡಿಕೊಂಡು ಬಂದಿದ್ದ ಕಾಫಿ ಫಸಲು ಧಾರಾಕಾರ ಮಳೆಗೆ ಧಾರಾಶಾಹಿ ಆಗುತ್ತಿದ್ದು ಬೆಳೆಗಾರರನ್ನು ಕಂಗಾಲಾಗಿಸಿದೆ.

ಜಿಲ್ಲೆಯ ಎಲ್ಲೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿದ್ದು ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಮಿಡಿಗಳು ಉದುರುವಿಕೆಯ ಪ್ರಮಾಣ ಹೆಚ್ಚಾಗಿದೆ. ಕೆಲವು ಗಿಡಗಳಲ್ಲಿ ಕಾಫಿಯ ಫಸಲು ಬಹುತೇಕ ಧಾರಾಶಾಹಿಯಾಗಿದೆ.

ಕೊಳೆರೋಗದಿಂದ ಕಾಫಿಯ ಗಿಡಗಳ ರೆಂಬೆಗಳಲ್ಲಿನ ಫಸಲು ಕಪ್ಪಾಗಿ ಕಾಫಿಯ ಮಿಡಿಗಳು ಇನ್ನಷ್ಟು ಉದುರಿ ಇತರ ಗಿಡಗಳಿಗೂ ಪಸರಿಸುವ ಆತಂಕ ರೈತರಲ್ಲಿ ಮನೆ ಮಾಡಿದೆ. ಮತ್ತಷ್ಟು ಮಳೆ ಸುರಿದರೆ ಬಹುತೇಕ ಫಸಲು ಉದುರಿ ಹೋಗುವ ಸಾಧ್ಯತೆ ಇದ್ದು ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು ಕಂಡು ಬರುತ್ತಿದೆ .

ನಾಪೋಕ್ಲಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಗೆ 40 ಇಂಚು ಮಳೆಯಾಗಿತ್ತು. ಈ ವರ್ಷದ ಇದುವರೆಗಿನ ಮಳೆಯ ಪ್ರಮಾಣ ಸುಮಾರು 83 ಇಂಚು ದಾಖಲಾಗಿದೆ.

ಕಕ್ಕಬೆ, ಯವಕಪಾಡಿ ಗ್ರಾಮದಲ್ಲಿ ಕಳೆದ ವರ್ಷಕ್ಕಿಂತ ಎರಡು ಪಟ್ಟು ಮಳೆಯಾಗಿರುವುದು ಕಾಫಿ ಉದುರುವುದು ಅಧಿಕವಾಗಲು ಕಾರಣ ಎನ್ನುತ್ತಾರೆ ಬೆಳೆಗಾರರು.

ಮಳೆ ಹಾಗೂ ಕಾರ್ಮಿಕರ ಕೊರತೆಯಿಂದಾಗಿ ಕಾಫಿ ಉದುರುವುದು

ತಡೆಗಟ್ಟಲು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಬೆಳೆಗಾರರಿಗೆ ಸಾಧ್ಯವಾಗಿಲ್ಲ. ಮುಂದಿನ ಎರಡು ತಿಂಗಳು ಇನ್ನೂ ಬಿರುಸಿನ ಮಳೆಯಾಗುವ ಸಾಧ್ಯತೆಗಳಿದ್ದು ಕಾಫಿ ಫಸಲು ಉದುರಿ ಬೆಳೆಗಾರರಿಗೆ ಹೆಚ್ಚಿನ ನಷ್ಟ ಸಂಭವಿಸಲಿದೆ ಎನ್ನಲಾಗುತ್ತಿದೆ.

ಈ ಬಾರಿ ಹೂಮಳೆಗೆ ಬೇಕಾದ ಮಳೆ ಪ್ರಾರಂಭದಲ್ಲಿ ಸಿಕ್ಕಿಲ್ಲ ಮತ್ತು ಅಧಿಕ ಉಷ್ಣಾಂಶದಿಂದಾಗಿ ಕಾಫಿಯ ಉದುರುವಿಕೆ ಸಂಭವಿಸಿರಬಹುದು ಎನ್ನುತ್ತಾರೆ ಬೆಳೆಗಾರರು. ನಾಪೋಕ್ಲು, ನೆಲಜಿ, ಬಲ್ಲಮಾವಟ್ಟಿ, ಕಕ್ಕಬೆ, ನಾಲಡಿ, ಯವಕಪಾಡಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಮಳೆಯಾಗಿದ್ದು ಕಾಫಿ ತೋಟಗಳಲ್ಲಿ ಗಿಡಗಳಲ್ಲಿನ ಫಸಲು ಉದುರುತ್ತಿದೆ.

ಜೊತೆಗೆ ಇದೀಗ ಕಾಫಿಗಿಡಗಳಿಗೆ ಕೊಳೆರೋಗ ತಗಲಿದ್ದು ಅಪಾರ ಪ್ರಮಾಣದಲ್ಲಿ ಫಸಲು ಗಿಡಗಳಲ್ಲಿ ಕಪ್ಪಾಗಿ ಧಾರಾಶಾಹಿಯಾಗಿ ನಷ್ಟ ಸಂಭವಿಸುತ್ತಿದೆ.

-----------------------------

ಕಳೆದ ವರ್ಷ 77 ಇಂಚು ಮಳೆ ಸುರಿದಿತ್ತು. ಇದೀಗ ಜುಲೈ ತಿಂಗಲಿಗೆ 104 ಇಂಚು ಮಳೆಯಾಗಿ ತೋಟಗಾರಿಕಾ ಬೆಳೆಯಾದ ಕಾಫಿ ಫಸಲು ನಷ್ಟವಾಗುತ್ತಿದೆ. ಅಧಿಕವಾಗಿ ಸುರಿಯುತ್ತಿರುವ ಮಳೆ ಗಾಳಿಯಿಂದಾಗಿ ಗಿಡದ ರೆಂಬೆಗಳು ಮುರಿದಿವೆ. ಹಾಗೂ ಕಾಫಿಗೆ ಕೊಳೆರೋಗ ಬಾಧಿತವಾಗಿ ಕಾಫಿ ಕಾಯಿಗಳು ಕಪ್ಪಗಾಗಿ ಕೊಳೆತು ಉದುರಿ ಇತರ ಗಿಡಗಳಿಗೂ ಹಬ್ಬಿದೆ. ನಷ್ಟ ತಡೆಗಟ್ಟಲು ಕಾಫಿ ಮಂಡಳಿ, ತಜ್ಞರು ,ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಬೆಳೆಗಾರರೊಂದಿಗೆ ಸಂವಾದ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು.

-ಪಾಡಂಡ ನರೇಶ್‌, ಕಾಫಿ ಬೆಳೆಗಾರ, ಕಕ್ಕಬೆ, ಯವಕಪಾಡಿ.

-----------------------------------------------------

ಕಾಫಿ ಹಾಗೂ ಕಾಳುಮೆಣಸಿಗೂ ಕೊಳೆರೋಗ ಬಾಧಿಸುತ್ತಿದೆ. 10 ದಿನಗಳಿಂದ ಇನ್ನಷ್ಟು ಜೋರು ಮಳೆಯಾಗುತ್ತಿದ್ದು ಕಾಫಿ ಗಿಡದಲ್ಲಿ ಕಾಫಿ ಕಾಯಿಗಳು ಕೊಳೆತು ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಸರ್ಕಾರ ಸಮಸ್ಯೆ ಪರಿಹರಿಸಬೇಕು.

-ಮಣವಟ್ಟಿರ ಜಗದೀಶ್‌, ಕಾಫಿ ಬೆಳೆಗಾರ, ನೆಲಜಿ ಗ್ರಾಮ.

.....................

ಹಾನಿಗೀಡಾದ ಪ್ರದೇಶಗಳಲ್ಲಿ ಕಾಫಿ ಮಂಡಳಿ ಸಮೀಕ್ಷೆ ಮಾಡಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಕಳೆದ ಒಂದು ವಾರದಲ್ಲಿ ಸುರಿದ ರಭಸದ ಮಳೆಯಿಂದ ಗಿಡಗಳ ಬುಡದಲ್ಲಿ ನೀರು ನಿಂತು ಕಾಫಿ , ಅಡಿಕೆ, ಕರಿಮೆಣಸುಗೆ ಕೊಳೆರೋಗ ಬಂದು ಉದುರಿ ನಷ್ಟ ಸಂಭವಿಸಿದೆ.

-ಸಣ್ಣುವಂಡ ಕಾವೇರಪ್ಪ, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ.

----------------

ನಮ್ಮ ಗ್ರಾಮಗಳಲ್ಲಿ ಕಾಫಿ ಕೊಯ್ಲು ಆದ ಕೂಡಲೇ ಸ್ಪ್ರಿಂಕ್ಲರ್

ಬಳಸಿ ತೋಟಗಳಿಗೆ ನೀರು ಹನಿಸಿದ್ದು ಉತ್ತಮ ಕಾಫಿ ಹೂವು ಬಂದಿತ್ತು, ಆದರೆ ಇದೀಗ ಬಾರಿ ಮಳೆಯಿಂದಾಗಿ ಕಾಫಿ ಉದುರುವುದರ ಜೊತೆಗೆ ಕೊಳೆ ರೋಗವು ಗಿಡಗಳಿಗೆ ಹಬ್ಬುದಿದ್ದು ಕಾಫಿ ಬೆಳೆಗಾರರು ಬಾರಿ ನಷ್ಟ ಅನುಭವಿಸುವಂತಾಗಿದೆ.

-ಚೇನಂಡ ಗಿರೀಶ್‌ ಪೂಣಚ್ಚ, ಬೆಳೆಗಾರ, ಕೋಕೇರಿ ಗ್ರಾಮ.