ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡದಲ್ಲಿ ಮುಂಗಾರು ಆರಂಭವಾಗಿ ಹಲವು ದಿನಗಳೇ ಕಳೆದಿದ್ದರೂ, ಇದೀಗ ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾಗಿದೆ. ಬುಧವಾರ ಜಿಲ್ಲಾದ್ಯಂತ ಬಿಟ್ಟೂ ಬಿಟ್ಟು ದಿನವಿಡಿ ಮಳೆ ಸುರಿದಿದೆ. ಭಾರೀ ಗಾಳಿ- ಮಳೆಯಿಂದ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಮರಗಳು ಬಿದ್ದು ಕೆಲವೆಡೆ ಸಂಚಾರಕ್ಕೆ ಸಮಸ್ಯೆಯಾಗಿದೆ. ರಸ್ತೆಗಳಲ್ಲೇ ನೀರು ಹರಿದು ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.ಉಳ್ಳಾಲದ ಮದನಿ ನಗರದಲ್ಲಿ ಮನೆ ಮೇಲೆ ಬೃಹತ್ ತಡೆಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದ್ದರೆ, ಉಳ್ಳಾಲದಲ್ಲೇ ಇತರ 2-3 ಮನೆಗಳಿಗೆ ಹಾನಿ ಸಂಭವಿಸಿದೆ. ಉಳಿದಂತೆ ದೊಡ್ಡ ಮಟ್ಟದಲ್ಲಿ ಅನಾಹುತ ನಡೆದಿಲ್ಲ ಎಂದು ಅಸಿಸ್ಟೆಂಟ್ ಕಮಿಷನರ್ ಹರ್ಷವರ್ಧನ್ ತಿಳಿಸಿದ್ದಾರೆ. ಉಳ್ಳಾಲ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ಮಳೆಯಿಂದ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ.ಅಲ್ಲಲ್ಲಿ ಹಾನಿ:
ಉರ್ವ ಮಾರ್ಕೆಟ್ ಬಳಿ ಮಠದಕಣಿ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಅರಣ್ಯ ಇಲಾಖೆ ವತಿಯಿಂದ ಮರಗಳನ್ನು ತೆರವುಗೊಳಿಸಲಾಯಿತು. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಅತ್ತಾವರದ ಕಪ್ರಿಗುಡ್ಡದಲ್ಲಿ ಮತ್ತೊಂದು ಮರ ಬಿದ್ದಿದೆ. ಕಣ್ಣೂರಿನಲ್ಲಿ ಮನೆಯೊಂದರ ಗೋಡೆಗೆ ಹಾನಿಯಾಗಿದ್ದು, ಕುಟುಂಬವನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ.ಬಜಾಲ್ ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು: ಭಾರೀ ಮಳೆಯಿಂದಾಗಿ ಬಜಾಲ್‌ನ ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡು ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೀವ್ರ ಅನನುಕೂಲವಾಯಿತು. ಪ್ರತಿ ಮಳೆಗಾಲದಲ್ಲಿ ಈ ಕೆಳಸೇತುವೆ ಮುಳುಗಡೆಯಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಆಡಳಿತ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಇದೇ ಕೆಳಸೇತುವೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.ರಸ್ತೆ ಮೇಲೆ ಕೃತಕ ಪ್ರವಾಹ: ಮಂಗಳೂರು ಮಹಾ ನಗರದಲ್ಲಿ ಬಹುತೇಕ ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು. ಪ್ರತಿ ವರ್ಷವೂ ನಗರದಲ್ಲಿ ಕೃತಕ ಪ್ರವಾಹ ಸಾಮಾನ್ಯವಾಗಿದೆ. ಸೂಕ್ತ ಸಮಯದಲ್ಲಿ ಚರಂಡಿಗಳ ಹೂಳೆತ್ತದೆ ಇರುವುದು, ಚರಂಡಿಗಳೇ ಇಲ್ಲದಿರುವುದರಿಂದ ಕೃತಕ ಪ್ರವಾಹ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಬಡಗಎಡಪದವು ಎಂಬಲ್ಲಿ ಮಳೆ ನೀರು ಚರಂಡಿ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ನೀರು ತುಂಬಿಕೊಂಡಿತ್ತು. ಜೆಪ್ಪಿನಮೊಗರು ದೊಂಪದಬಳಿ ಗದ್ದೆಯಲ್ಲಿ ನೀರು ನಿಂತು ನಿವಾಸಿಗಳಿಗೆ ತೊಂದರೆಯಾಗಿದೆ.ಹೆದ್ದಾರಿ ಹೊಂಡಕ್ಕೆ ಸಿಲುಕಿದ ಸ್ಕೂಟರ್!:
ನಗರದ ಅಲ್ಲಲ್ಲಿ ಮಳೆಯಿಂದಾಗಿ ರಸ್ತೆ ಹೊಂಡಗಳು ಸೃಷ್ಟಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟರ್ ಸವಾರರೊಬ್ಬರು ಹೆದ್ದಾರಿ ಗುಂಡಿಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ರಸ್ತೆಯ ದುರವಸ್ಥೆಗೆ ಮನನೊಂದ ಅವರು ಸ್ಕೂಟರ್‌ನ್ನು ಗುಂಡಿಯ ಮೇಲೆ ನಿಲ್ಲಿಸಿ ಪಕ್ಕದಲ್ಲಿಯೇ ನಿಂತು ಕೆಲಕಾಲ ಪ್ರತಿಭಟನೆ ನಡೆಸಿ ಇತರ ವಾಹನ ಸವಾರರಿಗೆ ರಸ್ತೆ ಗುಂಡಿ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 27ರಂದು ಕೂಡ ಭಾರೀ ಮಳೆ ಮುನ್ಸೂಚನೆಯ ರೆಡ್ ಅಲರ್ಟ್‌ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಜೂನ್ 29ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.ಅಪಾಯದ ಮನೆಗಳ ಸರ್ವೇ
ಪ್ರತಿ ವರ್ಷವೂ ಮಳೆಗಾಲದಲ್ಲಿ ಅಪಾಯದ ಅಂಚಿನಲ್ಲಿರುವ ಮನೆಗಳನ್ನು ಗುರುತಿಸಲಾಗುತ್ತದೆ. ಈ ವರ್ಷವೂ ಗುರುತಿಸಲಾಗಿದ್ದು, ಅಂತಹ ಮನೆಮಂದಿಯನ್ನು ಮಳೆ ನಿಲ್ಲುವರೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಉಳ್ಳಾಲದಲ್ಲಿ ತಡೆಗೋಡೆ ಬಿದ್ದು ನಾಲ್ವರು ಸಾವಿಗೀಡಾದ ಪ್ರಕರಣದಲ್ಲಿ, ಆ ಮನೆಯನ್ನು ಈ ವರ್ಷ ನವೀಕರಣ ಮಾಡಿದ್ದರಿಂದ ಸರ್ವೇಯಲ್ಲಿ ಗುರುತಿಸಿರಲಿಲ್ಲ, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಸಿಸ್ಟೆಂಟ್ ಕಮಿಷನರ್ (ಎಸ್) ಹರ್ಷವರ್ಧನ್ ತಿಳಿಸಿದ್ದಾರೆ.