ಕಾಪು ತಾಲೂಕಿನಲ್ಲಿ ಭಾರಿ ಮಳೆ: ಜನರ ಸ್ಥಳಾಂತರ

| Published : Jul 20 2024, 12:55 AM IST

ಸಾರಾಂಶ

ಮಳೆಯಿಂದ ಜಿಲ್ಲೆಯಲ್ಲಿ 31 ಮನೆಗಳಿಗೆ ಹಾನಿಯಾಗಿದ್ದು, 3 ಮನೆಗಳೂ ಸಂಪೂರ್ಣ ಕುಸಿದಿವೆ. 5 ಜಾನುವಾರು ಕೊಟ್ಟಿಗೆಗಳಿಗೆ ಮತ್ತು 5 ಕುಟುಂಬಗಳ ತೋಟಗಾರಿಕಾ ಬೆಳೆಗಳಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾದ್ಯಂತ ಮಳೆ ತೀವ್ರಗೊಂಡಿದ್ದು, ಯಾವುದೇ ಕ್ಷಣದಲ್ಲಿ ಭಾರಿ ಪ್ರವಾಹ ಉಕ್ಕೇರುವ ಪರಿಸ್ಥಿತಿ ಇದೆ. ಕಳೆದೊಂದು ವಾರದಲ್ಲಿ ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿಯೇ ಧಾರಾಕಾರವಾಗಿ ಸುರಿದ ಮಳೆ, ಈಗ ಕಾಪು ಮತ್ತು ಕಾರ್ಕಳ ತಾಲೂಕುಗಳನ್ನು ಆಯ್ದುಕೊಂಡಂತಿದೆ.

ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 149.20 ಮಿ.ಮೀ. ಮಳೆಯಾಗಿದೆ. ಅದರಲ್ಲಿ ಅತೀ ಹೆಚ್ಚು ಕಾರ್ಕಳ ತಾಲೂಕಿನಲ್ಲಿ 201.70 ಮಿ.ಮೀ. ಮತ್ತು ಕಾಪು ತಾಲೂಕಿನಲ್ಲಿ 176.10 ಮಿ.ಮೀ. ಮಳೆಯಾಗಿದೆ.

ಈ ಮಳೆಯಿಂದ ಜಿಲ್ಲೆಯಲ್ಲಿ 31 ಮನೆಗಳಿಗೆ ಹಾನಿಯಾಗಿದ್ದು, 3 ಮನೆಗಳೂ ಸಂಪೂರ್ಣ ಕುಸಿದಿವೆ. 5 ಜಾನುವಾರು ಕೊಟ್ಟಿಗೆಗಳಿಗೆ ಮತ್ತು 5 ಕುಟುಂಬಗಳ ತೋಟಗಾರಿಕಾ ಬೆಳೆಗಳಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಕಾಪುನಲ್ಲಿ ಪ್ರವಾಹದ ಭೀತಿ:

ಈ ಮಳೆಗಾಲದಲ್ಲಿ ಕಾಪು ತಾಲೂಕಿನಲ್ಲಿ ಪ್ರಥಮ ಬಾರಿಗೆ ಭಾರಿ ಮಳೆಯಾಗುತ್ತಿದೆ. ಇಲ್ಲಿನ ಪಾಂಗಾಳ, ಪಾಪನಾಶಿನಿ, ಪಿನಾಕಿನಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ಗದ್ದೆ ತೋಟಗಳನ್ನು ಜಲಾವೃತಗೊಳಿಸಿದೆ. ಅನೇಕ ಮನೆಗಳಿಗೆ ಜಲದಿಗ್ಬಂಧನ ವಿಧಿಸಿವೆ. ಇಲ್ಲಿನ ತಗ್ಗು ಪ್ರದೇಶಗಳಾದ ಮಜೂರು, ಉಳಿಯಾರು, ಜಲಂಚಾರು, ಬೆಳಪು, ಕುಂಜೂರು, ಏರ್ಮಾಳು, ಇನ್ನಂಜೆ, ಮೂಳೂರು, ಮಲ್ಲಾರು ಉಳಿಯಾರಗೋಳಿ ಪ್ರದೇಶಗಳಲ್ಲಿ ನದಿಗಳು ದಡ ಮೀರಿ ಹರಿಯುತ್ತಿದ್ದು, ಅಕ್ಕಪಕ್ಕದ ಜನರು ಆತಂಕಕ್ಕೊಳಗಾಗಿದ್ದಾರೆ.

ಕಾಪು - ಇನ್ನಂಜೆ, ಮೂಳೂರು - ಬೆಳಪು, ಮಜೂರು - ಪಾದೂರು, ಜಲಂಜಾರು - ಕರಂದಾಡಿ - ಕಲ್ಲುಗುಡ್ಡೆ ಸಂಪರ್ಕ ರಸ್ತೆಗಳ ಮೇಲೆ ಮಳೆ ನೀರು ತುಂಬಿ ಕೆಲ ಕಾಲ ಜನ - ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮಧ್ಯಾಹ್ನದ ನಂತರ ಮಳೆ ಸ್ವಲ್ಪ ಇಳಿಮುಖವಾಗಿದ್ದು, ರಸ್ತೆಗಳಲ್ಲಿ ನೀರು ಇಳಿಮುಖವಾಗಿದೆ.

ಜನರ ಸುರಕ್ಷಿತ ಸ್ಥಳಾಂತರ:

ಅಲೆವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹರಿಯುತ್ತಿರುವ ಪಾಪನಾಶಿನಿ ಮತ್ತು ಪಿನಾಕಿನಿ ನದಿಗಳಲ್ಲಿಯೂ ಪ್ರವಾಹದ ಸ್ಥಿತಿ ಇತ್ತು. ಇನ್ನೂ ಹೆಚ್ಚು ಮಳೆಯಾದರೆ ಸಮಸ್ಯೆ ಕೂಡ ಹೆಚ್ಚಲಿದೆ. ಇಲ್ಲಿನ ಕುದ್ರುಗಳಲ್ಲಿ ವಾಸಿಸುವ ಜನರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಾಂತರಿಸಲಾಗಿದೆ.

ಮಲ್ಲಾರು, ಪಾದೆಬೆಟ್ಟು ಮತ್ತು ಏಣಗುಡ್ಡೆ ಗ್ರಾಮಗಳ 6 ಕುಟುಂಬಗಳ 26 ಜನರನ್ನು ಸ್ಥಳಾಂತರಿಸಲಾಗಿದೆ. ಉಡುಪಿ ತಾಲೂಕಿನ ಕೆಮ್ತೂರು ಗ್ರಾಮದಲ್ಲಿ ಜಲಾವೃತಗೊಂಡ ಒಂದು ಮನೆಯ 4 ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದಿದ್ದರೂ, ಸಂತಸ್ತರೆಲ್ಲರೂ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ.

ಸೇತುವೆ ಮುಳುಗುವ ಭೀತಿ:

ಹಿರಿಯಡ್ಕ ಮತ್ತು ಶಿರೂರು ಮೂಲಮಠವನ್ನುಸಂಪರ್ಕಿಸುವ ಮಾಣೈ ಸೇತುವೆಯಲ್ಲಿ ಸ್ವರ್ಣಾ ನದಿ ಉಕ್ಕಿ ಹರಿಯುತ್ತಿದೆ. ರಾತ್ರಿ ಬಿಡದೇ ಸುರಿದ ಮಳೆಗೆ ಮುಂಜಾನೆ ನದಿಯು ಸೇತುವೆಯ ತಳಭಾಗಕ್ಕೆ ಅಪ್ಪಳಿಸುತ್ತಿತ್ತು. ನಂತರ ನೀರು ಸ್ವಲ್ಪ ಕಡಿಮೆಯಾದರೂ, ಕಾರ್ಕಳ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಿಂದ ಹರಿದು ಬರುವ ಸ್ವರ್ಣ ನದಿಯಲ್ಲಿ ಯಾವುದೇ ಹೊತ್ತಿನಲ್ಲಿ ಪ್ರವಾಹ ಏರುವ ಸಾಧ್ಯತೆ ಇದೆ.

ಇಲ್ಲಿನ ಸ್ವರ್ಣನದಿ ಪಾತ್ರದ ಬಜೆ, ಮಾಣೈ, ಶಿರೂರು, ಪುತ್ತಿಗೆ ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಮಳೆ ನೀರು ತುಂಬಿದಿದೆ. ಬಜೆಯಲ್ಲಿರುವ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಲಾಶಯ ತುಂಬಿದ್ದು, ಭಾರಿ ಪ್ರಮಾಣದಲ್ಲಿ ನೀರು ಅಣೆಕಟ್ಟೆಯಿಂದ ಹೊರಗೆ ದುಮ್ಮುಕ್ಕುತ್ತಿದೆ.