ಉತ್ತರ ಕನ್ನಡದ ಬಹುತೇಕ ತಾಲೂಕಿನಲ್ಲಿ ಭಾರಿ ಮಳೆ

| Published : Jun 08 2024, 12:35 AM IST

ಉತ್ತರ ಕನ್ನಡದ ಬಹುತೇಕ ತಾಲೂಕಿನಲ್ಲಿ ಭಾರಿ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ಮಧ್ಯಾಹ್ನದ ವೇಳೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ಅಂಕೋಲಾ ತಾಲೂಕಿನ ನಾಡವರಕೇರಿ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿತ್ತು.

ಕಾರವಾರ: ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ಮುಂದಿನ ೫ ದಿನಗಳ ವರೆಗೆ ಭಾರಿ ಮಳೆ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಂಕೋಲಾ ತಾಲೂಕಿನ ಬೋಳೆ ಗ್ರಾಮದ ನಾಡವರಕೇರಿ ಅಂಗನವಾಡಿ ಕೇಂದ್ರಕ್ಕೆ ಹಾಗೂ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಮಳೆ ನೀರು ನುಗ್ಗಿತ್ತು.

ಶುಕ್ರವಾರ ಮಧ್ಯಾಹ್ನದ ವೇಳೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ಅಂಕೋಲಾ ತಾಲೂಕಿನ ನಾಡವರಕೇರಿ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿತ್ತು. ನಿರಂತರವಾಗಿ ಮಳೆಯಾಗುತ್ತಿದ್ದ ಕಾರಣ ಕೇಂದ್ರದ ಎದುರಿನ ಚರಂಡಿ ಉಕ್ಕಿ ಹರಿದು ಕೇಂದ್ರದೊಳಗೆ ಕೆಸರು ನುಗ್ಗಿದ್ದು, ಅದನ್ನು ಖಾಲಿ ಮಾಡಲಾಗದೇ ಅಂಗನವಾಡಿ ಸಿಬ್ಬಂದಿ ಪರದಾಡುವಂತಾಯಿತು. ಮಳೆ ಹೆಚ್ಚಾಗುತ್ತಿದ್ದಂತೆ ನೀರು ಅಂಗವಾಡಿಯೊಳಕ್ಕೆ ಮತ್ತಷ್ಟು ಸೇರಿಕೊಂಡಿತ್ತು.

ಅಂಗನವಾಡಿಯಲ್ಲಿದ್ದ ದಿನಸಿ, ಇತರ ವಸ್ತುಗಳನ್ನು ಸುರಕ್ಷಿತವಾಗಿರಿಸಿದರು. ನೀರು ನುಗ್ಗಿದ ಸಂದರ್ಭದಲ್ಲಿ ಅದೃಷ್ಟವಶಾತ್ ಮಕ್ಕಳು ಮನೆಗೆ ತೆರಳಿದ್ದರು. ಧಾರಾಕಾರ ಮಳೆಗೆ ಊರಿನ ಕಾಲುವೆ ತುಂಬಿ ಹರಿದು ರಸ್ತೆ ಕೆರೆಯಂತಾಗಿತ್ತು. ಇದರಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು. ಪಟ್ಟಣದಲ್ಲೂ ಭಾರಿ ಮಳೆಯಿಂದ ರಸ್ತೆಯ ಮೇಲೆಲ್ಲಾ ನೀರು ಹರಿದಿತ್ತು.

ಭಟ್ಕಳದಲ್ಲಿ ಬೆಳಗ್ಗೆಯಿಂದಲೇ ತುಂತುರು ಮಳೆಯಾಗಿದೆ. ಮುಂಡಗೋಡಿನಲ್ಲಿ ಮಧ್ಯಾಹ್ನ ೨ ತಾಸಿಗೂ ಅಧಿಕ ಕಾಲ ಭಾರಿ ಮಳೆಯಾಗಿದೆ. ಶಿರಸಿ ತಾಲೂಕಿನ ಬಹುತೇಕ ಕಡೆ ಮಧ್ಯಾಹ್ನ ಕೆಲಹೊತ್ತು ಜಿಟಿ ಜಿಟಿ ಮಳೆಯಾಗಿದೆ. ಜೋಯಿಡಾ, ದಾಂಡೇಲಿ, ಕುಮಟಾ, ಹೊನ್ನಾವರ ಭಾಗದಲ್ಲಿ ಸಣ್ಣ ಮಳೆಯಾಗಿದೆ.

ಕರಾವಳಿ ಭಾಗದಲ್ಲಿ ಮಳೆ ಇಲ್ಲದೇ ಸೆಕೆಯಿಂದ ಬೆಂದಿದ್ದ ಜನತೆಗೆ ಮಳೆ ತಂಪು ನೀಡಿದೆ. ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರೂ ಕಾರವಾರದಲ್ಲಿ ಸೆಕೆ ಕಡಿಮೆಯಾಗುವಷ್ಟು ಮಳೆಯಾಗಿರಲಿಲ್ಲ. ಶುಕ್ರವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದ್ದು, ತಂಪಾದ ವಾತಾವಣ ಮೂಡಿದೆ.

ಮುಂದಿನ ೫ ದಿನ ಭಾರಿ ಗಾಳಿ ಸಹಿತ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.