ಬಳ್ಳಾರಿಯಲ್ಲಿ ಧಾರಾಕಾರ ಮಳೆಗೆ ಜನರ ಪರದಾಟ

| Published : Jun 08 2024, 12:35 AM IST

ಸಾರಾಂಶ

ಹತ್ತಾರು ಮರಗಳು ನೆಲಕ್ಕುರುಳಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ.ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯೂ ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಮಳೆ ಸುರಿಯಿತು.

ಬಳ್ಳಾರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಏಳು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹತ್ತಾರು ಮರಗಳು ನೆಲಕ್ಕುರುಳಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ.ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯೂ ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಸಿಡಿಲಿನ ಆರ್ಭಟವಿತ್ತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಬೆಳಿಗ್ಗೆ ಸುಮಾರು 11.20ಕ್ಕೆ ಆರಂಭಗೊಂಡ ಮಳೆ ಸತತ ಎರಡು ತಾಸಿಗೂ ಹೆಚ್ಚು ಹೊತ್ತು ಮಳೆಯಾಯಿತು.

ಜಿಲ್ಲೆಯ ಸಿರುಗುಪ್ಪ, ಸಂಡೂರು, ಕುರುಗೋಡಿನಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಕಂಪ್ಲಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ ಜೂನ್ 1ರಿಂದ ಈವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತಲೂ ಮೂರುಪಟ್ಟು ವರುಣನ ಕೃಪೆಯಾಗಿದೆ. ಕಳೆದ 7 ದಿನಗಳ ಅವಧಿಯಲ್ಲಿ 66 ಮಿ.ಮೀ. ಇದ್ದು, 211 ಮಿ.ಮೀ. ಮಳೆಯಾಗಿರುವುದು ಕೃಷಿಕರಲ್ಲಿ ಸಂತಸ ಇಮ್ಮಡಿಸಿದೆ.

ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನಜಾವ 8 ಗಂಟೆವರೆಗೆ ಜಿಲ್ಲೆಯಲ್ಲಿ 14.6 ಮಿ.ಮೀ. ಮಳೆಯಾಗಿದೆ. ಸಿರುಗಪ್ಪದಲ್ಲಿ 20 ಮಿ.ಮೀ., ಸಂಡೂರು 18.5 ಮಿ.ಮೀ., ಕುರುಗೋಡು 11.1 ಮಿ.ಮೀ., ಬಳ್ಳಾರಿ 8.3 ಮಿ.ಮೀ. ಹಾಗೂ ಕಂಪ್ಲಿ ತಾಲೂಕಿನಲ್ಲಿ 8.1 ಮಿ.ಮೀ. ಮಳೆಯಾಗಿದೆ.

ಸತತ ಎರಡು ತಾಸು ನಿರಂತರವಾಗಿ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಾರ್ವಜನಿಕರು ಪರದಾಡಿದರು. ಇಲ್ಲಿನ ಬಂಡಿಮೋಟ್, ಲಾರಿ ಟರ್ಮಿನಲ್, ರೇಣುಕಾನಗರ, ವಿಶ್ವೇಶ್ವರಯ್ಯನಗರ, ದೇವಿನಗರ, ರೇಡಿಯೋ ಪಾರ್ಕ್‌, ಕೊರಚರಬೀದಿ, ಬಾಪೂಜಿನಗರ ಸೇರಿದಂತೆ ಹತ್ತಾರು ಪ್ರದೇಶಗಳಲ್ಲಿ ಮಳೆಯ ನೀರು ಅವಾಂತರ ಸೃಷ್ಟಿಸಿತು.

ಮಳೆನೀರು ಸರಾಗವಾಗಿ ಹರಿಯಲು ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ರಸ್ತೆಯಲ್ಲಿ ನೀರು ಹರಿಯುವ ದೃಶ್ಯಗಳು ಕಂಡು ಬಂದವು. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು ನೀರು ಹೊರ ಹಾಕಲು ಜನರು ಪರದಾಡುವಂತಾಯಿತು. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸದ ಪಾಲಿಕೆ ಆಡಳಿತ ವೈಖರಿ ವಿರುದ್ಧ ನಗರ ನಿವಾಸಿಗಳು ಹಿಡಿಶಾಪ ಹಾಕಿದರು.

ನಗರ ಪ್ರದೇಶ ವ್ಯಾಪ್ತಿಯ ಕೊಳಗಲ್ಲು, ಬಿಸಿಲಹಳ್ಳಿ, ಬಿ.ಗೋನಾಳ್, ಅಂದ್ರಾಳು, ಮುಂಡ್ರಗಿ, ಇಂದಿರಾನಗರ, ಬೇವಿನಹಳ್ಳಿಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ತಡರಾತ್ರಿ ನಗರ ಹೊರವಲಯದಲ್ಲಿ ಉತ್ತಮ ಮಳೆಯಾಗಿರುವ ವರದಿಯಾಗಿದೆ. ಬಳ್ಳಾರಿ ತಾಲೂಕಿನ ಮೋಕಾ ಹಾಗೂ ರೂಪನಗುಡಿ ಹೋಬಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಬಸರಕೋಡು, ಗೋಟೂರು, ಹೊಣೆನೂರು, ಕರ್ಚೇಡು ಭಾಗದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಿಗ್ಗೆ ಮಳೆಯಾಗಿದೆ. ಜಿಲ್ಲೆಯ ಕಂಪ್ಲಿನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಉತ್ತಮ ಹಾಗೂ ಕುರುಗೋಡು, ಸಿರುಗುಪ್ಪ ಹಾಗೂ ಸಂಡೂರು ಭಾಗದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.