ಕಾನೂರು: ರಾಮನಹಡ್ಲುವಿನಲ್ಲಿ ರಸ್ತೆ ಪಕ್ಕದಲ್ಲೇ 30 ಮಂಗಗಳ ಶವ ಪತ್ತೆ

| Published : Jun 08 2024, 12:35 AM IST

ಕಾನೂರು: ರಾಮನಹಡ್ಲುವಿನಲ್ಲಿ ರಸ್ತೆ ಪಕ್ಕದಲ್ಲೇ 30 ಮಂಗಗಳ ಶವ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಕಾನೂರು ಗ್ರಾಮದ ರಾಮನಹಡ್ಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಮುಖ್ಯ ರಸ್ತೆಯ ಪಕ್ಕದಲ್ಲೇ 30 ಮಂಗಗಳ ಮೃತದೇಹ ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಗಾಬರಿ ಮೂಡಿಸಿತು.

ಗಾಬರಿಗೊಂಡ ಗ್ರಾಮಸ್ಥರು । ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಕಾನೂರು ಗ್ರಾಮದ ರಾಮನಹಡ್ಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಮುಖ್ಯ ರಸ್ತೆಯ ಪಕ್ಕದಲ್ಲೇ 30 ಮಂಗಗಳ ಮೃತದೇಹ ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಗಾಬರಿ ಮೂಡಿಸಿತು.

ಬೆಳಿಗ್ಗೆ ರಾಮನಹಡ್ಲು ಎಂಬಲ್ಲಿ ಚಿಕ್ಕಅಗ್ರಹಾರ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಮೇಗರಮಕ್ಕಿ ಮೀಸಲು ಅರಣ್ಯಕ್ಕೆ ಸೇರಿದ ಜಾಗದಲ್ಲಿ ರಸ್ತೆಯಿಂದ 20 ಮೀಟರ್‌ ದೂರದಲ್ಲಿ 30 ಮಂಗಗಳ ಮೃತದೇಹ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಆತಂಕಗೊಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ತಕ್ಷಣ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಸಚಿನ್‌, ಎಸಿಎಫ್‌ ಸುದರ್ಶನ್, ಕಾನೂರು ಉಪ ವಲಯ ಅರಣ್ಯಾಧಿಕಾರಿ ರಂಗನಾಥ್‌, ಕಾನೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್‌, ಗ್ರಾಮ ಆಡಳಿತಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೇಸಿಗೆ ದಿನಗಳಲ್ಲಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಂಗನ ಕಾಯಿಲೆ ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ವಿನಯಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್‌ ಠಾಣಾಧಿಕಾರಿ ನಿರಂಜನ ಗೌಡ ಆಗಮಿಸಿ ಪರಿಶೀಲನೆ ನಡೆಸಿದರು.

ಪೋಸ್ಟ್‌ ಮಾರ್ಟಂ:

ಮಂಗಗಳ ಅಸಹಜ ಸಾವು ಹಿನ್ನಲೆಯಲ್ಲಿ ಪಶು ವೈದ್ಯರಿಂದ ಪೋಸ್ಟ್‌ ಮಾರ್ಟಂ ನಡೆಸಲಾಯಿತು. ಮಂಗಗಳ ಸಾವಿಗೆ ನಿಖರ ಕಾರಣ ತಿಳಿಯಲು ಅವುಗಳ ದೇಹದ ಕೆಲವು ಭಾಗಗಳನ್ನು ತೆಗೆದಿದ್ದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ. 1972 ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. -- ಕೋಟ್‌--

30 ಮಂಗಗಳು ಅಸಹಜ ರೀತಿಯಲ್ಲಿ ಮೃತಪಟ್ಟಿರುವುದರಿಂದ ಸಮಗ್ರ ತನಿಖೆ ನಡೆಸುತ್ತೇವೆ. 1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು. ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅದರ ಫಲಿತಾಂಶ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ದೇಹದ ಸ್ಯಾಂಪಲ್ ಕಳಿಸಿದ್ದೇವೆ. ಯಾವ ಕಾರಣಕ್ಕಾಗಿ ಮಂಗಗಳು ಸತ್ತಿವೆ ಎಂಬುದು ತಿಳಿದ ನಂತರ ಮಂದಿನ ಕ್ರಮಕೈಗೊಳ್ಳುತ್ತೇವೆ. ಈಗ ತನಿಖೆ ಮುಂದುವರಿಸಿದ್ದೇವೆ.

ಸಚಿನ್,

ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿಗಳು

ನರಸಿಂಹರಾಜಪುರ --ಕೋಟ್‌--

ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಯಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸತ್ತ ಮಂಗಗಳ ದೇಹದ ಸ್ಯಾಂಪಲ್ ನ್ನು ಶಿವಮೊಗ್ಗದ ಕೆಎಫ್‌ಡಿ ಪ್ರಯೋಗಾಲಯಕ್ಕೆ ಕಳಿಸಿದ್ದೇವೆ. ಪುಣೆ ಪ್ರಯೋಗಾಲಯದಿಂದ ಫಲಿತಾಂಶ ಬಂದ ನಂತರ ನಿಖರವಾದ ಕಾರಣ ತಿಳಿಯಲಿದೆ. ಮುಂಜಾಗ್ರತಾ ಕ್ರಮವಾಗಿ ಸತ್ತ ಮಂಗಗಳ ಸುತ್ತ ಮುತ್ತ ಮೆಲಾಥೀನ್ ಪೌಡರ್ ಸಿಂಪಡಿಸಿದ್ದೇವೆ. ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಡೆಫಾ ಆಯಿಲ್ ನೀಡಿದ್ದು ಮೈ ಕೈಗೆ ಹಚ್ಚಿಕೊಳ್ಳುಲು ಸೂಚಿಸಿದ್ದೇವೆ. ಗ್ರಾಮದಲ್ಲಿ ಜ್ವರ ಕಂಡು ಬಂದಿದೆಯೇ ಎಂಬುದರ ಬಗ್ಗೆ ಸರ್ವೆ ಮಾಡಿಸುತ್ತಿದ್ದೇವೆ. ಎಲ್ಲೂ ಜ್ವರ ಕಂಡು ಬಂದಿಲ್ಲ.

ಡಾ.ವಿಜಯಕುಮಾರ್‌,

ತಾಲೂಕು ವೈದ್ಯಾಧಿಕಾರಿಗಳು

, ನರಸಿಂಹರಾಜಪುರ