ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಮುಂದುವರಿದೆ. ಶುಕ್ರವಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ಮಧ್ಯರಾತ್ರಿಯಿಂದಲೇ ವರುಣ ಆರ್ಭಟ ಜೋರಾಗಿತ್ತು. ಅಲ್ಲದೆ, ಶುಕ್ರವಾರ ಕೂಡ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಸಂಜೆ 6 ಗಂಟೆ ಸುಮಾರಿಗೆ ಜಿಟಿ ಜಿಟಿಯಾಗಿ ಆರಂಭವಾದ ಮಳೆ ನಂತರ ಜೋರಾಗಿಯೇ ಸುರಿದಿದೆ.ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಯ ಇಕ್ಕೆಲ್ಲಗಳಲ್ಲಿ ನೀರು ತುಂಬಿ ಹರಿಯಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಜನರು ಹರಸಾಹಸ ಪಟ್ಟು ತಮ್ಮ ಮನೆಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹಿರೇಬಾಗೇವಾಡಿಯಲ್ಲಿಯೂ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಹಿರೇಬಾಗೇವಾಡಿ - ಬೈಲಹೊಂಗಲ ರಾಜ್ಯ ಹೆದ್ದಾರಿ ಜಲಾವೃತಗೊಂಡಿತ್ತು. ಇದರಿಂದಾಗಿ ಸವಾರರು ನಿಂತ ನೀರಿನಲ್ಲಿಯೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಯಿತು.ಬೆಳಗಾವಿ, ಖಾನಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಮಳೆ ಸುರಿದಿದೆ. ಅಲ್ಲದೇ, ಬೈಲಹೊಂಗಲ, ಎಂ.ಕೆ.ಹುಬ್ಬಳ್ಳಿ, ಸವದತ್ತಿ ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆ ಸುರಿದ್ದು, ಹೊಲಗದ್ದೆಗಳಲ್ಲಿಯೂ ನೀರುನಿಂತಿದೆ.ಬೆಳಗಾವಿ ನಗರದಲ್ಲಿ ಬೀದಿ ಬದಿಯ ತರಕಾರಿ ವ್ಯಾಪಾರಸ್ಥರು ತೀವ್ರ ತೊಂದರೆ ಎದುರಿಸಬೇಕಾಯಿತು. ದ್ವಿಚಕ್ರವಾಹನ ಸವಾರರು ಮಳೆಯಲ್ಲೇ ತೋಯಿಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಗಾಂಧಿನಗರದ ಫ್ರೂಟ್ ಮಾರ್ಕೆಟ್‌ನಲ್ಲಿ ನೀರು ನಿಂತಿದ್ದು, ವ್ಯಾಪಾರಸ್ಥರಿಗೆ ತೊಂದರೆ ಉಂಟಾಯಿತು.