ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ / ರಾಯಚೂರು
ವಾರಂತ್ಯ ಕಾರಣಕ್ಕೆ ಧಾರ್ಮಿಕ ಕ್ಷೇತ್ರಗಳಾದ ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ ಭಾರೀ ಜನಸ್ತೋಮ ಕಂಡುಬಂದಿತು.ಮಿಥುನ ಮಾಸ ಆರಂಭವಾಗಿ ಈ ವರ್ಷ ಮಳೆ ಪ್ರಮಾಣ ಕಡಿಮೆಯಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ 50 ಸಾವಿರಕ್ಕೂ ಅಧಿಕ ಭಕ್ತರು ಶನಿವಾರ ರಾತ್ರಿಯೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನ ರಥಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಂಡುಬಂತು. ದೇವರ ದರ್ಶನಕ್ಕಾಗಿ ಭಕ್ತರು ರಥಬೀದಿಯವರೆಗೂ ಸರತಿ ಸಾಲಿನಲ್ಲಿ ನಿಂತಿದ್ದು, ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶವಿಲ್ಲದೆ ಪರದಾಡುಂತಾಯಿತು. ಇದೇ ವೇಳೆ ಸಾಮಾನ್ಯವಾಗಿ ನಿತ್ಯ 2000-3000 ಭಕ್ತರು ಭೇಟಿ ನೀಡುವ ಕಟೀಲು ದುರ್ಗಾಪರಮೇಶ್ವರಿ ದೇಗುಲಕ್ಕೆ ಭಾನುವಾರ 15000 ಭಕ್ತರು ಆಗಮಿಸಿದ್ದಾಗಿ ತಿಳಿದುಬಂದಿದೆ.
ರಾಘವೇಂದ್ರ ಸ್ವಾಮಿ ಮಠದ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ:ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಸಗಮಿಸುವ ಭಕ್ತರು ಮಠದ ಕಾರಿಡಾರ್‌ನಲ್ಲಿ ಮಲಗುತ್ತಾರೆ. ಆದರೆ, ವಾರದ ರಜೆ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ವಿವಿಧ ಪ್ರದೇಶಗಳಿಂದ ಕುಟುಂಬ ಸಮೇತರಾಗಿ ಸಾವಿರಾರು ಜನರು ಶನಿವಾರ ಆಗಮಿಸಿದ್ದರು. ಈ ವೇಳೆ ಭಾರಿ ಮಳೆಯಾಗಿದ್ದು, ಭಕ್ತರು ಪರದಾಟ ನಡೆಸಿದರು. ತಕ್ಷಣ ಶ್ರೀಮಠವು ಭಕ್ತರನ್ನು ಎಚ್‌ಆರ್‌ಬಿ ಕಲ್ಯಾಣ ಮಂಟಪಕ್ಕೆ ಕಳುಹಿಸಿಕೊಟ್ಟು ಮಲುಗಲು ವ್ಯವಸ್ಥೆಯನ್ನು ಕಲ್ಪಿಸಿತು. ಇಡೀ ರಾತ್ರಿ ಮಳೆಯಾಗಿದ್ದರಿಂದ ಭಕ್ತರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಚಳಿಯಲ್ಲಿ ನಡುಗುವಂತಾಯಿತು. ನಿಯಮ ಉಲ್ಲಂಘನೆ:
ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ನೋ ಪಾರ್ಕಿಂಗ್ ಜಾಗದಲ್ಲಿಯೂ ನಿಲುಗಡೆ ಮಾಡಲಾಗಿತ್ತು., ಇದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಯಿತು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ವರ್ಗ ಭಕ್ತರ ಸುಗಮ ದರ್ಶನ, ಅನ್ನಪ್ರಸಾದ ವಿತರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಆದಿ ಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭಕ್ತರಿಗೆ ಬಫೆ ವ್ಯವಸ್ಥೆಯ ಮೂಲಕ ಭೋಜನ ವಿತರಿಸಲಾಯಿತು.