ಹೆಬ್ರಿ ಸರ್ಕಾರಿ ಕಾಲೇಜು ಶಿಕ್ಷಕ ರಕ್ಷಕ ಸಂಘ ಸಭೆ

| Published : Oct 27 2025, 12:45 AM IST

ಸಾರಾಂಶ

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ 2025–26ನೇ ಶೈಕ್ಷಣಿಕ ಸಾಲಿನ ಶಿಕ್ಷಕ–ರಕ್ಷಕ ಸಂಘದ ಸಭೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಹೆಬ್ರಿ

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ 2025–26ನೇ ಶೈಕ್ಷಣಿಕ ಸಾಲಿನ ಶಿಕ್ಷಕ–ರಕ್ಷಕ ಸಂಘದ ಸಭೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಜಿ. ಸುಧಾಕರ್, ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ, ಮೊಬೈಲ್ ದುರ್ಬಳಕೆ ಮತ್ತು ರಸ್ತೆ ಸುರಕ್ಷತೆ ಕುರಿತಾಗಿ ಎಚ್ಚರಿಕೆ ನೀಡುತ್ತಾ, ಕ್ರೀಡೆ, ಸ್ಪರ್ಧಾತ್ಮಕ ಪರೀಕ್ಷೆ, ತಂತ್ರಜ್ಞಾನ ಮತ್ತು ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್., ಕಾಲೇಜಿನ ವಿವಿಧ ಸೌಲಭ್ಯಗಳನ್ನು ಬಳಸಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸ್ಮರಿಸಿ, ಪೋಷಕರು ತಮ್ಮ ಮಕ್ಕಳ ಶಿಕ್ಷಣಾಭಿವೃದ್ಧಿಗಾಗಿ ಕಾಲೇಜಿನೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಕರೆ ನೀಡಿದರು.

ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷರಾದ ಸುಮನಾ ಮಾತನಾಡಿದರು. ಈ ಸಂದರ್ಭದಲ್ಲಿ 2025-26ನೇ ಸಾಲಿಗೆ ಹೊಸ ಶಿಕ್ಷಕ–ರಕ್ಷಕ ಸಂಘವನ್ನು ರಚಿಸಲಾಯಿತು. ಅಧ್ಯಕ್ಷೆಯಾಗಿ ಸುನೀತಾ, ಕಾರ್ಯದರ್ಶಿಯಾಗಿ ಶಿವಕುಮಾರ, ಸದಸ್ಯರಾಗಿ ಉದಯ, ಶೋಭ ಮತ್ತು ಮಂಜುಳಾ ಅವರನ್ನು ಆಯ್ಕೆ ಮಾಡಲಾಯಿತು.

ಸಂಘದ ಸಂಚಾಲಕ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಅಪೂರ್ವ (ತೃತೀಯ ಬಿ.ಎ.) ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಗಣೇಶ ಎಸ್., ವಿದ್ಯಾರ್ಥಿ ವೇದಿಕೆ ಸಂಚಾಲಕಿ ಸುಷ್ಮಾ ರಾವ್, ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಗೂ ಪೋಷಕರು ಉಪಸ್ಥಿತರಿದ್ದರು.