ಧಾರ್ಮಿಕ ಕೇಂದ್ರಗಳ ಮೇಲೆ ಹೆಲಿಕಾಪ್ಟರ್ ಪುಷ್ಪಾರ್ಚನೆ

| Published : May 30 2024, 12:56 AM IST

ಸಾರಾಂಶ

ಬನಹಟ್ಟಿ, ರಬಕವಿ, ಮಹಾಲಿಂಗಪೂರ, ತೇರದಾಳ ಪಟ್ಟಣಗಳಲ್ಲಿ ಹೆಲಿಕಾಪ್ಟರ್‌ ಪುಷ್ಪವೃಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ:

ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ, ರಬಕವಿ, ಮಹಾಲಿಂಗಪೂರ, ತೇರದಾಳ ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳ ೨೦ಕ್ಕೂ ಅಧಿಕ ದೇವಾಲಯ, ಬಸದಿ ಹಾಗು ಮಸೀದಿಗಳ ಮೇಲೆ ಬುಧವಾರ ಇಡೀ ದಿನ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಗೈಯ್ಯಲಾಯಿತು.

ಉದ್ಯಮಿ ಪ್ರಕಾಶ ದೇಸಾಯಿ ಅವರಿಂದ ಬನಹಟ್ಟಿಯ ವಿಶ್ರಾಂತಿ ಧಾಮ ಹತ್ತಿರ ಹೆಲಿಪ್ಯಾಡ್ ನಿರ್ಮಿಸಿ, ಸುಮಾರು ೨೦ ಸುತ್ತುಗಳ ಪ್ರತ್ಯೇಕ ಕ್ಷೇತ್ರ ಪ್ರದಕ್ಷಿಣೆಯನ್ನು ಮಾಡಿದ್ದು, ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿ ಪರ್ಯಟನೆ ಮಾಡಿದ್ದು ವಿಶೇಷ.

ಶರಣಬಸವ ಶಿವಾಚಾರ್ಯರು ಮಾತನಾಡಿ, ಇದೊಂದು ಮಹತ್ತರ ಕಾರ್ಯ ಈ ಭಾಗದ ಜನತೆಗೆ ತಮ್ಮ ಸ್ವಂತ ಊರುಗಳನ್ನು ಬಾನಂಗಳದಿಂದ ಅತಿ ಎತ್ತರದಿಂದ ನೋಡುವ ಮೂಲಕ ದೇವಾಲಯಗಳಿಗೆ ಪುಷ್ಪಾರ್ಚನೆ ಮಾಡುವಲ್ಲಿ ಕಾರಣವಾಗಿದೆ. ಇಂತಹ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದಿದ್ದು, ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಜಾತಿ, ಪಂಥ ಎಲ್ಲೇ ಮೀರಿ ಸರ್ವ-ಧರ್ಮೀಯರನ್ನು ಪ್ರೀತಿಸುವ ಮೂಲಕ ನೂರಾರು ಜನರಿಂದ ಆಕಾಶದಿಂದ ಪುಷ್ಪಾರ್ಚನೆ ಮಾಡುವುದು ಸಾಮಾನ್ಯ ಕಾರ್ಯವಲ್ಲ. ಇದಕ್ಕೆ ಕಾರಣರಾದ ಪ್ರಕಾಶ ದೇಸಾಯಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.