ಡೆಂಘೀ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ

| Published : Jul 08 2024, 12:32 AM IST

ಸಾರಾಂಶ

ಪ್ರತಿಯೊಬ್ಬರು ಸಹ ತಮ್ಮ ಜವಾಬ್ದಾರಿ ಅರಿತು ರೋಗದಿಂದ ದೂರವಿರಿ. ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಿ

ಕನ್ನಡಪ್ರಭ ವಾರ್ತೆ ಕೋಲಾರಪ್ರತಿ ಶುಕ್ರವಾರ ಡ್ರೈಡೇ ಆಚರಿಸಿ, ನೀರಿನ ತಾಣಗಳನ್ನು ಸ್ವಚ್ಚಗೊಳಿಸಿ, ಡೆಂಘೀಕಾರಕ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕೋಲಾರವನ್ನು ಡೆಂಘೀ ಮುಕ್ತ ಜಿಲ್ಲೆಯಾಗಿಸೋಣ ಎಂದು ಜಿಪಂ ಸಿಇಓ ಪದ್ಮಬಸವಂತಪ್ಪ ಕರೆ ನೀಡಿದರು.ತಾಲ್ಲೂಕಿನ ತೊರದೇವಂಡಹಳ್ಳಿಯಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ‘ಡೆಂಘೀ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ವಾರಕ್ಕೊಂದು ದಿನ-ಪ್ರತಿ ಶುಕ್ರವಾರ ಈಡೀ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ದಿನವಾಗಿ ಆಚರಿಸಲು ಸರ್ಕಾರದ ಸೂಚನೆಯಡಿ ನಡೆದ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮನೆಮನೆಗೂ ಭೇಟಿ ನೀಡಿ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.ಡೆಂಘೀ ತಡೆಗೆ ಸೊಳ್ಳೆ ನಿಯಂತ್ರಿಸಿ

೭ರಿಂದ ೧೦ ದಿನ ಸೊಳ್ಳೆಗಳ ಸಂತತಿ ಬೆಳವಣಿಗೆಯಾಗುವುದರಿಂದ ವಾರಕ್ಕೊಮ್ಮೆ ಪ್ರತಿ ಶುಕ್ರವಾರ ನೀರು ಸಂಗ್ರಹ ಮೂಲಗಳನ್ನು ಸ್ವಚ್ಚಗೊಳಿಸಿ ಒಣದಿನವಾಗಿ ಆಚರಿಸಿ ನಂತರ ನೀರು ತುಂಬಿಸಿ ಬಳಸಿ, ಡೆಂಘೀ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ನಿಖರವಾದ ಚಿಕಿತ್ಸೆ ಮತ್ತು ಚುಚ್ಚುಮದ್ದು ಇಲ್ಲದ ಕಾರಣದಿಂದ ಸಾವು ಸಂಭವಿಸಬಹುದು, ಇದಕ್ಕಾಗಿ ಕಾಯಿಲೆ ಬರದಂತೆ ಎಚ್ಚರವಹಿಸಬೇಕು ಎಂದರು.

ಈ ನಿಟ್ಟಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಜಾಗಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕೆಂದು ವಿವರಿಸಿ, ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದರೆ ಕೋಲಾರ ಜಿಲ್ಲೆಯನ್ನು ಡೆಂಘೀ ಮುಕ್ತ ಜಿಲ್ಲೆಯಾಗಿಸಲು ನಡೆಯುತ್ತಿರುವ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಮನುಷ್ಯರಿಗೆ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದೆ. ಇದರಲ್ಲಿ ಡೆಂಘೀ ಜ್ವರವು ಸಹ ಒಂದಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ನೀರು ನಿಲ್ಲದಂತೆ ಎಚ್ಚರ ವಹಿಸಿ

ಡಿಹೆಚ್‌ಒ ಡಾ.ಜಗದೀಶ್ ಮನೆ ಮನೆ ಸಮೀಕ್ಷೆ ನಡೆಸಿ ಮಾತನಾಡಿ, ಪ್ರತಿಯೊಬ್ಬರು ಸಹ ತಮ್ಮ ಜವಾಬ್ದಾರಿ ಅರಿತು ರೋಗದಿಂದ ದೂರವಿರಿ. ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳು ಮತ್ತು ಸಿಂಟೆಕ್ಸ್‌ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು. ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು ಎಂದರು.ಸಮುದಾಯದ ಸಹಭಾಗಿತ್ವ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಸಮುದಾಯದ ಸಹಭಾಗಿತ್ವದೊಂದಿಗೆ ಡೆಂಘೀ ನಿಯಂತ್ರಣ ಮಾಡಬಹುದಾಗಿದೆ, ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಇಲಾಖೆ ಮುಂದಾಗಿದೆ. ಈಡೀಸ್ ಈಜಿಪ್ಟಿ ಎಂಬ ಸೊಳ್ಳೆ ಕಡಿತದಿಂದ ಹರಡುತ್ತದೆ. ಡೆಂಘೀ ರೋಗ ತಡೆಗಟ್ಟಲು ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

ರೋಗ ತಡೆಗಟ್ಟಲು ಸಹಕರಿಸಿ

ತಾಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಗ್ರಾ.ಪಂ ಪಿಡಿಒಗಳು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ನೀರಿನ ಮೂಲಗಳ ಬಳಿ ಸ್ವಚ್ಚತೆಗೆ ಕ್ರಮವಹಿಸಬೇಕು, ಆರೋಗ್ಯ ಇಲಾಖೆಯೊಂದಿಗೆ ರೋಗ ತಡೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾದೇವಿ, ಡೆಂಘೀನಿಂದಾಗುವ ಆರೋಗ್ಯ ಸಮಸ್ಯೆ, ಅದರ ನಿಯಂತ್ರಣಕ್ಕಾಗಿ ಸೊಳ್ಳೆಗಳ ನಾಶಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿ, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಬಾಟೆಲ್, ಟೈರು ಮತ್ತಿತರವುಗಳಲ್ಲಿ ನೀರು ಸಂಗ್ರಹವಾಗಲು ಅವಕಾಶ ನೀಡದಿರಿ ಎಂದರು. ವೈದ್ಯಾಧಿಕಾರಿ ಡಾ.ರಮೇಶ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ್, ಲೋಕೇಶ್, ಶಶಿಕುಮಾರ್ ಇದ್ದರು.