ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಗ್ರಾಮಾಂತರ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಭೀಕರ ಮಳೆಯಿಂದ ಭಾರಿ ಹಾನಿಯಾಗಿದ್ದು ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಎಲ್ಲ ಕೆಲಸ ಬಿಟ್ಟು ಸಂತ್ರಸ್ತ ಹಳ್ಳಿಗಳಿಗೆ ಭೇಟಿ ಕೊಡಬೇಕು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡ ಶನಿವಾರ ಆಗ್ರಹಿಸಿದ್ದಾರೆ.ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ಮತ್ತು ಮಲಸಂದ್ರ ಪಾಳ್ಯದಲ್ಲಿ ಗುರುವಾರ ಮತ್ತು ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಯಿಂದ ಕುಸಿದ ಮನೆಗಳಿಗೆ ಭೇಟಿ ನೀಡಿದ್ದರು. ಈ ಎರಡೂ ಕಡೆಗಳಲ್ಲಿ 43 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ ಐದು ಮನೆಗಳು ಪೂರ್ಣವಾಗಿ ಬಿದ್ದಿವೆ. 21 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಇಷ್ಟು ಅನಾಹುತ ಆದರೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡದೆ ತಾತ್ಸಾರ ಮನೋಭಾವ ಹೊಂದಿರುವುದನ್ನು ಶಾಸಕ ಬಿ.ಸುರೇಶ್ ಗೌಡ ತೀವ್ರ ತರಾಟೆಗೆ ತೆಗೆದುಕೊಂಡರು. ಅದರಲ್ಲಿಯೂ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯಾದ್ಯಂತ ತೀವ್ರ ಹಾನಿಯಾಗಿದೆ.ಶಾಸಕರು ಕ್ಷೇತ್ರದಲ್ಲೇ ಇದ್ದು ವಿಷಯ ತಿಳಿದ ಕೂಡಲೇ ತಾಲೂಕು ಬಿಜೆಪಿ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಜೊತೆಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಗ್ರಾಮಗಳಲ್ಲಿ ದಲಿತ ಮತ್ತು ಹಿಂದುಳಿದ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರು ಇದೀಗ ನಿರ್ವಸಿತರಾಗಿದ್ದಾರೆ. ಅವರಿಗೆ ತಕ್ಷಣ ಮರುವಸತಿಗೆ ಸರ್ಕಾರ ವ್ಯವಸ್ಥೆ ಮಾಡಬೇಕುʼ ಎಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದ ಶಾಸಕರು ಅಲ್ಲಿಂದಲೇ ತಾಲೂಕಿನ ಮತ್ತು ಜಿಲ್ಲಾ ಆಡಳಿತದ ಅಧಿಕಾರಿಗಳ ಜತೆಗೆ ಮಾತನಾಡಿ ಮಳೆ ಹಾನಿ ಸಂತ್ರಸ್ತರಿಗೆ ಒದಗಿಸಬೇಕಾದ ಎಲ್ಲ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರು ತಕ್ಷಣ ಮಳೆ ಹಾನಿಗೀಡಾದ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಜಿಲ್ಲಾಡಳಿತಕ್ಕೆ ನರ್ದೇ ಶನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಇನ್ನೂ ಕೆಲವು ದಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿರುವುದರಿಂದ ಜಿಲ್ಲಾಧಿಕಾರಿಗಳ ಮತ್ತು ಎಲ್ಲ ತಹಶಿಲ್ದಾರ್‌ಗಳ ಕಚೇರಿಗಳಲ್ಲಿ ತುರ್ತು ಸಂದರ್ಭದಲ್ಲಿ ನೆರವು ಕೇಳಲು ಕಾಲ್ ಸೆಂಟರ್ ಮತ್ತು ನಿಯಂತ್ರಣ ಕೊಠಡಿಯ ವ್ಯವಸ್ಥೆ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.ಹಾನಿಗೊಳಗಾಗಿರುವ ಎಲ್ಲಾ ನಿರ್ವಸತಿಗರಿಗೆ ವೈಯಕ್ತಿಕವಾಗಿ ತಲಾ ಹತ್ತು ಸಾವಿರ ರು. ಧನ ಸಹಾಯ ನೀಡುವುದಾಗಿ ಶಾಸಕ ಬಿ. ಸುರೇಶ್ ಗೌಡ ಘೋಷಿಸಿದರು.ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮಳೆ ಹಾನಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ದವಸ ಧಾನ್ಯ ಹೊದಿಕೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಅವರು ಒತ್ತಾಯಿಸಿದರು.ಈ ಸಂರ್ಭಸದಲ್ಲಿ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಶಂಕರ್ ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವರಾಜ್, ಕೊಟ್ಟನಳ್ಳಿಯ ರಾಜಶೇಖರ, ಬಿಜೆಪಿ ಮುಖಂಡರಾದ ಸ್ವಾಮಿ, ಕೊತ್ತಿಹಳ್ಳಿಯ ರಾಜಣ್ಣ ಗಿರೀಶ್,ಚಂದ್ರಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.