ಹೇಮರೆಡ್ಡಿ ಮಲ್ಲಮ್ಮ ಇಡೀ ಸ್ತ್ರೀಕುಲಕ್ಕೆ ಮಾದರಿ: ಶಾಸಕ ಎಸ್. ಎನ್. ಚನ್ನಬಸಪ್ಪ

| Published : May 11 2025, 01:22 AM IST

ಹೇಮರೆಡ್ಡಿ ಮಲ್ಲಮ್ಮ ಇಡೀ ಸ್ತ್ರೀಕುಲಕ್ಕೆ ಮಾದರಿ: ಶಾಸಕ ಎಸ್. ಎನ್. ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದು, ಶ್ರದ್ದೆ ಮತ್ತು ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದೆಂದು ಅವರು ತೋರಿಸಿದ್ದಾರೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದು, ಶ್ರದ್ದೆ ಮತ್ತು ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದೆಂದು ಅವರು ತೋರಿಸಿದ್ದಾರೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಲ್ಲಮ್ಮ ತಮ್ಮ ಕುಟುಂಬದಲ್ಲಿ ಎದುರಾದ ನೋವುಗಳನ್ನೆಲ್ಲಾ ಸಹಿಸಿಕೊಂಡು ಮೇಲೆ ಬಂದರು. ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅವರ ತಾಳ್ಮೆ ಬದುಕಿಗೆ ಶಕ್ತಿ ತಂದು ಕೊಟ್ಟಿತ್ತು. ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಮಲ್ಲಮ್ಮ ಎಂದರು.

ಮಲ್ಲಮ್ಮನಿಗೆ ಬುದ್ದಿ ಕಲಿಸಲು ಅವರ ಅತ್ತೆ ಭಿಕ್ಷುಕನಿಗೆ ನಿಗಿ ನಿಗಿ ಕೆಂಡ ಭಿಕ್ಷೆ ನೀಡುವಂತೆ ಹೇಳಿದಾಗ ಮಲ್ಲಮ್ಮ ಶ್ರೀ ಶೈಲಮಲ್ಲಿಕಾರ್ಜುನನ್ನು ಮನದಲ್ಲಿ ನೆನೆದು ಭಕ್ತಿಯಿಂದ ಅದನ್ನೇ ಭಿಕ್ಷೆ ನೀಡಿದಾಗ ಅದು ಧಾನ್ಯವಾಗುತ್ತದೆ. ಆಗಿನಿಂದ ಅವರನ್ನು ಕೆಂಡದ ಮಲ್ಲಮ್ಮ ಎಂದು ಕರೆಯಲಾಗುತ್ತದೆ.

ಆಕೆಯ ಭಕ್ತಿ ಮತ್ತು ನಂಬಿಕೆಯಿಂದ ಇಂತಹ ಹಲವು ಪವಾಡ ನಡೆದ ಕಾರಣ ಇವರನ್ನು ಪವಾಡ ಪುರುಷಳೆಂದು ಸಹ ಕರೆಯಲಾಗುತ್ತದೆ ಎಂದು ಹೇಳಿದರು.

ಮಲ್ಲಮ್ಮನವರು ಸದಾ ಶ್ರೀ ಶೈಲ ಮಲ್ಲಿಕಾರ್ಜುನನ್ನು ಜಪಿಸುತ್ತಿದ್ದರು. ನನ್ನ ಜೊತೆ ಸದಾ ಮಲ್ಲಿಕಾರ್ಜುನನು ಇರುತ್ತಾನೆ ಎಂಬ ನಂಬಿಕೆಯಿಂದ ಮಲ್ಲಮ್ಮ ಎಲ್ಲ ಕಷ್ಟಗಳನ್ನು ಸಹಜವಾದ ರೀತಿಯಲ್ಲಿ ಸ್ವೀಕರಿಸಿದರು. ಈ ಮೂಲಕ ಸಮಾಜಕ್ಕೆ ತಾಳ್ಮೆಯ ಶಕ್ತಿಯನ್ನು ತಿಳಿಸಿದರು ಎಂದು ಸ್ಮರಿಸಿದರು.

ಇಂತಹ ಸಾಧ್ವಿಗಳು ಮತ್ತು ದಾರ್ಶನಿಕರಿಂದ ಈ ದೇಶದ ಸಂಸ್ಕೃತಿ, ಪರಂಪರೆ, ನಂಬಿಕೆಗಳ ನೆಲೆಗಟ್ಟು ಗಟ್ಟಿಯಾಗಿ ಉಳಿದಿದೆ. ಮಲ್ಲಮ್ಮರಂತಹ ಶರಣೆಯರ ಬದುಕು ಆದರ್ಶ ಪ್ರಾಯ. ಇಂತಹ ಭಕ್ತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಉತ್ತಮವಾಗಿರುತ್ತದೆ ಎಂದರು.

ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಾ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಹಸೀನಾ ಹೆಚ್.ಕೆ. ಯವರು ಮಲ್ಲಮ್ಮ ಕುರಿತು ಮಾತನಾಡಿ, ಸಾದ್ವಿತನಕ್ಕೆ ದೊಡ್ಡ ಉದಾಹರಣೆಯಾಗಿದ್ದಾರೆ. ನಮ್ಮ ಕನ್ನಡ ನಾಡಿನ ಉದ್ದಗಲಕ್ಕೆ ಆದರ್ಶ ವ್ಯಕ್ತಿಗಳು ಇದ್ದಾರೆ. 14-15 ನೇ ಶತಮಾನದಲ್ಲಿದ್ದ ಮಲ್ಲಮ್ಮನವರು ನೀಡಿರುವ ಕೌಟುಂಬಿಕ ಮೌಲ್ಯಗಳು, ಗುರು ಹಿರಿಯರ ಅಂಶಗಳನ್ನು ನಾವು ಪ್ರಸ್ತುತದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಗುರುವಿನ ಶಕ್ತಿಯಿಂದ ಏನಾನ್ನಾದ್ರೂ ಸಾಧನೆ ಮಾಡಬಹುದೆಂದು ಅವರಿಂದ ತಿಳಿಯುತ್ತದೆ. ಜಾನಪದ ಕಥೆಗಳಲ್ಲಿ ಅವರ ಶೌರ್ಯ, ಸಾಹಸಗಳನ್ನು ನೋಡಬಹುದು. ಸಂತ ಶಿಶುನಾಳ ಷರೀಫರು ಸಹ ಮಲ್ಲಮ್ಮನನ್ನು ಹಾಡಿ ಹೊಗಳಿ ಬರೆದಿದ್ದಾರೆ. ಮಹಾನ್ ದಾರ್ಶನಿಕರು ಸಮಾಜಕ್ಕೆ ಅಗತ್ಯವಾಗಿ ಬೇಕು ಎಂದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ಜಿ.ಕುಮಾರಸ್ವಾಮಿ ಮಾತನಾಡಿ, ಅಕ್ಮಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಇವರೆಲ್ಲ ಮಾದರಿ ಸ್ತ್ರೀಯರು. ಮಲ್ಲಮ್ಮ ಸಂಸಾರದ ಕೋಟಲೆಯನ್ನು ತಾಳ್ಮೆ ಯಿಂದ ಸಹಿಸಿ, ಬೆಟ್ಟದಂತಹ ಕಷ್ಟವನ್ನು ಹೂವಾಗಿ ಅರಳಿಸಿದವರು. ಪುರುಷರಿಗೂ ಮಾದರಿ ಇವರು. ಅವರ ಬದುಕಿನ ಸಾರವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ ಜಿ. ಎಸ್. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್ ಉಮೇಶ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.