ಸಾರಾಂಶ
ಹಾಸನದ ಗೊರೂರು ಅಣೆಕಟ್ಟೆಯಿಂದ ಸುಮಾರು 70 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಹೊರ ಹರಿವಿನ ಪ್ರಮಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ದಂಡೆಯ ಕೆಲವು ಜಮೀನುಗಳಿಗೆ ನೀರು ನುಗ್ಗಿದ್ದರೂ ಬೆಳೆ ಹಾನಿ ವರದಿಯಾಗಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಹೇಮಾವತಿ ನದಿ ಮೈದುಂಬಿ ಹರಿದು ನೋಡುಗರ ಗಮನ ಸೆಳೆಯುತ್ತಿದೆ.ಹಾಸನದ ಗೊರೂರು ಅಣೆಕಟ್ಟೆಯಿಂದ ಸುಮಾರು 70 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಹೊರ ಹರಿವಿನ ಪ್ರಮಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ನದಿ ದಂಡೆಯ ಕೆಲವು ಜಮೀನುಗಳಿಗೆ ನೀರು ನುಗ್ಗಿದ್ದರೂ ಬೆಳೆ ಹಾನಿ ವರದಿಯಾಗಿಲ್ಲ. ಕಿಕ್ಕೇರಿ ಹೋಬಳಿಯ ಗೊಂದಿಹಳ್ಳಿ ಬಳಿಯಿಂದ ತಾಲೂಕು ಪ್ರವೇಶಿಸಿಸುವ ಹೇಮಾವತಿ ಕೆ.ಆರ್.ಎಸ್ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ತ್ರಿವೇಣಿ ಸಂಗಮದಲ್ಲಿ ಕಾವೇರಿಯಲ್ಲಿ ಮಿಲನಗೊಳ್ಳುತ್ತದೆ.ತಾಲೂಕಿನ ಮಂದಗೆರೆ ಹಾಗೂ ಹೇಮಗಿರಿಯ ಬಳಿ ಹೇಮಾವತಿ ನದಿಗೆ ಮೈಸೂರು ಅರಸರ ಆಳ್ವಿಕೆಯಲ್ಲಿ ಶತಮಾನಗಳ ಹಿಂದೆಯೇ ಒಡ್ಡು ಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ. ಹೇಮೆಯ ಪ್ರವಾಹದಿಂದ ನೀರು ಒಡ್ಡು ಅಣೆಕಟ್ಟೆಗಳು ಮುಚ್ಚಿಹೋಗುವಂತೆ ಮಾಡಿದ್ದು ನದಿಯ ಇಕ್ಕೆಲಗಳಲ್ಲೂ ನೀರು ರಭಸವಾಗಿ ಹರಿಯುತ್ತಿದೆ.
ತಾಲೂಕು ವ್ಯಾಪ್ತಿಯಲ್ಲೂ ಹನಿ ಹನಿ ಮಳೆಯಾಗುತ್ತಿದೆ. ಮೋಡ ಮುಸುಕಿದ ವಾತಾವರಣ ಇದೆ. ಹೇಮೆಯ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾದರೆ ನದಿ ದಂಡೆ ಚಿಕ್ಕಮಂದಗೆರೆ ಸೇರಿದಂತೆ ಹಲವೆಡೆ ಜನ ಸಂಕಷ್ಟಕ್ಕೆ ಸಿಲುಕಲಿದ್ದಾರೆ.ಗದ್ದೆಹೊಸೂರು ಬಳಿ ನದಿಯ ನಡುಗಡ್ಡೆಯಲ್ಲಿ ವಾಸಿಸುತ್ತಿರುವ ಕುಟುಂಬವನ್ನು ಹೊರತರಬೇಕಾಗುತ್ತದೆ. ಪ್ರವಾಹವದ ಪರಿಸ್ಥಿತಿ ಎದುರಿಸಲು ನೀರಾವರಿ ಇಲಾಖೆ ಹಾಗೂ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪ್ರವಾಹ ಪರಿಸ್ಥಿಯ ಬಗ್ಗೆ ಈಗಾಗಲೇ ನದಿ ದಂಡೆಯ ಆಸು ಪಾಸಿನ ಗ್ರಾಮಸ್ಥರುಗಳಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುವ ಜೊತೆಗೆ ನದಿ ದಂಡೆ ಕೃಷಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಕೆಆರ್ ಎಸ್ ನೀರಿನ ಮಟ್ಟಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 124.38 ಅಡಿ
ಒಳ ಹರಿವು – 1,03,327 ಕ್ಯುಸೆಕ್ಹೊರ ಹರಿವು – 1,02,200 ಕ್ಯುಸೆಕ್
ನೀರಿನ ಸಂಗ್ರಹ – 48.866 ಟಿಎಂಸಿ