ಮುಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆಯಡಿಯಲ್ಲೂ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸುತ್ತೇನೆ ಎಂದು ಶಾಸಕ ಟಿಬಿ ಜಯಚಂದ್ರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿರಾ ಕಳೆದ ೨೩ ವರ್ಷಗಳಿಂದ ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿಯುತ್ತಿದ್ದು, ಕಳ್ಳಂಬೆಳ್ಳ, ಶಿರಾ, ಮದಲೂರು ಸೇರಿದಂತೆ ಸುಮಾರು ೩೪ ಕೆರೆಗಳನ್ನು ೬೪ ಬ್ಯಾರೇಜ್‌ಗಳನ್ನು ತುಂಬಿಸಿದ್ದೇನೆ. ಮುಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆಯಡಿಯಲ್ಲೂ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸುತ್ತೇನೆ ಎಂದು ಶಾಸಕ ಟಿಬಿ ಜಯಚಂದ್ರ ತಿಳಿಸಿದರು. ಅವರು ಭಾನುವಾರ ಮದಲೂರು ಕೆರೆಗೆ ದಂಪತಿ ಸಮೇತ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ನಂತರ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಮಾನಿಗಳು ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿರಾ ತಾಲೂಕಿನ ಜೀವನಾಡಿಯಾದ ಮದಲೂರು ಕೆರೆ ಹೇಮಾವತಿ ನೀರು ಹರಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಅದೇ ರೀತಿ ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳ ಕೆರೆಗಳಿಗೂ ಹೇಮಾವತಿ ನೀರು ಹರಿಸುತ್ತೇನೆ. ಮದಲೂರು ಕೆರೆಗೆ ನೀರು ಹರಿಸಲು ದಿವಂಗತ ಮುಖ್ಯಮಂತ್ರಿ ದೇವರಾಜ್ ಅರಸು ಅವರೇ ಮೂಲ ಕಾರಣ. ಅಂದು ಅವರು ತುಮಕೂರಿಗೆ ಹೇಮಾವತಿ ನೀರು ಹರಿಸಲು ಬಾಗೂರು ನವಿಲೆ ಸುರಂಗದ ಶಂಕುಸ್ಥಾಪನೆಗೆ ಬಂದಾಗ ತುಮಕೂರು ಜಿಲ್ಲೆಗೆ ನೀರು ಬರುತ್ತದೆ. ನೀನು ಅಧಿಕಾರ ಪಡೆದುಕೋ ಆಗ ಅಲ್ಲಿಂದ ಎಲ್ಲಿಗೆ ಬೇಕಾದರೂ ನೀರು ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದ್ದರು. ಅವರ ಮಾತಿನಂತೆ ಶಿರಾ ತಾಲೂಕಿನಾದ್ಯಂತ ಹೇಮಾವತಿ ನೀರನ್ನು ಹರಿಸಿ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ ಎಂದರು. ಈ ಬಾರಿ ಶಿರಾ ತಾಲೂಕಿನಲ್ಲಿ ಸಮರ್ಪಕ ಮಳೆ ಬಂದಿಲ್ಲ. ಆದರೂ ನಾನು ಹೇಮಾವತಿ ನೀರನ್ನು ಹರಿಸಿ ತಾಲೂಕಿನ ೩೪ ಕೆರೆಗಳನ್ನು ಹಾಗೂ ೬೪ ಬ್ಯಾರೇಜ್ ಗಳನ್ನು ತುಂಬಿಸಿದ್ದೇನೆ, ಇದರಿಂದ ರೈತರು ನಮ್ಮ ತಾಲೂಕಿನಲ್ಲಿ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು. ತೆಪ್ಪೋತ್ಸವ: ಶಿರಾ ತಾಲೂಕಿನ ಮದಲೂರು ಕೆರೆ ತುಂಬಿ ಕೋರಿ ಹರಿದ ಹಿನ್ನೆಲೆಯಲ್ಲಿ ಪ್ರಥಮ ಭಾರಿಗೆ ತೆಪ್ಪೋತ್ಸವ ಏರ್ಪಡಿಸಲಾಗಿತ್ತು. ಶಾಸಕ ಟಿ.ಬಿ.ಜಯಚಂದ್ರ ಅವರು ದಂಪತಿ ಸಮೇತ ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಿರ್ಮಲ ಜಯಚಂದ್ರ, ಕಾಡುಗೊಲ್ಲ ನಿಗಮ ಮಂಡಳಿ ಅಧ್ಯಕ್ಷ ಹಾರೋಗೆರೆ ಮಹೇಶ್, ಕಾಂಗ್ರೆಸ್ ಯುವ ನಾಯಕ ಸಂಜಯ್ ಜಯಚಂದ್ರ, ಸೂಡ ಅಧ್ಯಕ್ಷ ಆರ್ ಮಂಜುನಾಥ್, ಗ್ರಾಮಾಂತರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮೂದ್, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ. ಎಸ್ ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರ್ ಗೌಡ, ಶಿರಾ ಕುಂಚಿಟಿಗರ ಸಂಘದ ಅಧ್ಯಕ್ಷ ಮುಕುಂದಪ್ಪ, ಕೆಪಿಸಿಸಿ ಸದಸ್ಯ ಟಿ. ಲೋಕೇಶ್, ಕಾಂಗ್ರೆಸ್ ಯುವ ಮುಖಂಡ ಡಿ.ಸಿ ಅಶೋಕ್, ಮದಲೂರು ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆಂಚಮಾರಯ್ಯ, ಮದಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ರೂಪ ರಂಗನಾಥ್, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪರ್ವತಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ನಗರ ಅಧ್ಯಕ್ಷ ಅಂಜನ್ ಕುಮಾರ್, ಮುಖಂಡರಾದ ಕೊಟ್ಟ ಶಂಕರ್, ಗೋಣಿಹಳ್ಳಿ ದೇವರಾಜು ಸೇರಿದಂತೆ ಹಲವರು ಹಾಜರಿದ್ದರು.