ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಕೋಳಿ ಜಗಳ!

| Published : Feb 13 2024, 12:49 AM IST

ಸಾರಾಂಶ

ಕೊನೆಗೂ ಕೋಳಿಗೂ ಹಾಫ್‌ ಟಿಕೇಟ್ ಹರಿಯುವಲ್ಲಿ ಕಂಡಕ್ಟರ್ ಯಶಸ್ವಿಯಾದ ಮಹಿಳೆ ಮಾತ್ರ ಜಗಳೂರು ತಲುಪುವವರೆಗೂ ಕಂಡಕ್ಟರ್ ನನ್ನು ಶಪಿಸುತ್ತಿದ್ದಳು.

ಕೂಡ್ಲಿಗಿ: ಇಲ್ಲಿಯ ಬಸ್‌ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಅಕ್ಷರಶಃ ಕೋಳಿ ಜಗಳ ನಡೆದಿದೆ. ಮಹಿಳೆಯೋರ್ವಳು ರಟ್ಟಿನ ಬಾಕ್ಸಿನಲ್ಲಿ ರಹಸ್ಯವಾಗಿ ಒಯ್ಯುತ್ತಿದ್ದ ಕೋಳಿ ರಾತ್ರಿಯ ವೇಳೆ ಕೂಗಿ ತನ್ನ ಇರುವಿಕೆ ದೃಢಪಡಿಸಿದ್ದು ರಾದ್ದಾಂತಕ್ಕೆ ಕಾರಣವಾಗಿದೆ!

ಸಾಕಷ್ಟು ವಾದ ವಿವಾದದ ಬಳಿಕ ಕೋಳಿಗೆ ಟಿಕೆಟ್‌ ಪಡೆಯಮ್ಮ ಎಂದು ಕಂಡೆಕ್ಟರ್‌ ಹೇಳಿದರೆ, ಟೆಕೆಟ್ ತಗೋತೇನೆ, ಕೋಳಿಗೆ ಸೀಟ್‌ ಮಾಡಿಕೊಡಿ ಎಂದು ಮಹಿಳೆ ಪಟ್ಟು ಹಿಡಿದಿದ್ದು ಕಂಡಕ್ಟರ್‌ ಪಿತ್ತ ನೆತ್ತಿಗೇರಲು ಕಾರಣವಾಯಿತು. ಪ್ರಯಾಣಿಕರು, ಸಾರಿಗೆ ಸಂಸ್ಥೆ ಅಧಿಕಾರಿಗಳು ನಿಯಮವನ್ನು ಸಾಕಷ್ಟು ತಿಳಿ ಹೇಳಿದ ಬಳಿಕ ಮಹಿಳೆ ಟಿಕೆಟ್‌ ಪಡೆದರಾದರೂ ಕೊನೆ ವರೆಗೂ ಗೊಣಗುತ್ತಲೇ ಪ್ರಯಾಣ ಮುಂದುವರಿಸಿದಳು.

ಆಗಿದ್ದೇನು?: ಹಗರಿಬೊಮ್ಮನಹಳ್ಳಿ ಘಟಕದಿಂದ ಹೊಸಪೇಟೆ ಮೂಲಕ ಧರ್ಮಸ್ಥಳಕ್ಕೆ ಹೋಗುವ ಬಸ್ಸಿನಲ್ಲಿ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಮಹಿಳೆಯೋರ್ವಳು ದೊಡ್ಡ ರಟ್ಟಿನ ಬಾಕ್ಸ್‌ನೊಂದಿಗೆ ಹತ್ತಿದ್ದಾರೆ. ಇನ್ನೇನು ಬಸ್ ಚಲಿಸಬೇಕು ಎನ್ನುವಷ್ಟರಲ್ಲಿ ಕೋಳಿ ಕೂಗಿ ಸದ್ದು ಮಾಡಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಅಚ್ಚರಿಯಾಗಿದೆ. ಇದೇನು ಬಸ್ಸಿನಲ್ಲಿ ಕೋಳಿ ಸದ್ದು ಎಂದು ತಿರುಗಿ ನೋಡಿದರೂ ಕೋಳಿ ಮಾತ್ರ ಕಾಣಲಿಲ್ಲ. ಸ್ವಲ್ಪ ಹೊತ್ತು ಸಾವಧಾನದಿಂದ ನೋಡಿದಾಗ ರಟ್ಟಿನ ಬಾಕ್ಸಿನಲ್ಲಿ ಕೋಳಿ ಮಿಸುಕಾಡುವ ಸದ್ದು ಕೇಳಿದೆ. ಆಗ ಎಲ್ಲರಿಗೂ ಖಚಿತವಾಗಿದೆ. ಕೋಳಿಯನ್ನು ರಟ್ಟಿನ ಬಾಕ್ಸ್‌ನಲ್ಲಿ ಒಯ್ಯುತ್ತಿದ್ದಾರೆ ಎಂದರು.

ಬಸ್ ಕಂಡಕ್ಟರ್, ಕೋಳಿ ಯಾರದು ಎಂದು ಕೇಳಿದಾಗ, ಕೂಡ್ಲಿಗಿಯಿಂದ ಜಗಳೂರಿಗೆ ತನ್ನ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಮಹಿಳೆ ಕೋಳಿ ನನ್ನದು ಎಂದು ಹೇಳಿದ್ದಾರೆ. ಆಗ ಕೋಳಿಗೆ ಕಂಡಕ್ಟರ್ ಟಿಕೆಟ್‌ ಕೇಳಿದ್ದಾನೆ. ನೀನು ಯಾವ್ ಸೀಮೆ ಕಂಡಕ್ಟರಯ್ಯ ಕೋಳಿಗ್ಯಾರಾದ್ರೂ ಟಿಕೆಟ್ ಕೇಳ್ತಾರಾ? ಅಂದಾಗ ಅಮ್ಮೋ.. ರೂಲ್ಸ್ ಪ್ರಕಾರ ಕೋಳಿಗೆ ಹಾಫ್ ಟಿಕೆಟ್ ತೆಗೆದುಕೊಳ್ಳಲೇಬೇಕು. ಇಲ್ಲಾಂದ್ರೆ ಕೋಳಿ ಹಿಡಕೊಂಡು ಕೆಳಗಿಳಿ ತಾಯಿ ಅನ್ನುತ್ತಿದ್ದಂತೆ, ಮಹಿಳೆಯು ಸರಿ ಕಂಡಕ್ಟರೇ.. ಟಿಕೆಟ್ ತಗಂತೀನಿ ಆದ್ರೆ ಕೋಳಿಗೆ ಸೀಟು ಕೊಡಲೇಬೇಕು ಎಂದು ಕಂಡಕ್ಟರ್ ಜತೆ ವಾಗ್ವಾದಕ್ಕಿಳಿದಳು. ಕೋಳಿ ಜಗಳ ಜೋರಾಯಿತು. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಕೋಳಿ ತಂದಿದ್ದ ಮಹಿಳೆಗೆ ರೂಲ್ಸ್ ಬಗ್ಗೆ ತಿಳಿ ಹೇಳಿದರೂ ಜಗಳ ಮುಂದುವರಿಸಿದಳು. ಕೊನೆಗೆ ಕಂಡಕ್ಟರ್ ಹಾಫ್‌ ಟಿಕೆಟ್ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಇಳಿದುಕೊಳ್ಳಿ ಎಂದು ಎಚ್ಚರಿಸಿದ್ದಾನೆ. ಪ್ರಯಾಣಿಕರಂತೂ ಕೋಳಿ ಜಗಳ ನೋಡುತ್ತಾ ಪುಕ್ಕಟೆ ಮನರಂಜನೆ ಪಡೆದರು. ಈ ಘಟನೆ ಕಂಡು ಬಸ್ ನಿಲ್ದಾಣದಲ್ಲಿದ್ದ ಜನತೆ ಸಹ ಯಾಕೆ ಜಗಳ ನಡೆಯುತ್ತದೆ ಎಂದು ಹೋಗಿ ಅವರೂ ಪುಕ್ಕಟೆ ಕೋಳಿಜಗಳವನ್ನು ಆಸ್ವಾದಿಸಿದರು. ಬಸ್ಸು ಕೂಡ್ಲಿಗಿಯಿಂದ ಕೊಟ್ಟೂರು ಕಡೆಗೆ ಸಾಗಿದರೂ ಕಂಡಕ್ಟರ್ ಹಾಗೂ ಮಹಿಳೆ ಜಗಳ ನಿಲ್ಲದೆ ಸಾಗಿತ್ತು.ಕೊನೆಗೂ ಕೋಳಿಗೂ ಹಾಫ್‌ ಟಿಕೇಟ್ ಹರಿಯುವಲ್ಲಿ ಕಂಡಕ್ಟರ್ ಯಶಸ್ವಿಯಾದ ಮಹಿಳೆ ಮಾತ್ರ ಜಗಳೂರು ತಲುಪುವವರೆಗೂ ಕಂಡಕ್ಟರ್ ನನ್ನು ಶಪಿಸುತ್ತಿದ್ದಳು. ಬಸ್ ಪುಲ್ ರಶ್ ಇದ್ದಿದ್ದರಿಂದ ಲಗೇಜ್ ಇಡುವ ಸ್ಥಳದಲ್ಲಿಯೇ ಕುಳಿತು ಕೋಳಿ ಕೂಡ್ಲಿಗಿಯಿಂದ ಜಗಳೂರಿನವರೆಗೆ ಪ್ರಯಾಣ ಬೆಳೆಸಿತು.