ಅನಿರೀಕ್ಷಿತ ವಿದ್ಯುತ್ ವ್ಯತ್ಯಯಗಳಿಗೆ ಕಡಿವಾಣ ಹಾಕಿ, ಸುರಕ್ಷಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಕಲ್ಪಿಸುವ ಉದ್ದೇಶದಿಂದ ಹೆಸ್ಕಾಂ ಹುಬ್ಬಳ್ಳಿ ನಗರದಲ್ಲಿ ವಿದ್ಯುತ್ ವಿತರಣಾ ಜಾಲದ ಸಮಗ್ರ ದುರಸ್ತಿ ಮತ್ತು ನಿರ್ವಹಣಾ ಅಭಿಯಾನ ಆರಂಭಿಸಿದೆ.
ಹುಬ್ಬಳ್ಳಿ:
ಅನಿರೀಕ್ಷಿತ ವಿದ್ಯುತ್ ವ್ಯತ್ಯಯಗಳಿಗೆ ಕಡಿವಾಣ ಹಾಕಿ, ಸುರಕ್ಷಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಕಲ್ಪಿಸುವ ಉದ್ದೇಶದಿಂದ ಹೆಸ್ಕಾಂ ಹುಬ್ಬಳ್ಳಿ ನಗರದಲ್ಲಿ ವಿದ್ಯುತ್ ವಿತರಣಾ ಜಾಲದ ಸಮಗ್ರ ದುರಸ್ತಿ ಮತ್ತು ನಿರ್ವಹಣಾ ಅಭಿಯಾನ ಆರಂಭಿಸಿದೆ.ಅಭಿಯಾನದ ಮೊದಲ ಹಂತದಲ್ಲಿ ನವೆಂಬರ್ ತಿಂಗಳಿನಲ್ಲಿ ನಗರದ 29 ವಿದ್ಯುತ್ ಫೀಡರ್ಗಳ ನಿರ್ವಹಣೆ ಕೈಗೆತ್ತಿಕೊಳ್ಳಲಾಗಿದೆ. ವಿಶ್ವೇಶ್ವರಯ್ಯ ನಗರ, ಸಿದ್ಧಾರೂಢ ಮಠದ ಸುತ್ತಮುತ್ತಲಿನ ಪ್ರದೇಶ, ನವನಗರ, ತಾರಿಹಾಳ, ಉಣಕಲ್ ನಗರ ಹಾಗೂ ವಿದ್ಯುತ್ ನಗರ ಸೇರಿದಂತೆ ವಿವಿಧ ಬಡಾವಣೆಗಳ ಫೀಡರ್ಗಳನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಿದ್ಯುತ್ ಪರಿವರ್ತಕಗಳ ಸುಸ್ಥಿತಿ ಪರಿಶೀಲನೆ, ಕಂಬಗಳ ಬಲವರ್ಧನೆ, ಸಡಿಲಗೊಂಡ ತಂತಿಗಳ ದುರಸ್ತಿ, ವಿದ್ಯುತ್ ಮಾರ್ಗಕ್ಕೆ ಅಡ್ಡಿಯಾಗುವ ಮರದ ಕೊಂಬೆಗಳ ತೆರವು ಹಾಗೂ ಹಾಳಾದ ಪರಿಕರಗಳ ಬದಲಾವಣೆ ಮಾಡಲಾಗುತ್ತಿದೆ. ಎಲ್ಟಿ, ಎಚ್ಟಿ ಮಾರ್ಗ, ಜಂಪ್ ಮತ್ತು ಇನ್ಸುಲೇಟರ್ಗಳನ್ನೂ ಪರಿಶೀಲಿಸಿ ಅಗತ್ಯ ದುರಸ್ತಿ ಕೈಗೊಳ್ಳಲಾಗುತ್ತಿದೆ.ವಿದ್ಯುತ್ ದೋಷ ಕಾಣಿಸಿಕೊಂಡ ಬಳಿಕ ದುರಸ್ತಿ ಮಾಡುವ ಬದಲು, ಸಂಭಾವ್ಯ ತಾಂತ್ರಿಕ ಸಮಸ್ಯೆಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಿ ನಿವಾರಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇದರಿಂದ ಅನಿರೀಕ್ಷಿತ ವಿದ್ಯುತ್ ಕಡಿತ ತಗ್ಗಿಸುವ ಜತೆಗೆ ವಿತರಣಾ ಜಾಲದ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಹೆಚ್ಚಲಿದೆ ಎಂದು ಹೆಸ್ಕಾಂ ತಿಳಿಸಿದೆ.
ನಿರ್ವಹಣಾ ಕಾರ್ಯದ ವೇಳೆ ಕೆಲಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಉತ್ತಮ ವಿದ್ಯುತ್ ಸೇವೆಗಾಗಿ ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಮನವಿ ಮಾಡಿದೆ.