ಸಾರಾಂಶ
ಅರಹತೊಳಲು ಕೆ.ರಂಗನಾಥ
ಹೊಳೆಹೊನ್ನೂರು : ಕಳೆದ ವರ್ಷ ಅಡಿಕೆ ಉಪ ಉತ್ಪನ್ನಗಳ ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದ ಖೇಣಿದಾರರು ಈ ಬಾರಿ ಹಸಿ ಅಡಿಕೆ ಖೇಣಿ ಮಾಡಲು ಹಿಂದೇಟು ಹಾಕುತ್ತಿದ್ದು, ಅಡಕೆ ಬೆಳೆಗಾರರು ನಷ್ಟ ಭಯದಲ್ಲಿದ್ದಾರೆ.
ಹಿಂದಿನ ವರ್ಷ ಈ ಸಮಯಕ್ಕಾಗಲೇ ಶೇ.70 ಹಸಿ ಅಡಿಕೆ ಖೇಣಿ ಮುಗಿದಿತ್ತು. ಸ್ವಲ್ಪ ಅನುಕೂಲ ಇರುವ ಶೇ.30 ಅಡಕೆ ಬೆಳೆಗಾರರು ಜೂನ್–ಜುಲೈವರೆಗೂ ಕಾದುನೋಡಿ ಹೆಚ್ಚು ಒಣಗಿದ ರಾಶಿ ಅಡಿಕೆ ಕೊಡುವ ಖೇಣಿದಾರರಿಗೆ ತೋಟವನ್ನು ಗುತ್ತಿಗೆ ನೀಡಿದ್ದರು. ಆದರೆ, ಈ ಬಾರಿ ಯಾವ ಖೇಣಿದಾರನೂ ಹಸಿ ಅಡಕೆ ಖೇಣಿ ಮಾಡಲು ಮುಂದಾಗುತ್ತಿಲ್ಲ. ಇದರಿಂದ ಅಡಕೆ ಬೆಳೆಗಾರರು ತಮ್ಮ ತೋಟಗಳನ್ನು ಖೇಣಿ ನೀಡಲಾರದೇ ಅವಶ್ಯಕತೆಗಳಿಗೆ ಹಣ ದೊರೆಯದೇ ತ್ರಿಶಂಕು ಸ್ಥಿತಿಯಲ್ಲಿ ಇರುವಂತಾಗಿದೆ.
ಕಳೆದ ವರ್ಷ 1 ಕ್ವಿಂಟಾಲ್ ಹಸಿ ಅಡಕೆಗೆ 13, 13.5 ಅಥವಾ 14 ಕೇಜಿ ಒಣ ರಾಶಿ ಅಡಕೆ ನೀಡುವಂತೆ ರೈತರು ಖೇಣಿದಾರರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಅಡಿಕೆ ಬೆಲೆ ಸ್ಥಿರವಾಗಿದ್ದರೂ ಅದರ ಉಪ ಉತ್ಪನ್ನಗಳಾದ ಗೊರಬಲು, ಸಿಪ್ಪೇಗೋಟು, ಅಡಿಕೆಯ ಮಿಶಿನ್ ಪುಡಿ, ದ್ವಿತೀಯ ದರ್ಜೆ ಅಡಿಕೆ ಬೆಲೆ ಪಾತಾಳಕ್ಕೆ ಕುಸಿದಿತ್ತು. ಇದರಿಂದ ಹಲವಾರು ಖೇಣಿದಾರರು ನಷ್ಟ ಅನುಭವಿಸುವುದರ ಜೊತೆಗೆ ಹೊಲ ಮನೆಯನ್ನು ಕಳೆದುಕೊಂಡಿದ್ದರು. ಆದ್ದರಿಂದ ಖೇಣಿದಾರರೆಲ್ಲಾ ಒಂದಾಗಿ ಅಡಿಕೆ ಖೇಣಿದಾರರ ಸೌಹಾರ್ದ ಸಹಕಾರ ಸಂಘ ಸ್ಥಾಪಿಸಿ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಿದ್ದಾರೆ. ಈ ಕಾರಣದಿಂದ ಯಾವ ಖೇಣಿದಾರನೂ ಅಡಿಕೆ ಬೆಳೆಗಾರರ ಬಳಿ ಸುಳಿಯುತ್ತಿಲ್ಲ. ಕೆಲವು ಬಡ ರೈತರು ತೋಟವನ್ನು ಖೇಣಿ ನೀಡಲು ಹೋದರೆ ಕಳೆದ ವರ್ಷಕ್ಕಿಂತ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ.
ಪ್ರತಿಭಟನೆಗೆ ಮುಂದಾದ ರೈತರು:
ಕೆಲವು ರೈತರು ಖೇಣಿದಾರರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಈಗಾಗಲೇ ಶಿಕಾರಿಪುರ ಸೇರಿದಂತೆ ಹಲವು ಕಡೆಗಳಲ್ಲಿ ಧರಣಿ ಮಾಡಲಾಗಿದೆ. ಸರ್ಕಾರ ಮಧ್ಯ ಪ್ರವೇಶಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಆದರೆ, ಇದು ವಾಸ್ತವದಲ್ಲಿ ಜರಗುವ ಕೆಲಸಲ್ಲ. ಕಾರಣ ಸರ್ಕಾರ ಯಾವ ಖೇಣಿದಾರರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಕಟುಸತ್ಯ.
ಸ್ವತಃ ಸಂಸ್ಕರಣೆ ಸುಲಭವಲ್ಲ
ಖೇಣಿದಾರರ ನಿರ್ಣಯದಿಂದ ಕೆಲವು ರೈತರು ತಮ್ಮ ತಮ್ಮ ತೋಟದ ಅಡಿಕೆಯನ್ನು ತಾವೇ ಕೊಯ್ದು, ಸುಲಿದು, ಬೇಯಿಸಿ, ಒಣಗಿಸಿ ಮಾರಾಟ ಮಾಡುವ ನಿರ್ಧಾರ ಮಾಡಿದ್ದಾರೆ. ಆದರೆ, ರೈತರು ತಮ್ಮ ತೋಟದ ಅಡಿಕೆಯನ್ನು ತಾವೇ ಸಂಸ್ಕರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕಾಗಿ ಸಾಕಷ್ಟು ಸ್ಥಳಾವಕಾಶ ಬೇಕು. ಅಡಕೆ ಕೊಯ್ಯುವ ಮತ್ತು ಮನೆಗೆ ತಂದು ಕೊಡುವ ಕೂಲಿ ಆಳುಗಳು, ಅಡಕೆ ಸುಲಿಯುವ ಯಂತ್ರ, ವಿದ್ಯುತ್ ಸಂಪರ್ಕದ ಜೊತೆಗೆ ಹಲವಾರು ಉಪಕರಣಗಳು ಬೇಕು. ಇವೆಲ್ಲವನ್ನೂ ಹೊಂದಿಸಿಕೊಳ್ಳಲು ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ.