ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಸಂಸದ ಗೋವಿಂದ ಕಾರಜೋಳ ಅವರು ತಮ್ಮ ಕಾರ್ಯನಿರ್ವಹಣೆಗೆ ಹೈಟೆಕ್ ಕಾರ್ಯಾಲಯವೊಂದನ್ನು ರೂಪಿಸಿಕೊಂಡಿದ್ದು ಶುಕ್ರವಾರ ಪ್ರಮುಖ ಮಠಾಧೀಶರು ಪ್ರವೇಶಿಸುವುದರ ಮೂಲಕ ಕಚೇರಿ ಆರಂಭಕ್ಕೆ ಅಧಿಕೃತ ಮುದ್ರೆ ಒತ್ತಿದರು.ಜೆಸಿಆರ್ ಬಡಾವಣೆಗೆ ಹೊಂದಿಕೊಂಡಂತೆ ರಾಷ್ಟ್ರೀಯ ಹೆದ್ದಾರಿ 4ರ ಸರ್ವೀಸ್ ರಸ್ತೆ ಪಕ್ಕದಲ್ಲಿಯೇ ಇದ್ದ ಲೋಕೋಪಯೋಗಿ ಇಲಾಖೆಯ ಹಳೇ ಕಟ್ಟಡವನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿ ಹೈಟೆಕ್ ಸ್ಪರ್ಷ ನೀಡಲಾಗಿದೆ. ವಿಶಾಲವಾದ ಹಾಲ್, ಸಿಬ್ಬಂದಿ ಕಾರ್ಯನಿರ್ವಹಿಸಲು ವಿಶಾಲವಾದ ಕೊಠಡಿ, ಮಹಡಿ ಮೇಲೊಂದು ವಿಶ್ರಾಂತಿ ತಾಣ. ಕಚೇರಿ ಆವರಣದಲ್ಲಿ ಐನೂರು ಕುರ್ಚಿಗಳ ಹಾಕಿ ಕಾರ್ಯಕ್ರಮ ಮಾಡಿಕೊಳ್ಳುವಷ್ಟು ವಿಶಾಲವಾದ ಜಾಗ ಇದೆ.
ಕಚೇರಿ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಈ ಮೊದಲು ಇದ್ದ ಕಚೇರಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿದ್ದು ಜನತೆಗೆ ಹೋಗಿ ಬರಲು ತೊಂದರೆ ಆಗುತ್ತಿತ್ತು. ಹಾಗಾಗಿ ಎಲ್ಲರಿಗೂ ಸಮೀಪವಾಗುವಂತೆ ಲೋಕೋಪಯೋಗಿ ಇಲಾಖೆ ಕಟ್ಟಡ ಪಡೆಯಲಾಗಿದೆ. ಕಾರ್ಯನಿರ್ವಹಿಸಲು ಪ್ರಶಾಂತವಾದ ಜಾಗ ಇದಾಗಿದೆ ಎಂದು ತಿಳಿಸಿದರು.ಲೋಕಸಭಾ ಅಧಿವೇಶನ ಮುಗಿದ ಬಳಿಕ ಕಳೆದ 20 ದಿನಗಳಿಂದ ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡಿ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸುವ, ಅಭಿವೃದ್ಧಿಯ ದೃಷ್ಟಿಯಿಂದ ಹಲವು ಸಭೆಗಳನ್ನು ನಡೆಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ನನ್ನದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್‍ರನ್ನು ಭೇಟಿ ಮಾಡಿ ಅನುದಾನ ಬಿಡಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.
ಚಿತ್ರದುರ್ಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಕೇಂದ್ರ ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್‍ರನ್ನು ಭೇಟಿ ಮಾಡಿ ಚಿತ್ರದುರ್ಗದ ಕಲ್ಲಿನ ಕೋಟೆ, ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ, ಜೋಗಿಮಟ್ಟಿ ವಿಹಾರಧಾಮ, ಚಂದ್ರವಳ್ಳಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ₹20 ಕೋಟಿ ಅನುದಾನ ಕೋರಿದ್ದೇನೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ 2025-26ನೇ ಶೈಕ್ಷಣಿಕ ವರ್ಷದಿಂದ ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದರು.ಚಿತ್ರದುರ್ಗದಿಂದ-ಚಳ್ಳಕೆರೆ-ಪಾವಗಡ ಮುಖಾಂತರ ಆಂಧ್ರಪ್ರದೇಶದ ಪೆನುಕೊಂಡವರೆಗಿನ ರಾಜ್ಯಹೆದ್ದಾರಿ 178ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡುವಂತೆ ಸಚಿವ ಘಡ್ಕರಿ ಅವರಲ್ಲಿ ಮನವಿ ಮಾಡಲಾಗಿದೆ. ಚಳ್ಳಕೆರೆ ನಗರ ಪರಿಮಿತಿಯಲ್ಲಿ 7ಕಿಮೀ ಉದ್ದದ ಹೆದ್ದಾರಿಯನ್ನು ನಾಲ್ಕು ಪಥವನ್ನಾಗಿ ಮಾಡಲು ಅನುದಾನ ಬಿಡುಗಡೆಗೆ ಕೋರಲಾಗಿದೆ.
ಮೂಡಿಗೆರೆಯಿಂದ-ಚಿಕ್ಕಮಗಳೂರು-ಕಡೂರು-ಹೊಸದುರ್ಗ-ಹೊಳಲ್ಕೆರೆಯವರೆಗೆ ಈಗಾಗಲೇ ಅಭಿವೃದ್ಧಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯನ್ನು ದಾವಣಗೆರೆ ತಾಲೂಕು ಆನಗೋಡು ವರೆಗೆ ವಿಸ್ತರಿಸಲು ಮನವಿ ಮಾಡಲಿಗಿದೆ. ಸಿರಾ ತಾಲೂಕು ತಾವರಕೆರೆ ಬಳಿ ಹಾಲಿ ಇರುವ ಕೆಳಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು ಅದನ್ನು ಸರಿಪಡಿಸುವಂತೆ ವಿನಂತಿಸಲಾಗಿದೆ ಎಂದರು.ಪಾವಗಡ-ಮಡಕಶಿರಾ ಹೊಸ ಬ್ರಾಡ್‍ಗೇಜ್ ನಿರ್ಮಾಣಕ್ಕೆ ₹265 ಕೋಟಿ ಅನುದಾನ ಬಿಡುಗಡೆಯಾಗಿದೆ. ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ₹150 ಕೋಟಿ ಅನುದಾನ ಬಂದಿದೆ. ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಚಳ್ಳಕೆರೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣ ಮಾಡಲು 15 ಎಕರೆ ಸರ್ಕಾರಿ ಜಮೀನು ಹಾಗೂ ಚಿತ್ರದುರ್ಗ ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲು ಸುಮಾರು 5 ಎಕರೆ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಸುಮಾರು ₹15 ಕೋಟಿ ರು. ಅನುದಾನವನ್ನು ಸೈನ್ಸ್ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶದಿಂದ ಕಾಯ್ದಿರಿಸಲಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಈ ವೇಳೆ ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ವಕ್ತಾರ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.