ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮುಂದಿನ ಒಂದು ವರ್ಷದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡುವುದರ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಂದ್ರಪಾಟೀಲ್ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ಮೂಲ ಧ್ಯೇಯವಾಗಿದೆ. ಪ್ರತಿಯೊಂದು ಶಾಲೆಗೂ ಟ್ಯಾಬ್ ನೀಡಲಾಗುತ್ತಿದೆ. ಶಿಕ್ಷಕರು ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದರು.
ತಾಲೂಕಿನ ವಿಜ್ಞಾನ ಕಾಲೇಜು ಸೇರಿದಂತೆ ಹೊಸ ಶಿಕ್ಷಣ ಸಂಕಿರಣ ಕಟ್ಟಡವನ್ನು ನಿರ್ಮಿಸಲು ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಗೆ ಮುಂದಾಗುತ್ತಿದ್ದು, ಹೊಸ ಅವಿಷ್ಕಾರದ ತಕ್ಕಂತೆ ಶಿಕ್ಷಕರು ಬದಲಾಗಬೇಕಿದೆ ಎಂದರು.ಪ್ರಪಂಚದ ಸ್ಪರ್ಧಾತ್ಮಕ ಯುಗದಲ್ಲಿ ಚಾಲೆಂಜ್ ಜೊತೆಗೆ ನಮ್ಮನ್ನ ನಾವು ತೊಡಗಿಸಿಕೊಂಡು ಭವಿಷತ್‌ನ ರಾಷ್ಟ್ರ ಮತ್ತು ಪ್ರಜೆಗಳನ್ನು ನಿರ್ಮಾಣ ಮಾಡಲು ನಾವೆಲ್ಲರೂ ಅಳಿಲು ಸೇವೆಗೆ ಮುಂದಾಗುವುದರ ಮೂಲಕ ಸಾಧನೆಯ ಪ್ರಪಂಚದಲ್ಲಿ ಭಾರತ ದೇಶವನ್ನು ಮುಂಚೂಣಿಗೆ ತರಲು ಶ್ರಮಿಸಬೇಕೆಂದು ಕರೆ ನೀಡಿದರು.
ನಿರ್ಗಮಿತ ಬಿಇಒ ಚಂದ್ರಪಾಟೀಲ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿಕ್ಷಕರ ಸಹಕಾರದಿಂದ ತಾಲೂಕಿನಲ್ಲಿ ಉತ್ತಮ ಸೇವೆ, ಶಾಸಕರು ನೀಡಿದ ಸಲಹೆಗಳು ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು ಎಂದರು.ತಾಲೂಕು ಮಟ್ಟದ ಅಧಿಕಾರಿಗಳು ಜೊತೆಗೂಡಿದರೇ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಬಹುದು ಎನ್ನುವ ಕಿವಿ ಮಾತನ್ನು ಹೇಳಿದ್ದರು. ಅಧಿಕಾರಿಗಳ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಪ್ರತಿಫಲದಿಂದಾಗಿ ಮೂರು ಮೊರಾರ್ಜಿ ಶಾಲೆಗಳ ಅನುಮತಿ ಪಡೆಯಲು ಸಹಾಯಕವಾಯಿತು. ಸರ್ಕಾರಿ ಶಾಲೆಗಳ ವಿದ್ಯುತ್ ಸಮಸ್ಯೆ ಬಗೆಹರಿಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಇದೇ ವೇಳೆ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕರಿಂದ ಚಂದ್ರ ಪಾಟೀಲ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವಿ.ಈ ಉಮಾ ಅಧಿಕಾರ ವಹಿಸಿಕೊಂಡರು.ಕಾರ್ಯಕ್ರಮದಲ್ಲಿ ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಚೆಸ್ಕಾಂ ಎಇಇ ಎಚ್.ಎಸ್ ಪ್ರೇಮ್‌ಕುಮಾರ್, ಲೋಕಪಯೋಗಿ ಎಇಇ ಹರೀಶ್‌ಕುಮಾರ್, ಎಇ ಸೋಮಶೇಖರ್, ಸಮಾಜಕಲ್ಯಾಣ ಅಧಿಕಾರಿ ಸಂತೋಷ್ ಕುಮಾರ್, ಕ್ಷೇತ್ರ ಸಮಾನ್ವಯಾಧಿಕಾರಿ ಎಂ.ಕೆ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.