ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಡ್ಯಾಂನಿಂದ ನೀರು ತರುವ ವಿಷಯವೀಗ ಬೆಳಗಾವಿ-ಧಾರವಾಡ ಜಿಲ್ಲೆಯ ಮಧ್ಯೆ ಪ್ರತಿಷ್ಟೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ.ಕುಡಿಯಲು ನೀರು ಒಯ್ಯುವುದಾದರೆ ನಮ್ಮ ಅಭ್ಯಂತರವಿಲ್ಲ, ಕೈಗಾರಿಕೆಗಳಿಗೆ ಮಾತ್ರ ಯಾವುದೇ ಕಾರಣಕ್ಕೂ ನಾವು ನೀರು ಒಯ್ಯಲು ಬಿಡುವುದಿಲ್ಲ ಎಂದು ಬೆಳಗಾವಿ ಜಿಲ್ಲೆಯ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವುದು ಧಾರವಾಡ ಜಿಲ್ಲೆಯ ಜನರನ್ನಷ್ಟೇ ಅಲ್ಲ ಈ ನೀರು ನಂಬಿ ಇಲ್ಲಿ ಉದ್ಯೋಗ ಆರಂಭಿಸಲು ಮುಂದಾಗಿರುವ ಉದ್ಯಮಿಗಳಲ್ಲೂ ಕಳವಳ ಹುಟ್ಟಿಸಿದೆ.
ಈ ನೀರು ತರುವ ಯೋಜನೆ ಕುರಿತಂತೆ ಸರ್ಕಾರ ಬೆಳಗಾವಿ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಈ ಪ್ರತಿರೋಧಕ್ಕೆ ಕಾರಣ. ಡ್ಯಾಮಿನಿಂದ ನೀರು ತರಲು ಏಕಾಏಕಿ ಪೈಪ್‍ಲೈನ್ ಕಾರ್ಯ ಬಲುಜೋರಿನಿಂದ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಜನ ಎದ್ದು ಕುಳಿತು ಸರ್ಕಾರದ ಈ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.₹300 ಕೋಟಿ ಯೋಜನೆ
ಹುಬ್ಬಳ್ಳಿ-ಧಾರವಾಡ ಜಿಲ್ಲೆಯ 6 ಸಾವಿರ ಎಕರೆ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರಲ್ಲಿನ 1 ಸಾವಿರ ಎಕರೆ ಪ್ರದೇಶಕ್ಕೆ ನೀರಿನ ಅವಶ್ಯಕತೆ ಇದೆ. ಇದಕ್ಕಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್‌ನಲ್ಲಿರುವ ಘಟಪ್ರಭಾ ನದಿಗೆ ಕಟ್ಟಲಾಗಿರುವ ಅಣೆಕಟ್ಟೆಯಿಂದ ನೀರು ತರಲು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯೋಜನೆ ರೂಪಿಸಿದೆ. ಹಿಡಕಲ್ ಡ್ಯಾಮಿಗೆ ರಾಜಾ ಲಖಮಗೌಡ ಜಲಾಶಯ ಎಂದು ಕೂಡ ಕರೆಯಲಾಗುತ್ತದೆ. 51.16 ಟಿಎಂಸಿ ಅಡಿ ಸಾಮರ್ಥ್ಯ ಇರುವ ಡ್ಯಾಮಿನಿಂದ ಬರೋಬ್ಬರಿ 45 ಎಂಎಲ್‌ಡಿ ನೀರನ್ನು ಕೈಗಾರಿಕಾ ಪ್ರದೇಶಕ್ಕೆ ಬಳಸುವ ಯೋಜನೆ ಕೆಐಎಡಿಬಿಯದ್ದು. ಇದಕ್ಕೆ ಸರ್ಕಾರದ ಮಟ್ಟದಲ್ಲೂ ಹಸಿರು ನಿಶಾನೆ ಈಗಾಗಲೇ ಸಿಕ್ಕಿದೆ. 150 ಕಿಲೋ ಮೀಟರ್ ಅಂತರದಲ್ಲಿರುವ ಡ್ಯಾಮಿನಿಂದ ನೀರು ತರುವ 300 ಕೋಟಿ ಯೋಜನೆಗೆ ಪೈಪ್‌ಲೈನ್ ಅಳವಡಿಸುವ ಕೆಲಸ ಪ್ರಾರಂಭವಾಗಿದೆ.ನಮಗೇ ನೀರು ಸಾಲುತ್ತಿಲ್ಲ
ಈ ಡ್ಯಾಮಿನಿಂದಲೇ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಬೆಳಗಾವಿ ನಗರದಲ್ಲಿ 58 ವಾರ್ಡ್‌ಗಳಿವೆ. ಈಗಲೇ ಕೆಲ ವಾರ್ಡ್‌ಗಳಿಗೆ ಏಳೆಂಟು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಹಿಡಕಲ್ ಡ್ಯಾಮಿನಿಂದ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡಬಾರದು ಎಂದು ಬೆಳಗಾವಿಯ ಸಾಮಾಜಿಕ ಸಂಘಟನೆಗಳು ಹೋರಾಟಕ್ಕಿಳಿದಿವೆ.ನಮ್ಮ ನೀರು ನಮ್ಮ ಹಕ್ಕು ಎಂಬ ಆಂದೋಲನ ಮಾಡುತ್ತಿವೆ. ಜತೆಗೆ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಜಗದೀಶ ಶೆಟ್ಟರ ಸೇರಿದಂತೆ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು ಆಗಿದೆ. ನೀರು ಕೊಟ್ಟರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿವೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಒಟ್ಟಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂಬುದು ಪ್ರಜ್ಞಾವಂತರ ಸಲಹೆ.ಅಗತ್ಯ ಸಹಕಾರಕೈಗಾರಿಕೆಗಳು ಬರಬೇಕಾದರೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಕೈಗಾರಿಕೆಗಳು ಬರಬೇಕೆಂದು ನಾವೇ ಆಗ್ರಹಿಸುತ್ತೇವೆ. ಆದಕಾರಣ ಕರ್ನಾಟಕದ ಹಿತದೃಷ್ಟಿಯಿಂದ ಕೈಗಾರಿಕೆಗಳಿಗೆ ನೀರು ತರಲು ಸರ್ಕಾರ ಅಗತ್ಯ ಸಹಕಾರ ನೀಡಿ, ಕೆಲಸ ಮಾಡಬೇಕು.
ಮಹೇಶ ಟೆಂಗಿನಕಾಯಿ, ಶಾಸಕರುನೀರಿಗೆ ಸಮಸ್ಯೆಬೆಳಗಾವಿ ನಗರ ಸೇರಿದಂತೆ 100 ಹಳ್ಳಿಗಳಿಗೆ ಹಿಡಕಲ್ ಡ್ಯಾಮಿನಿಂದ ನೀರು ಪೂರೈಕೆ ಮಾಡಲಾಗುತ್ತದೆ. ಕೈಗಾರಿಕೆಗಳಿಗೆ ಪೂರೈಕೆ ಮಾಡಿದರೆ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಆದಕಾರಣ ಕೈಗಾರಿಕೆಗಳಿಗೆ ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣಾ ಘಟಕ)ದಿಂದ ನೀರನ್ನು ಬಳಸಿಕೊಳ್ಳಲಿ. ಬೇರೆ ಜಲಮೂಲ ಹುಡುಕಿಕೊಳ್ಳಲಿ.
ಅಶೋಕ ಚಂದರಗಿ, ಕನ್ನಡ ಹೋರಾಟಗಾರ, ಬೆಳಗಾವಿ